Site icon Vistara News

Team India | ರಾಹುಲ್‌ ದ್ರಾವಿಡ್‌, ರೋಹಿತ್‌ ಶರ್ಮ ಜತೆ ಸಭೆ ನಡೆಸಲು ಮುಂದಾಗಿದೆ ಬಿಸಿಸಿಐ

Virat kohli

ಮುಂಬಯಿ : ಟಿ೨೦ ವಿಶ್ವ ಕಪ್‌ ಅಭಿಯಾನವನ್ನು ಭಾರತ ತಂಡ (Team India) ಹೀನಾಯ ಪ್ರದರ್ಶನದೊಂದಿಗೆ ಕೊನೆಗೊಳಿಸಿದೆ. ಇಂಗ್ಲೆಂಡ್‌ ವಿರುದ್ಧದ ಸೆಮಿ ಫೈನಲ್‌ ಹಣಾಹಣಿಯಲ್ಲಿ ೧೦ ವಿಕೆಟ್‌ಗಳ ಸೋಲು ಅನುಭವಿಸಿರುವುದು ಬಿಸಿಸಿಐ ಪಾಲಿಗೆ ಅರಗಿಸಿಕೊಳ್ಳಲಾಗದ ಸಂಗತಿ ಎನಿಸಿದೆ. ಪೂರಕವಾಗಿ ಆಟಗಾರರ ಆಯ್ಕೆ, ರಣ ತಂತ್ರ ಸೇರಿದಂತೆ ನಾನಾ ವಿಷಯಗಳ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮ ಹಾಗೂ ಹೆಡ್‌ ಕೋಚ್‌ ರಾಹುಲ್‌ ದ್ರಾವಿಡ್‌ ಅವರೊಂದಿಗೆ ಸಭೆ ನಡೆಸಲು ಬಿಸಿಸಿಐ ಹಿರಿಯ ಅಧಿಕಾರಿಗಳು ಮುಂದಾಗಿದ್ದಾರೆ.

ಸಭೆಯಲ್ಲಿ ಮಾಜಿ ನಾಯಕ ವಿರಾಟ್‌ ಕೊಹ್ಲಿಯೂ ಹಾಜರು ಇರುತ್ತಾರೆ ಎಂಬುದಾಗಿ ಬಿಸಿಸಿಐ ಮೂಲಗಳು ತಿಳಿಸಿವೆ. ಭಾರತ ತಂಡ ವಿಶ್ವ ಕಪ್‌ನಲ್ಲಿ ಹೀನಾಯ ಸೋಲು ಕಾಣುವುದಕ್ಕೆ ಕಾರಣವೇನು ಹಾಗೂ ಸುಧಾರಿಸಿಕೊಳ್ಳುವುದಕ್ಕೆ ಇರುವ ಅವಕಾಶಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.

ಬಿಸಿಸಿಐ ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್‌ ಸಂಸ್ಥೆ ಎಂಬ ಖ್ಯಾತಿ ಪಡೆದುಕೊಂಡಿದೆ. ಆದರೆ, ೨೦೧೧ರಿಂದ ಒಂದೇ ಒಂದು ಐಸಿಸಿ ಟ್ರೋಫಿಯನ್ನು ಗೆದ್ದಿಲ್ಲ. ದೊಡ್ಡ ಸಂಸ್ಥೆಗೆ ವಿಶ್ವ ಮಟ್ಟದ ಟ್ರೋಫಿ ಗೆಲ್ಲಲು ಯಾಕೆ ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆ ಜಗತ್ತಿನ ಮೂಲೆ ಮೂಲೆಗಳಿಂದ ಎದ್ದಿದೆ. ಈ ಹಿನ್ನೆಲೆಯಲ್ಲಿ ಟೀಮ್‌ ಇಂಡಿಯಾದ ಆಟಗಾರರ ಹಾಗೂ ಅಧಿಕಾರಿಗಳ ನಡುವಿನ ಸಭೆ ಹೆಚ್ಚು ಮಹತ್ವ ಪಡೆದುಕೊಂಡಿದೆ.

೨೦೨೪ಕ್ಕೆ ಸಿದ್ಧತೆ

ಮುಂದಿನ ಆವೃತ್ತಿಯ ಟಿ೨೦ ವಿಶ್ವ ಕಪ್‌ ೨೦೨೪ಲ್ಲಿ ನಡೆಯಲಿದೆ. ವೆಸ್ಟ್‌ ಇಂಡೀಸ್‌ ಹಾಗೂ ಅಮೆರಿಕ ಟೂರ್ನಿಗೆ ಆತಿಥ್ಯ ವಹಿಸಲಿದೆ. ಆ ಟೂರ್ನಿಯಲ್ಲಾದರೂ ಚಾಂಪಿಯನ್ ಪಟ್ಟ ಗೆಲ್ಲಬೇಕು ಎಂಬುದು ಬಿಸಿಸಿಐ ಗುರಿಯಾಗಿದೆ. ಅದಕ್ಕಾಗಿ ಯುವ ತಂಡವೊಂದನ್ನು ಕಟ್ಟುವ ಕಾರ್ಯ ಈ ಸಭೆಯ ಬಳಿಕ ಆರಂಭವಾಗಬಹುದು ಎಂಬುದಾಗಿಯೂ ಕ್ರಿಕೆಟ್‌ ಪಂಡಿತರು ಹೇಳುತ್ತಿದ್ದಾರೆ.

ಹಿರಿಯ ಆಟಗಾರರಿಗೆ ಕೊಕ್‌

ಭಾರತ ತಂಡದಲ್ಲಿ ೩೦ ವರ್ಷ ದಾಟಿದ ಹಿರಿಯ ಆಟಗಾರರೇ ಹೆಚ್ಚಿದ್ದಾರೆ ಎಂಬ ಆರೋಪಗಳಿವೆ. ಇದರಿಂದಲೇ ಸೋಲಿಗೆ ಒಳಗಾಗುತ್ತಿದೆ ಎಂಬುದು ಎಲ್ಲರ ಅರೋಪವಾಗಿದೆ. ಹೀಗಾಗಿ ಯುವ ಆಟಗಾರರನ್ನು ಒಳಗೊಂಡಿರುವ ತಂಡವನ್ನು ಕಟ್ಟುವುದಕ್ಕಾಗಿ ಬಿಸಿಸಿಐ ಯೋಜನೆ ರೂಪಿಸಿಕೊಂಡಿದೆ ಎನ್ನಲಾಗಿದೆ. ಸಭೆಯಲ್ಲಿ ಈ ವಿಚಾರವೂ ಚರ್ಚೆಗೆ ಬರುವುದು ಖಚಿತ.

ಇದನ್ನೂ ಓದಿ ವ| Team India | ವಿಶ್ವ ಕಪ್‌ ನಿರ್ಗಮನದ ಬಳಿಕ ಟೀಮ್ ಇಂಡಿಯಾ ಕೋಚಿಂಗ್‌ ಸಿಬ್ಬಂದಿಗೆ ರಜಾ ಕೊಟ್ಟ ಬಿಸಿಸಿಐ!

Exit mobile version