ನವ ದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿಕೆಟ್ಕೀಪರ್ ಬ್ಯಾಟರ್ ರಿಷಭ್ ಪಂತ್ ಕಾರು ಅಪಘಾತದಲ್ಲಿ ಗಾಯಗೊಂಡು ಹಾಲಿ ಆವೃತ್ತಿಯ ಟೂರ್ನಿಯಲ್ಲಿ ಆಡುತ್ತಿಲ್ಲ. ಆದರೆ, ಅವರ ತಂಡ ಹಾಗೂ ಹೆಡ್ ಕೋಚ್ ರಿಕಿ ಪಾಂಟಿಂಗ್ ಯುವ ಆಟಗಾರನ ಸ್ಮರಣೆಯಲ್ಲಿದೆ. ಹಾಲಿ ಆವೃತ್ತಿಯ ಟೂರ್ನಿ ಆರಂಭಗೊಂಡ ಬಳಿಕದಿಂದಲೂ ಪಂತ್ ನಮ್ಮೊಂದಿಗಿದ್ದಾರೆ, ನಾವು ಅವರೊಂದಿಗೆ ಇದ್ದೇವೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಇವೆಲ್ಲದಕ್ಕಿಂತ ಹೆಚ್ಚಾಗಿ ಲಕ್ನೊ ಸೂಪರ್ ಜಯಂಟ್ಸ್ ವಿರುದ್ಧದ ಪಂದ್ಯದಲ್ಲಿ ಪಂತ್ ಧರಿಸುವ 17 ಸಂಖ್ಯೆಯುಳ್ಳ ಜೆರ್ಸಿಯನ್ನು ಡಗ್ಔಟ್ ಮೇಲೆ ನೇತು ಹಾಕಿದ್ದು. ಆದರೆ, ಈ ಕ್ರಮದ ಬಗ್ಗೆ ಬಿಸಿಸಿಐ ಅಸಮಾಧಾನ ವ್ಯಕ್ತಪಡಿಸಿದೆ ಎಂಬುದಾಗಿ ವರದಿಯಾಗಿದೆ.
ಜೆರ್ಸಿಯನ್ನು ತಂಡದ ಡಗ್ಔಟ್ ಮೇಲೆ ನೇತು ಹಾಕುವುದು ನಿಧನ ಹೊಂದಿದಾಗ. ಗಾಯಗೊಂಡವರಿಗೆಲ್ಲ ಈ ರೀತಿ ಮಾಡುವುದು ಸರಿಯಲ್ಲ. ರಿಷಭ್ ಪಂತ್ ಅವರಿಗೆ ಧೈರ್ಯ ತುಂಬುವುದು ಸರಿ ಎನಿಸಿದರೂ ಅವರು ನಿರೀಕ್ಷೆಗಿಂತ ಅತಿ ವೇಗದಲ್ಲಿ ಗುಣಮುಖರಾಗುತ್ತಿದ್ದಾರೆ. ಹೀಗಾಗಿ ಮಿತಿ ಮೀರಿ ಪ್ರತಿಕ್ರಿಯೆ ಕೊಡುವುದು ಸರಿಯಲ್ಲ ಎಂದು ಫ್ರಾಂಚೈಸಿಗೆ ಬಿಸಿಸಿಐ ಹೇಳಿದೆ ಎಂಬುದಾಗಿ ವರದಿಯಾಗಿದೆ.
ಇದನ್ನೂ ಓದಿ : IPL 2023 : ಧೋನಿಯನ್ನು ನೋಡಿ ಕಲಿಯಿರಿ; ಯುವ ಆಟಗಾರರಿಗೆ ಕಿವಿ ಮಾತು ಹೇಳಿದ ಉತ್ತಪ್ಪ, ರೈನಾ
ಈ ವರದಿ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಆದರೆ, ಪಂತ್ಗೆ ಬೆಂಬಲ ಸೂಚಿಸು ತಮ್ಮ ಕೆಲಸ ಮುಂದುವರಿಯಲಿದೆ ಎಂಬುದಾಗಿ ಫ್ರಾಂಚೈಸಿ ಹೇಳಿದೆ. ಅದರ ಪ್ರಕಾರ ಪಂದ್ಯವೊಂದರಲ್ಲಿ ತಂಡದ ಎಲ್ಲ ಆಟಗಾರರು ಪಂತ್ ಧರಿಸುವ 17 ಸಂಖ್ಯೆ ಜೆರ್ಸಿ ಧರಿಸಲಿದ್ದಾರೆ.
ಭ್ರಷ್ಟಾಚಾರ ನಿಗ್ರಹ ಘಟಕದ ಆಕ್ಷೇಪ
ರಿಷಭ್ ಪಂತ್ ಅವರನ್ನು ಪಂದ್ಯವೊಂದರ ವೇಳೆ ಡಗ್ಔಟ್ನಲ್ಲಿ ಕೂರಿಸುವುದು ಕೂಡ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಯೋಜನೆಯಾಗಿದೆ. ಇದನ್ನು ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ದಳ ಆಕ್ಷೇಪಿಸಿದೆ ಎಂಬುದಾಗಿಯೂ ವರದಿಯಾಗಿದೆ. ಐಪಿಎಲ್ ಅಥವಾ ಕ್ರಿಕೆಟ್ ನಿಯಮದ ಪ್ರಕಾರ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯನ್ನು ಬಿಟ್ಟು ಡಗ್ ಔಟ್ನಲ್ಲಿ ಕುಳಿತುಕೊಳ್ಳುವಂತಿಲ್ಲ. ಫ್ರಾಂಚೈಸಿ ಮಾಲೀಕರು ಕೂಡ ಆ ಪ್ರದೇಶಕ್ಕೆ ಪ್ರವೇಶ ಮಾಡುವಂತಿಲ್ಲ. ಅದರು ಭ್ರಷ್ಟಾಚಾರ ತಡೆಯ ನಿಯಮವಾಗಿದೆ. ಹೀಗಾಗಿ ಪ್ರಸ್ತುತ ತಂಡದಲ್ಲಿಯೇ ಇಲ್ಲದ ಪಂತ್ ಅವರನ್ನು ಡಗ್ಔಟ್ಗೆ ಕರೆಸಿಕೊಳ್ಳುವುದು ಸರಿಯಲ್ಲ ಎಂಬುದು ಆಕ್ಷೇಪವಾಗಿದೆ.
ರಿಷಭ್ ಅಲಭ್ಯತೆ ಬಗ್ಗೆ ಗಂಗೂಲಿ ಹೇಳಿದ್ದೇನು?
ರಿಷಭ್ ಪಂತ್ ಅವರನ್ನು ಎಲ್ಲರೂ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ರಾಷ್ಟ್ರೀಯ ತಂಡವೂ ಅವರ ಸೇವೆಯನ್ನು ಕಳೆದುಕೊಳ್ಳುತ್ತಿದೆ ಎಂಬುದು ನನಗೆ ಖಾತರಿಯಿದೆ. ಅವರು ಯುವ ಆಟಗಾರನಾಗಿದ್ದು ತಮ್ಮ ವೃತ್ತಿ ಕ್ರಿಕೆಟ್ನಲ್ಲಿ ಸಾಧನೆ ಮಾಡಲು ಸಾಕಷ್ಟು ಸಮಯ ಹೊಂದಿದ್ದಾರೆ. ಅವರೊಬ್ಬ ವಿಶೇಷ ಕ್ರಿಕೆಟ್ ಪ್ರತಿಭೆ ಎಂಬುದನ್ನು ನಾನು ಪ್ರತಿ ಬಾರಿಯೂ ಹೇಳುತ್ತೇನೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕ್ಯಾಂಪ್ ಆರಂಭಕ್ಕೆ ಮೊದಲು ಅವರು ಹೇಳಿದರು.
ರಿಷಭ್ ಪಂತ್ ಆದಷ್ಟು ಬೇಗ ತಂಡಕ್ಕೆ ಮರಳಲಿ ಎಂದು ನಾನು ಬಯುಸುತ್ತೇನೆ. ಆದರೆ, ಅದಕ್ಕೆ ಎಷ್ಟು ಸಮಯ ಬೇಕಾದರೂ ತೆಗೆದುಕೊಳ್ಳಲಿ. ಅವರು ಸಂಪೂರ್ಣವಾಗಿ ಗುಣಮುಖರಾದ ಬಳಿಕವಷ್ಟೇ ತಂಡಕ್ಕೆ ಬರಬೇಕು. ಆತುರ ಆತುರವಾಗಿ ತಂಡಕ್ಕೆ ಮರಳುವ ಅಗತ್ಯವೇ ಇಲ್ಲ ಎಂದು ಹೇಳಿದ್ದಾರೆ.
ರಿಷಭ್ ಪಂತ್ ಕಳೆದ ವರ್ಷಾಂತ್ಯದಲ್ಲಿ ತಮ್ಮ ಕಾರಿನ ಮೂಲಕ ಡೆಲ್ಲಿಯಿಂದ ಡೆಹ್ರಾಡೂನ್ಗೆ ಪ್ರಯಾಣ ಮಾಡುತ್ತಿದ್ದಾಗ ಅಪಘಾತಕ್ಕೆ ಒಳಗಾಗಿದ್ದರು. ಅವರ ಕಾರು ಡಿವೈಡರ್ಗೆ ಗುದ್ದಿ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಭಸ್ಮವಾಗಿತ್ತು. ಘಟನೆಯಲ್ಲಿ ಸುಟ್ಟಗಾಯಗಳು ಹಾಗೂ ಮಂಡಿಯ ಮುರಿತಕ್ಕೆ ಒಳಗಾಗಿದ್ದರು. ಮೊದಲು ಡೆಹ್ರಾಡೂನ್ನಲ್ಲಿ ಚಿಕಿತ್ಸೆ ಪಡೆದಿದ್ದ ಅವರು ಬಳಿಕ ಮುಂಬಯಿಯ ಕೊಕಿಲಾ ಬೆನ್ ಆಸ್ಪತ್ತೆಯಲ್ಲಿ ಚಿಕಿತ್ಸೆ ಪಡೆದಿದ್ದರು.