ನವದೆಹಲಿ: ಮಾಲ್ಡೀವ್ಸ್ ಸಚಿವರೊಬ್ಬರು ಭಾರತದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಭಾರತ ಮತ್ತು ಮಾಲ್ಡೀವ್ಸ್ ನಡುವೆ ಉದ್ವಿಗ್ನತೆ ಹೆಚ್ಚಿದೆ. ಈ ವಿಚಾರ ಆರಂಭಗೊಂಡಿರುವುದು ಪ್ರಧಾನಿ ಮೋದಿ ಅವರು ಲಕ್ಷದ್ವೀಪಕ್ಕೆ (Lakshadweep) ಭೇಟಿ ನೀಡಿದ ಬಳಿಕ. ಭಾರತವು ಮಾಲ್ಡೀವ್ಸ್ ಅನ್ನು ಗುರಿಯಾಗಿಸಿಕೊಂಡಿದೆ ಎಂದು ಸಚಿವರೊಬ್ಬರು ಟ್ವೀಟ್ ಮೂಲಕ ಆರೋಪಿಸಿದ್ದರು. ಬೀಚ್ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮಾಲ್ಡೀವ್ಸ್ನೊಂದಿಗೆ ಸ್ಪರ್ಧಿಸುವಲ್ಲಿ ಭಾರತವು ಸವಾಲುಗಳನ್ನು ಎದುರಿಸುತ್ತಿದೆ ಎಂದು ಪರೋಕ್ಷವಾಗಿ ಟೀಕೆ ಮಾಡಿದ್ದರು. ಹೀಗಾಗಿ ಲಕ್ಷದ್ವೀಪ ಮತ್ತೊಂದು ಸಲ ಮುನ್ನೆಲೆಗೆ ಬಂದಿದೆ. ಏತನ್ಮಧ್ಯೆ, ಅದು ಭಾರತದ ಭಾಗವೇ ಆಗಿದ್ದ ಹೊರತಾಗಿಯೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಲ್ಲಿನ ಕ್ರಿಕೆಟ್ ಕ್ಷೇತ್ರವನ್ನು ನಿರ್ಲಕ್ಷಿಸಿದೆ ಎಂಬ ವಿಚಾರ ಇದೀಗ ಬಹಿರಂಗಗೊಂಡಿದೆ. ಅಲ್ಲಿನ ಕ್ರಿಕೆಟ್ಗೆ ಮಾನ್ಯತೆ ನೀಡುವಂತೆ ಆರು ವರ್ಷಗಳಿಂದ ಬೇಡಿಕೆ ಸಲ್ಲಿಸಲಾಗುತ್ತಿದ್ದರೂ ಈಡೇರಿಸಿಲ್ಲ ಎಂದು ಕ್ರಿಕೆಟ್ ವೆಬ್ಸೈಟ್ ಒಂದು ವರದಿ ಮಾಡಿದೆ.
ಆರು ವರ್ಷಗಳ ಹಿಂದೆ ಮಾಲ್ಡೀವ್ಸ್ ಕ್ರಿಕೆಟ್ ಕ್ಷೇತ್ರವನ್ನು ಬೆಂಬಲಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂದಾಗಿತ್ತು. ಇದಕ್ಕಾಗಿ ಲಕ್ಷದ್ವೀಪದ ಸಂಯೋಜನೆಯ ಮನವಿಯನ್ನು ನಿರ್ಲಕ್ಷಿಸಿದೆ. 2018ರಲ್ಲಿ ಬಿಸಿಸಿಐ ಕೆಲವು ಈಶಾನ್ಯ ರಾಜ್ಯಗಳು, ಪುದುಚೇರಿ, ಬಿಹಾರ ಮತ್ತು ಉತ್ತರಾಖಂಡ ಸೇರಿದಂತೆ ಒಂಬತ್ತು ತಂಡಗಳಿಗೆ ರಣಜಿ ಟ್ರೋಫಿಗಾಗಿ ಪೂರ್ಣ ಸದಸ್ಯರ ಸ್ಥಾನಮಾನ ನೀಡಿತು. ದುರದೃಷ್ಟವಶಾತ್, ಪುದುಚೇರಿ ಹೊರತುಪಡಿಸಿ ಲಕ್ಷದ್ವೀಪ ಕ್ರಿಕೆಟ್ ಅಸೋಸಿಯೇಷನ್ (ಎಲ್ಸಿಎ) ಸೇರಿದಂತೆ ಇತರ ಕೇಂದ್ರಾಡಳಿತ ಪ್ರದೇಶಗಳನ್ನು ನಿರ್ಲಕ್ಷಿಸಲಾಯಿತು.
ಆ ಸಮಯದಲ್ಲಿ ಲಕ್ಷದ್ವೀಪ ಕ್ರಿಕೆಟ್ ಅಸೋಸಿಯೇಶನ್ ಕಾರ್ಯನಿರ್ವಾಹಕ ಸದಸ್ಯರಾಗಿದ್ದ ರಂಜೀತ್ ಕಲ್ರಾ ನಿರಂತರ ಮನವಿ ಮಾಡಿದ್ದರು. ಆದರೆ, ಬಿಸಿಸಿಐ ಆಡಳಿತಗಾರರ ಸಮಿತಿಯಿಂದ ಮೌನವನ್ನು ವಹಿಸಿದ್ದರು. ಹತಾಶೆಯಿಂದ ಅವರು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರನ್ನು ಸಂಪರ್ಕಿಸಿ ಲಕ್ಷದ್ವೀಪದ ಆರು ಯುವ ಕ್ರಿಕೆಟಿಗರಿಗೆ ತೆಂಡೂಲ್ಕರ್ ಮಿಡ್ಲ್ಸೆಕ್ಸ್ ಗ್ಲೋಬಲ್ ಅಕಾಡೆಮಿಯಲ್ಲಿ ತರಬೇತಿ ಅವಕಾಶಗಳನ್ನು ಕೋರಿದ್ದರು. ಸಚಿನ್ ತೆಂಡೂಲ್ಕರ್ ಮಹತ್ವಾಕಾಂಕ್ಷಿ ಕ್ರಿಕೆಟಿಗರನ್ನು ತರಬೇತಿಗಾಗಿ ಪುಣೆಗೆ ಕಳುಹಿಸಿದ್ದರು.
ಆ ಅವಧಿಯಲ್ಲಿ ಕ್ರಿಕೆಟ್ ಅಸೋಸಿಯೇಷನ್ ಆಫ್ ಬಂಗಾಳದ (ಸಿಎಬಿ) ಜಂಟಿ ಕಾರ್ಯದರ್ಶಿ ಅವಿಶೇಕ್ ದಾಲ್ಮಿಯಾ ಇದನ್ನು ಗಮನಿಸಿ ಬಿಸಿಸಿಐಗೆ ಇಮೇಲ್ ಮೂಲಕ ಕಳವಳ ವ್ಯಕ್ತಪಡಿಸಿದ್ದರು. ಬಿಸಿಸಿಐ ಕೇವಲ ಅಂತಾರಾಷ್ಟ್ರೀಯ ಸಹಾಯದ ಮೇಲೆ ಗಮನ ಹರಿಸದೆ ದೇಶದೊಳಗಿನ ಪ್ರದೇಶಗಳಿಗೆ ಬೆಂಬಲವನ್ನು ವಿಸ್ತರಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.
ಇದನ್ನೂ ಓದಿ : Ranji Trophy 2024 : ಲಕ್ಷ್ಮಣ್ ದಾಖಲೆ ಮುರಿದ ಚೇತೇಶ್ವರ್ ಪೂಜಾರ
ಮಾಲ್ಡೀವ್ಸ್ ಕ್ರಿಕೆಟ್ ಮಂಡಳಿಗೆ ಸಂಬಂಧಿತ ಚಟುವಟಿಕೆಗಳಲ್ಲಿ ಬೆಂಬಲ ನೀಡಲು ಬಿಸಿಸಿಐ ಉತ್ಸುಕವಾಗಿದೆ ಎಂದು ಮಾಧ್ಯಮ ವರದಿಗಳ ಮೂಲಕ ತಿಳಿದುಬಂದಿದೆ. ಆಟದ ಅಭಿವೃದ್ಧಿಯಲ್ಲಿ ಬಿಸಿಸಿಐ ತನ್ನ ನೆರೆಯ / ಪ್ರಾದೇಶಿಕ ದೇಶಗಳೊಂದಿಗೆ ನಿಂತಿದೆ ಎಂಬುದನ್ನು ಗಮನಿಸುವುದು ಸಂತೋಷಕರ ವಿಚಾರ. ಆದರೆ ಬಿಸಿಸಿಐ ದೇಶದೊಳಗಿನ ಪ್ರದೇಶಗಳ ಬಗ್ಗೆಯೂ ಗಮನ ಹರಿಸಬೇಕು ಎಂದು ಬರೆದಿದ್ದರು.
ನಾವು ಬಿಸಿಸಿಐಗೆ ಪತ್ರ ಬರೆದು ವರ್ಷಗಳಾಗಿವೆ.. ಹೊಸ ಪ್ರದೇಶ ಅಭಿವೃದ್ಧಿ ಕಾರ್ಯಕ್ರಮದ ಅಧ್ಯಕ್ಷರಾಗಿಯೂ ಅವಿಶೇಕ್ ಅವರ ಪ್ರಯತ್ನಗಳು ಯಾವುದೇ ಫಲಿತಾಂಶಗಳನ್ನು ನೀಡಲಿಲ್ಲ ಎಂದು ಕಲ್ರಾ ಹತಾಶೆ ವ್ಯಕ್ತಪಡಿಸಿದ್ದಾರೆ.
ಎಲ್ಲ ಪ್ರಯತ್ನಗಳ ಹೊರತಾಗಿಯೂ, ಲಕ್ಷದ್ವೀಪವು ಇನ್ನೂ ಬಿಸಿಸಿಐ ಮಾನ್ಯತೆಗಾಗಿ ಕಾಯುತ್ತಿದೆ. ಲಕ್ಷದ್ವೀಪವು ತನ್ನ ಪ್ರತಿಭಾವಂತ ಕ್ರಿಕೆಟಿಗರನ್ನು ಭಾರತೀಯ ಕ್ರಿಕೆಟ್ನ ಮುಖ್ಯವಾಹಿನಿಗೆ ಕಳುಹಿಸಲು ಮಾಡಿದ ಮನವಿ ಪುರಸ್ಕೃತಗೊಂಡಿಲ್ಲ. ಬಿಸಿಸಿಐನಿಂದ ಮಾನ್ಯತೆ ಮತ್ತು ಬೆಂಬಲಕ್ಕಾಗಿ ಅಲ್ಲಿನ ಕ್ರಿಕೆಟ್ ಸಂಸ್ಥೆ ಹೋರಾಟ ನಡೆಸುತ್ತಲೇ ಇದೆ.