ಮುಂಬಯಿ: ಚೀನಾದ ಹ್ಯಾಂಗ್ಜೌನಲ್ಲಿ ಈ ವರ್ಷ ಏಷ್ಯನ್ ಗೇಮ್ಸ್ ನಡೆಯಲಿದೆ. ಈ ಬಾರಿ ಕ್ರಿಕೆಟ್ ಟೂರ್ನಿಯೂ ಏಷ್ಯನ್ ಕ್ರೀಡಾಕೂಟದ ಭಾಗವಾಗಿರುವುದರಿಂದ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬಹುನಿರೀಕ್ಷಿತ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲು ಪುರುಷರ ಮತ್ತು ಮಹಿಳೆಯರ ತಂಡವನ್ನು ಕಳುಹಿಸಬಹುದು ಎಂಬುದಾಗಿ ವರದಿಯಾಗಿವೆ. ಸೆಪ್ಟೆಂಬರ್ 23ರಿಂದ ಅಕ್ಟೋಬರ್ 8 ರವರೆಗೆ ಚೀನಾದ ಬಹು-ಕ್ರೀಡಾ ಸ್ಪರ್ಧೆ ನಡೆಯಲಿದೆ. ಏಷ್ಯನ್ ಕ್ರೀಡಾಕೂಟದಲ್ಲಿ ಟಿ20 ಕ್ರಿಕೆಟ್ ಸ್ಪರ್ಧೆ ನಡೆಯಲಿದೆ.
ಬಿಸಿಸಿಐ ಕಳುಹಿಸುರ ಪುರುಷರ ಭಾರತ ಬಿ ತಂಡವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಹಿರಿಯ ಆಟಗಾರರು ಭಾರತದ ಆತಿಥ್ಯದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಸ್ಪರ್ಧಿಸಲಿರುವ ಕಾರಣ ಬಿ ತಂಡವನ್ನು ಕಳುಹಿಸುವುದು ಬಿಸಿಸಿಐ ಉದ್ದೇಶವಾಗಿದೆ. ಅಂತೆಯೇ ಜೂನ್ 30ರೊಳಗೆ ಬಿಸಿಸಿಐ ತಂಡಗಳ ವಿವರವನ್ನು ಭಾರತೀಯ ಒಲಿಂಪಿಕ್ ಸಂಸ್ಥೆಗೆ ಕಳುಹಿಸಲಿದೆ ಎಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ : INDvsWI : ಪೂಜಾರ ಒಬ್ಬರನ್ನೇ ಯಾಕೆ ಬಲಿಪಶು ಮಾಡುತ್ತೀರಿ, ಆಯ್ಕೆಗಾರರಿಗೆ ಗವಾಸ್ಕರ್ ಪ್ರಶ್ನೆ
ದಿ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಈ ಕುರಿತು ವರದಿ ಪ್ರಕಟವಾಗಿದೆ. ವರದಿಯ ಪ್ರಕಾರ ಬಿಸಿಸಿಐ ಮುಂಬರುವ ಏಷ್ಯನ್ ಗೇಮ್ಸ್ 2023ಕ್ಕೆ ಪುರುಷರ ಮತ್ತು ಮಹಿಳಾ ಕ್ರಿಕೆಟ್ ತಂಡಗಳನ್ನು ಕಣಕ್ಕಿಳಿಸಲಿದೆ. 2010 ಮತ್ತು 2014ರಲ್ಲಿ ಕ್ರಿಕೆಟ್ ಏಷ್ಯನ್ ಕ್ರೀಡಾಕೂಟದ ಭಾಗವಾಗಿತ್ತು. ಆದರೆ ಬಿಸಿಸಿಐ ಆಗ ತಂಡವನ್ನು ಕಳುಹಿಸಿರಲಿಲ್ಲ. 2018ರಲ್ಲಿ ಕ್ರಿಕೆಟ್ ಅನ್ನು ಏಷ್ಯನ್ ಗೇಮ್ಸ್‌ನಿಂದ ಹೊರಗಿಡಲಾಗಿತ್ತು. ಇದೀಗ ಏಷ್ಯನ್ ಗೇಮ್ಸ್ ಚೀನಾಕ್ಕೆ ಮರಳಿದ್ದು ಅಲ್ಲಿ ಕ್ರಿಕೆಟ್ ಸೇರ್ಪಡೆಗೊಳಿಸಲಾಗಿದೆ. ಹೀಗಾಗಿ ಬಿಸಿಸಿಐ ತಂಡವನ್ನು ಕಳುಹಿಸಲು ಮುಂದಾಗಿದೆ. ಏಷ್ಯನ್ ಗೇಮ್ಸ್ 2022ರಲ್ಲಿ ನಡೆಯಬೇಕಿತ್ತು. ಚೀನಾದ ಶೂನ್ಯ-ಕೋವಿಡ್ ಸೋಂಕು ನೀತಿಯಿಂದಾಗಿ ಕ್ರೀಡಾಕೂಟ ಮುಂದೂಡಿಕೆಯಾಗಿತ್ತು.
ಸೂಕ್ತ ಸಮಯಕ್ಕೆ ಸಂವಹನ ನಡೆಸದ ಕಾರಣ ಹಿಂದಿನ ಆವೃತ್ತಿಗಳಲ್ಲಿ ತಂಡವನ್ನು ಕಳುಹಿಸಲು ಸಾಧ್ಯವಾಗಿರಲಿಲ್ಲ ಎಂದು ಬಿಸಿಸಿಐ ಕಾರಣ ಕೊಟ್ಟಿತ್ತು. ಹಣ ಬರುವಂಥ ಟೂರ್ನಿಗಳಿಗೆ ಮಾತ್ರ ತಂಡವನ್ನು ಕಳುಹಿಸುವ ಬಿಸಿಸಿಐ ನಿರ್ಧಾರದ ಬಗ್ಗೆ ಆಕ್ಷೇಪಗಳು ವ್ಯಕ್ತಗೊಂಡಿವೆ. ಹೀಗಾಗಿ ಈ ಬಾರಿ ತಂಡವನ್ನು ಕಳುಹಿಸಲು ಬಿಸಿಸಿಐ ತೀರ್ಮಾನಿಸಿದೆ ಎನ್ನಲಾಗಿದೆ. ಏಷ್ಯನ್ ಗೇಮ್ಸ್‌ಗಾಗಿ ಭಾರತದ ಚೆಫ್ ಡಿ ಮಿಷನ್ ಭೂಪೇಂದರ್ ಬಜ್ವಾ ಈ ಕುರಿತು ಬಿಸಿಸಿಐ ಜತೆ ಮಾತುಕತೆ ನಡೆಸಿದ್ದಾರೆ.
ಬಿಸಿಸಿಐ ತಂಡವನ್ನು ಕಳುಹಿಸಲು ಒಪ್ಪುತ್ತಿಲ್ಲ ಎಂಬುದಾಗಿ ಭೂಪೇಂದರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಎಲ್ಲ ಕ್ರೀಡೆಗಳಲ್ಲಿ ಭಾರತ ಭಾಗಿಯಾಗುತ್ತದೆ. ಆದರೆ, ಕ್ರಿಕೆಟ್‌ನಲ್ಲ ಮಾತ್ರ ಇಲ್ಲ. ನಾವು ಬಿಸಿಸಿಐಗೆ ಸುಮಾರು 3ರಿಂದ 4 ಇಮೇಲ್‌ಗಳನ್ನು ಕಳುಹಿಸಿದ್ದೇವೆ. ನಾವು ಸಂಘಟಕರಿಗೆ ಹೆಸರನ್ನು ಕಳುಹಿಸುವಾಗ ಭೂಪೇಂದರ್ ಬಜ್ವಾ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
ಬಿಸಿಸಿಐ ತನ್ನ ಮಹಿಳಾ ತಂಡವನ್ನು ಏಷ್ಯನ್ ಕ್ರೀಡಾಕೂಟಕ್ಕೆ ಕಳುಹಿಸುತ್ತದೆಯೇ ಎಂಬುದರ ಬಗ್ಗೆ ಹೆಚ್ಚಿನ ಸ್ಪಷ್ಟತೆ ಇಲ್ಲ. ಆದಾಗ್ಯೂ, ಅಂತಿಮ ತೀರ್ಪು ಏನಾಗಲಿದೆ ಎಂಬುದನ್ನು ಕಾದು ನೋಡಬೇಕು.