Site icon Vistara News

ವಾರದ ವ್ಯಕ್ತಿ ಚಿತ್ರ | ಹಲವು ಗರಿಮೆಗಳನ್ನು ಮುಡಿಗೇರಿಸಿಕೊಂಡ ರೋಜರ್‌ ಬಿನ್ನಿಯ ಹೊಸ ಇನಿಂಗ್ಸ್‌ ಶುರು

roger binny

ಸುಖೇಶ ಪಡಿಬಾಗಿಲು, ಬೆಂಗಳೂರು

೧೯೮೩ರ ವಿಶ್ವ ಕಪ್‌ನಲ್ಲಿ ಭಾರತ ತಂಡ ಜಾಗತಿಕ ಕ್ರಿಕೆಟ್‌ ಕ್ಷೇತ್ರವನ್ನು ಬೆರಗುಗೊಳಿಸಿ ಚಾಂಪಿಯನ್‌ ಆಯಿತು. ಈ ಟ್ರೋಫಿ ಗೆದ್ದಿರುವುದರ ಹಿಂದೆ ಆಲ್‌ರೌಂಡರ್‌ ಕಪಿಲ್‌ ದೇವ್‌ ಅವರ ಪರಿಶ್ರಮವಿದ್ದು, ಅದನ್ನು ಇಂದಿಗೂ ಕೊಂಡಾಡಲಾಗುತ್ತಿದೆ. ಆ ಬಗ್ಗೆ ಬಾಲಿವುಡ್‌ ಸಿನಿಮಾವೂ ಬಂದಿದೆ. ಈ ಟೂರ್ನಿಯಲ್ಲಿ ಭಾರತ ಚಾಂಪಿಯನ್‌ ಆಗುವಲ್ಲಿ ಇನ್ನೊಬ್ಬರೂ ಮುಖ್ಯ ಪಾತ್ರ ವಹಿಸಿದ್ದರು. ಅವರೇ ಇತ್ತೀಚೆಗೆ ಬಿಸಿಸಿಐ ಅಧ್ಯಕ್ಷರಾಗಿ ನೇಮಕಗೊಂಡ ಕರ್ನಾಟಕ ಮೂಲದ ಕ್ರಿಕೆಟಿಗ ರೋಜರ್ ಮೈಕಲ್ ಹಂಫ್ರಿ ಬಿನ್ನಿ. ಆ ವಿಶ್ವ ಕಪ್‌ನಲ್ಲಿ ಒಟ್ಟಾರೆ ೮ ಪಂದ್ಯಗಳಲ್ಲಿ ಆಡಿ ೧೮ ವಿಕೆಟ್‌ಗಳನ್ನು ಕಬಳಿಸಿ, ಅತಿ ಹೆಚ್ಚು ವಿಕೆಟ್‌ ಪಡೆದ ಖ್ಯಾತಿ ತಮ್ಮದಾಗಿಸಿಕೊಂಡಿದ್ದರು ರೋಜರ್‌. ಅದರಲ್ಲೂ ಆಸ್ಟ್ರೇಲಿಯಾ ವಿರುದ್ಧದ ಹಣಾಹಣಿಯಲ್ಲಿ ಅವರು ೨೯ ರನ್‌ಗಳಿಗೆ ೪ ವಿಕೆಟ್‌ ಉರುಳಿಸಿ ಸರ್ವಶ್ರೇಷ್ಠ ಸಾಧನೆ ಮಾಡಿದ್ದರು.

ಕಳೆದ ಮಂಗಳವಾರ ನಡೆದ ಬಿಸಿಸಿಐ ವಾರ್ಷಿಕ ಮಹಾಸಭೆಯಲ್ಲಿ ಇದೇ ರೋಜರ್‌ ಬಿನ್ನಿ ಅವರು ವಿಶ್ವದ ಅತ್ಯಂತ ಶ್ರೀಮಂತ ಕ್ರೀಡಾ ಸಂಸ್ಥೆ ಹಾಗೂ ಪ್ರಭಾವಿ ಕ್ರಿಕೆಟ್ ಮಂಡಳಿ ಭಾರತೀಯ ಕ್ರಿಕೆಟ್‌ ಮಂಡಳಿ (ಬಿಸಿಸಿಐ) ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಅಂದು ನಡೆದ ಚುನಾವಣೆಯಲ್ಲಿ ಅವರಿಗೆ ಪ್ರತಿಸ್ಪರ್ಧಿಗಳೇ ಇರಲಿಲ್ಲ. ಸರ್ವಾನುಮತದಿಂದ ಬಿಸಿಸಿಐನ ೩೬ನೇ ಅಧ್ಯಕ್ಷರಾಗಿ ಆಯ್ಕೆಯಾದರು. ಇಷ್ಟೆಲ್ಲ ಸಾಧನೆ ಮಾಡಿರುವ ರೋಜರ್‌ ಬಿನ್ನಿ ಅವರು ಭಾರತೀಯ ಮೂಲದವರೇ ಅಲ್ಲ. ಅವರ ಪೂರ್ವಿಕರು ಸ್ಕಾಟ್ಲೆಂಡ್‌ ಮೂಲದವರಾಗಿದ್ದು ಬೆಂಗಳೂರಿನಲ್ಲ ಬಂದು ನೆಲೆಯೂರಿದ್ದರು. ಅವರು ಭಾರತ ಕ್ರಿಕೆಟ್ ಕ್ಷೇತ್ರದ ಮೊಟ್ಟ ಮೊದಲ ಆಂಗ್ಲೋ ಇಂಡಿಯನ್‌ ಕ್ರಿಕೆಟರ್‌.

ಹಿಂದಿನ ಅಧ್ಯಕ್ಷ ಸೌರವ್‌ ಗಂಗೂಲಿ ಅವರಿಂದ ಅಧಿಕಾರ ಹೆಗಲೇರಿಸಿಕೊಂಡಿರುವ ರೋಜರ್‌ ಅವರು ಭಾರತೀಯ ಕ್ರಿಕೆಟ್‌ ಅಭಿಮಾನಿಗಳ ಮುಂದೆ ಹಲವು ಕನಸುಗಳನ್ನು ಬಿತ್ತಿದ್ದಾರೆ. ಆಡಳಿತಾತ್ಮಕ ಸುಧಾರಣೆ ಜತೆಗೆ ಗಾಯದ ಸಮಸ್ಯೆಯ ನಿರ್ವಹಣೆಗಾಗಿ ಹೊಸ ಕಾರ್ಯತಂತ್ರ ರೂಪಿಸುವುದಾಗಿಯೂ ಹೇಳಿದ್ದಾರೆ. ಕ್ರಿಕೆಟಿಗರಾಗಿ ಹಲವು ವರ್ಷಗಳ ಅನುಭವ ಹೊಂದಿರುವ ಅವರಿಂದ ಭಾರತ ಕ್ರಿಕೆಟ್‌ ಕ್ಷೇತ್ರಕ್ಕೂ ಸಾಕಷ್ಟು ನಿರೀಕ್ಷೆಗಳಿವೆ.

ಕ್ರಿಕೆಟಿಗನಾಗಿ ಹಲವು ಸಾಧನೆ

ಬಲಗೈ ಬ್ಯಾಟರ್‌ ಹಾಗೂ ಮಧ್ಯಮ ವೇಗಿಯಾಗಿರುವ ರೋಜರ್ ಬಿನ್ನಿ ಅವರು 1979ರಲ್ಲಿ ಭಾರತ ತಂಡದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ತವರು ನೆಲ ಬೆಂಗಳೂರಿನಲ್ಲಿ ಪಾಕಿಸ್ತಾನ ವಿರುದ್ಧ ಮೊದಲ ಟೆಸ್ಟ್ ಆಡಿದ್ದರು. 1980ರಲ್ಲಿ, ರೋಜರ್‌ ಅವರು ಆಸ್ಟ್ರೇಲಿಯಾ ವಿರುದ್ಧ ಚೊಚ್ಚಲ ಏಕದಿನ ಪಂದ್ಯದಲ್ಲಿ ಆಡಿದ್ದಾರೆ. ಅಲ್ಲಿಂದ ಎಂಟು ವರ್ಷಗಳ ತನಕ ಭಾರತ ತಂಡದ ಸದಸ್ಯರಾಗಿದ್ದ ಅವರು, 1987ರಲ್ಲಿ ಗುಡ್‌ಬೈ ಹೇಳಿದ್ದರು. ಈ ಅವಧಿಯಲ್ಲಿ ಅವರು ಭಾರತ ಪರ 27 ಟೆಸ್ಟ್ ಮತ್ತು 72 ಏಕದಿಗಳ ಪಂದ್ಯಗಳಲ್ಲಿ ಪಾಲ್ಗೊಂಡಿದ್ದಾರೆ. ರೋಜರ್ ಅವರು ಟೆಸ್ಟ್‌ನಲ್ಲಿ 47 ಮತ್ತು ಏಕ ದಿನ ಮಾದರಿಯಲ್ಲಿ 77 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಟೆಸ್ಟ್‌ನಲ್ಲಿ 830 ರನ್ ಹಾಗೂ ಏಕ ದಿನ ಕ್ರಿಕೆಟ್‌ನಲ್ಲಿ 629 ರನ್ ಗಳಿಸಿದ್ದಾರೆ.

1985ರಲ್ಲಿ ಬೆನ್ಸನ್ ಮತ್ತು ಹೆಡ್ಜಸ್ ವರ್ಲ್ಡ್ ಚಾಂಪಿಯನ್‌ಷಿಪ್‌ ಟೂರ್ನಿ ಆಸ್ಟ್ರೇಲಿಯಾದ ಆತಿಥ್ಯದಲ್ಲಿ ನಡೆದಿತ್ತು. ಆ ಟೂರ್ನಿಯ ಫೈನಲ್‌ನಲ್ಲಿ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಮಣಿಸಿ ಟ್ರೋಫಿ ಎತ್ತಿ ಹಿಡಿದಿತ್ತು. ರೋಜರ್‌ ಬಿನ್ನಿ ಆ ಟೂರ್ನಿಯಲ್ಲಿ ಎರಡನೇ ಅತ್ಯಂತ ಯಶಸ್ವಿ ಬೌಲರ್ ಎನಿಕೊಂಡರು. 4 ಪಂದ್ಯಗಳಲ್ಲಿ 29.5 ಓವರ್‌ಗಳನ್ನು ಎಸೆದು ಒಟ್ಟಾರೆ 9 ವಿಕೆಟ್‌ಗಳನ್ನು ತಮ್ಮದಾಗಿಸಿಕೊಂಡಿದ್ದರು.

ಉಪಯುಕ್ತ ಆಟಗಾರ

ರೋಜರ್‌ ಬಿನ್ನಿ ಅವರು ಆ ಕಾಲದಲ್ಲಿ ಟೀಮ್‌ ಇಂಡಿಯಾದ ಉಪಯುಕ್ತ ಆಟಗಾರ. ಮಧ್ಯಮ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದ ಅವರು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಕೂಡ ಮಾಡುತ್ತಿದ್ದರು. ಅಗತ್ಯ ಸಂದರ್ಭದಲ್ಲಿ ಅತ್ಯುತ್ತಮವಾಗಿ ಬ್ಯಾಟ್‌ ಬೀಸಿ ತಂಡವನ್ನು ಕಾಪಾಡಿದ್ದರು. 1983ರಲ್ಲಿ ಪಾಕಿಸ್ತಾನದ ವಿರುದ್ಧ ಅಜೇಯ 83 ರನ್ ಗಳಿಸುವ ಮೂಲಕ ಭಾರತವನ್ನು ಸೋಲಿನಿಂದ ಪಾರು ಮಾಡಿದ್ದರು. ಅತ್ಯುತ್ತಮ ಫೀಲ್ಡರ್ ಆಗಿದ್ದ ಬಿನ್ನಿ ಎದುರಾಳಿ ತಂಡದ ಬ್ಯಾಟರ್‌ಗಳಿಗೆ ಕ್ಷೇತ್ರ ರಕ್ಷಣೆಯ ಮೂಲಕವೂ ಕಾಡಿದ್ದರು.

ಯಶಸ್ವಿ ಕೋಚ್‌

ರೋಜರ್ ಬಿನ್ನಿ ಅವರು ೨೦೦೦ರಲ್ಲಿ ವಿಶ್ವ ಕಪ್‌ ಗೆದ್ದ ಭಾರತ ೧೯ರ ವಯೋಮಿತಿಯ ತಂಡದ ಕೋಚ್‌ ಆಗಿದ್ದರು. ಮೊಹಮ್ಮದ್ ಕೈಫ್‌ ನೇತೃತ್ವದ ಭಾರತ ತಂಡ ಟೂರ್ನಿಯಲ್ಲಿ ಆಡಿತ್ತು. ಬಿನ್ನಿ ಗರಡಿಯಲ್ಲಿ ಪಳಗಿದ ಮೊಹಮ್ಮದ್‌ ಕೈಫ್‌ ಹಾಗೂ ಯುವರಾಜ್‌ ಸಿಂಗ್‌ ಮುಂದೆ ಭಾರತ ತಂಡದ ಸ್ಟಾರ್‌ ಆಟಗಾರರಾಗಿ ಮಿಂಚಿದ್ದಾರೆ. ರೋಜರ್‌ ಬಿನ್ನಿ ಅವರು ೨೦೧೨ರಲ್ಲಿ ಬಿಸಿಸಿಐ ಹಿರಿಯರ ತಂಡದ ಆಯ್ಕೆ ಸಮಿತಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು. ಬಳಿಕ ರೋಜರ್ ಬಿನ್ನಿ ೧೬ರ ವಯೋಮಿತಿಯ ಕ್ರಿಕೆಟ್ ತಂಡದ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದರು. ರಾಬಿನ್‌ ಉತ್ತಪ್ಪ, ಅಂಬಾಟಿ ರಾಯುಡು ಹಾಗೂ ಇರ್ಫಾನ್ ಪಠಾಣ್ ಅವರಂಥ ಪ್ರಮುಖ ಆಟಗಾರರ ಬೆಳವಣಿಗೆಗೆ ಬಿನ್ನಿ ಅವರ ಕೊಡುಗೆಯಿದೆ.

ಕೋಚಿಂಗ್‌ ಜವಾಬ್ದಾರಿ ಮುಗಿಸಿದ ಬಳಿಕ ಅವರು ಸೌತ್- ಈಸ್ಟ್‌ ಏಷ್ಯಾ, ಮಿಡಲ್‌ ಈಸ್ಟ್‌ ಕ್ರಿಕೆಟ್‌ ಡೆವಲಪ್‌ಮೆಂಟ್ ಅಧಿಕಾರಿಯಾಗಿ ಕೆಲಸ ಮಾಡಿದ್ದರು. ಏಷ್ಯಾ ಕ್ರಿಕೆಟ್‌ ಕೌನ್ಸಿಲ್‌ ಅವರಿಗೆ ಈ ಜವಾಬ್ದಾರಿ ನೀಡಿತ್ತು.

ಪ್ರಸ್ತುತ ಬಿಸಿಸಿಐ ಮ್ಯಾಚ್‌ ರೆಫರಿಯಾಗಿರುವ ರಿತೀಂದರ್ ಸೋಧಿ ಅವರು ರೋಜರ್ ಬಿನ್ನಿ ಅವರು ಭಾರತೀಯ ಕ್ರಿಕೆಟ್‌ಗೆ ನೀಡಿದ ಕೊಡುಗೆಯನ್ನು ಸ್ಮರಿಸುತ್ತಾರೆ. “ಅತ್ಯಂತ ಶಾಂತ ರೀತಿಯಿಂದ ಕೋಚಿಂಗ್‌ ನೀಡುವ ರೋಜರ್‌ ಬಿನ್ನಿ, ಎಂದಿಗೂ ಆಟಗಾರನಿಗೆ ಇದೇ ರೀತಿ ಮಾಡಿ ಎಂದ ಹೇಳುವುದಿಲ್ಲ .ಬದಲಾಗಿ ಆಟಗಾರನ ನೈಜ ಸಾಮರ್ಥ್ಯವನ್ನು ಬೆಳೆಸುತ್ತಾರೆ ಹಾಗೂ ಅಗತ್ಯ ಸಂದರ್ಭದಲ್ಲಿ ಜವಾಬ್ದಾರಿಯಿಂದ ವರ್ತಿಸುವುದನ್ನು ತಿಳಿಸಿಕೊಡುತ್ತಾರೆ,” ಎಂದು ಹೇಳಿಕೊಂಡಿದ್ದಾರೆ. ರಿತಿಂದರ್ ಅವರು ೨೦೦೦ರಲ್ಲಿ ವಿಶ್ವ ಕಪ್‌ ಗೆದ್ದ ೧೯ರ ವಯೋಮಿತಿಯ ತಂಡದ ಉಪನಾಯಕರಾಗಿದ್ದರು.

ಇದು ಕಾಕತಾಳಿಯ

ರೋಜರ್‌ ಬಿನ್ನಿಯವರ ವೃತ್ತಿ ಕ್ರಿಕೆಟ್‌ನಲ್ಲಿ ಕಾಕತಾಳಿಯ ಸಂಗತಿಗಳು ನಡೆದಿವೆ. ೧೯೭೯ರಲ್ಲಿ ಪಾಕಿಸ್ತಾನ ವಿರುದ್ಧವೇ ಟೆಸ್ಟ್ ಮಾದರಿಗೆ ಪದಾರ್ಪಣೆ ಮಾಡಿ ಅದೇ ತಂಡದ ವಿರುದ್ಧ ಕೊನೇ ಟೆಸ್ಟ್‌ ಪಂದ್ಯ ಆಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಏಕ ದಿನ ಮಾದರಿಗೆ ಪದಾರ್ಪಣೆ ಮಾಡಿದ್ದ ರೋಜರ್‌ ಅವರು ಅದೇ ತಂಡದ ವಿರುದ್ಧ ಕೊನೇ ಪಂದ್ಯವನ್ನು ಆಡಿರುವುದು ಕಾಕತಾಳಿಯ ಎನ್ನಲಾಗುತ್ತಿದೆ.

ಆಡಳಿತಾತ್ಮಕ ಅನುಭವ

ರೋಜರ್‌ ಬಿನ್ನಿ ಅವರು ಬಿಸಿಸಿಐಗೆ ಅಧ್ಯಕ್ಷರಾಗುವುದಕ್ಕೆ ಅವರಿಗೆ ಇರುವ ಆಡಳಿತಾತ್ಮಕ ಅನುಭವವವೇ ಕಾರಣ. ೨೦೦೦ರ ಅವಧಿಯಲ್ಲಿ ೧೯ರ ವಯೋಮಿತಿಯ ತಂಡದ ಕೋಚ್‌ ಆಗಿದ್ದ ಅವರು ೨೦೧೨ರಲ್ಲಿ ಭಾರತ ತಂಡದ ಆಯ್ಕೆ ಸಮಿತಿಯ ಸದಸ್ಯರೂ ಆಗಿದ್ದರು. ಬಿಸಿಸಿಐ ಅಧ್ಯಕ್ಷರಾಗಿ ನೇಮಕಗೊಳ್ಳುವ ಮೂದಲು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ್ದರು.

೨೦೧೦ರಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಚುನಾವಣೆ ವೇಳೆ ಬಣ ಸಮಸ್ಯೆಯೊಂದು ಸೃಷ್ಟಿಯಾಗಿತ್ತು. ಆ ಅವಧಿಯಲ್ಲಿ ಮಾಜಿ ಕ್ರಿಕೆಟಿಗ ಅನಿಲ್‌ ಕುಂಬ್ಳೆ ಅಧ್ಯಕ್ಷತೆಯ ಸಮಿತಿಯಲ್ಲಿ ಉಪಾಧ್ಯಕ್ಷರಾಗಿದ್ದ ರೋಜರ್‌ ಬಿನ್ನಿ ಸಮಸ್ಯೆ ಬಿಗಡಾಯಿಸದಂತೆ ನೋಡಿಕೊಂಡಿದ್ದರು. ಎರಡೂ ಗುಂಪುಗಳ ನಡುವಿನ ಸಂಧಾನಕಾರರಾಗಿ ಸಂಸ್ಥೆಯ ಗೌರವ ಕಾಪಾಡಿದ್ದರು. ಬಳಿಕ ಅವರಿಗೆ ಬ್ರಿಜೇಶ್ ಪಟೇಲ್‌ ಅವರ ಬೆಂಬಲ ಲಭಿಸಿತ್ತು. ಆ ಮೂಲಕ ಅವರು ಕೆಎಸ್‌ಸಿಎ ಮುಖ್ಯಸ್ಥರ ಹುದ್ದೆ ಅಲಂಕರಿಸಿದರು. ಅದೇ ಪ್ರಭಾವ ಅವರನ್ನು ಬಿಸಿಸಿಐ ಮುಖ್ಯಸ್ಥರ ಹುದ್ದೆಯತ್ತ ಕೊಂಡೊಯ್ದಿತು.

ರೋಜರ್‌ ಅವರು ಕೆಎಸ್‌ಸಿಎ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಆರಂಭಗೊಂಡ ಕರ್ನಾಟಕ ಪ್ರೀಮಿಯರ್‌ ಲೀಗ್‌ಗೆ ಮೋಸದಾಟದ ಕಳಂಕ ಬಂತು. ಪ್ರಕರಣದಲ್ಲಿ ಕೆಲವು ಫ್ರಾಂಚೈಸಿ ಮಾಲೀಕರು ಬಂಧನಕ್ಕೆ ಒಳಗಾದರು. ಲೀಗ್ ಅನ್ನು ಕೊನೆಗೊಳಿಸುವ ಮೂಲಕ ಸಂಸ್ಥೆಗೆ ಕಳಂಕ ತಟ್ಟದಂತೆ ನೋಡಿಕೊಂಡರು ಬಿನ್ನಿ. ಅಂತೆಯೇ ೨೦೨೨ರಲ್ಲಿ ಮಹಾರಾಜ ಕಪ್ ಆರಂಭಿಸಿ ಲೀಗ್‌ ಪರ್ವ ಮುಂದುವರಿಸಿದರು.

ಕ್ರಿಕೆಟ್‌ ಬಿನ್ನಿ ಕುಟುಂಬದ ರಕ್ತದಲ್ಲಿದೆ
ರೋಜರ್ ಬಿನ್ನಿ ಅವರ ಕುಟುಂಬ ಸ್ಕಾಟ್ಲೆಂಡ್‌ನಿಂದ ಭಾರತಕ್ಕೆ ವಲಸೆ ಬಂದು, ಇಲ್ಲಿಯೇ ನೆಲೆಸಿತ್ತು. ಬಿನ್ನಿ ಅವರು ಇಲ್ಲೇ ಹುಟ್ಟಿ ಬೆಳೆದಿದ್ದಾರೆ. ರೋಜರ್ ಬಿನ್ನಿ ಅವರು ಸಿಂಥಿಯಾ ಅವರನ್ನು ವಿವಾಹವಾಗಿದ್ದು, ಅವರಿಗೆ ಮೂವರು ಮಕ್ಕಳಿದ್ದಾರೆ. ಅವರೇ ಲಾರಾ ಮತ್ತು ಲಿಸಾ ಹೆಣ್ಣುಮಕ್ಕಳು ಹಾಗೂ ಸ್ಟುವರ್ಟ್ ಬಿನ್ನಿ.

ತಂದೆಯಂತೆ ಮಗ ಸ್ಟುವರ್ಟ್ ಬಿನ್ನಿ ಕೂಡ ಭಾರತ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಿದ್ದಾರೆ. ತಂದೆಯಂತೆ ಆಲ್‌ರೌಂಡರ್ ಕೂಡ. ಬಿನ್ನಿ ಪತ್ನಿ ಮಾಯಾಂತಿ ಲ್ಯಾಂಗರ್ ಕ್ರೀಡಾ ಪತ್ರಕರ್ತೆಯಾಗಿದ್ದು, ಕ್ರೀಡಾ ನಿರೂಪಣೆಯಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ | Roger Binny | ಕನ್ನಡಿಗ ರೋಜರ್ ಬಿನ್ನಿ ಬಿಸಿಸಿಐ ಅಧ್ಯಕ್ಷರಾಗಿ ಅವಿರೋಧ ಆಯ್ಕೆ

Exit mobile version