Site icon Vistara News

Asia Cup 2023 : ಬುಮ್ರಾ, ರಾಹುಲ್, ಅಯ್ಯರ್ ಮತ್ತು ಪಂತ್ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಬಿಸಿಸಿಐ

kl rahul injury update

ಬೆಂಗಳೂರು: ಭಾರತ ಕ್ರಿಕೆಟ್​ ತಂಡ ಒಳ್ಳೆಯ ಸುದ್ದಿಗಳು ಇಲ್ಲಿವೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಟಗಾರರ ಫಿಟ್ನೆಸ್ ಬಗ್ಗೆ ಪಕ್ಕಾ ಮಾಹಿತಿ ನೀಡದಿದ್ದರೂ ಕೆಲವೊಂದು ಅಪ್​ಡೇಟ್​ಗಳನ್ನು ನೀಡಿದೆ. ಅದರ ಪ್ರಕಾರ ಗಾಯದ ಸಮಸ್ಯೆಯಿಂದ ಬಳಲಿ ನಗರದ ಎನ್​ಸಿಎನಲ್ಲಿ ಪುನಶ್ಚೇತನಕ್ಕೆ ಒಳಗಾಗುತ್ತಿರುವ ಆಟಗಾರರು ಸುಧಾರಿಸಿಕೊಳ್ಳುತ್ತಿದ್ದಾರೆ. ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಕೆ.ಎಲ್ ರಾಹುಲ್, ಶ್ರೇಯಸ್ ಅಯ್ಯರ್ ಮತ್ತು ರಿಷಭ್ ಪಂತ್ ಅವರ ಬಗ್ಗೆ ಫಿಟ್ನೆಸ್ ಅಪ್ಡೇಟ್ ನೀಡಿದೆ. ಇವರಲ್ಲಿ ಬುಮ್ರಾ, ಪ್ರಸಿದ್ಧ್, ರಾಹುಲ್ ಮತ್ತು ಅಯ್ಯರ್ ಏಷ್ಯಾ ಕಪ್ 2023ರ ವೇಳೆಗೆ ತಂಡಕ್ಕೆ ಪ್ರವೇಶಿಸುವ ಸಾಧ್ಯತೆಗಳಿವೆ. ಗಾಯಗೊಂಡ ಎಲ್ಲಾ ಆಟಗಾರರು ಪ್ರಸ್ತುತ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನರ್ವಸತಿ ಪಡೆಯುತ್ತಿದ್ದಾರೆ.

ಬುಮ್ರಾ, ಪ್ರಸಿದ್ದ್​ ಕೃಷ್ಣ ಕುರಿತು

ಜಸ್ಪ್ರೀತ್ ಬುಮ್ರಾ ಮತ್ತು ಪ್ರಸಿದ್ಧ್ ಕೃಷ್ಣ ಬೆನ್ನುನೋವಿನ ಸಮಸ್ಯೆಯಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಇಬ್ಬರೂ ವೇಗಿಗಳು ಸುಮಾರು ಒಂದು ವರ್ಷದಿಂದ ಆಟದಿಂದ ಹೊರಗುಳಿದಿದ್ದಾರೆ. ಆದರೆ ಒಳ್ಳೆಯ ಸುದ್ದಿಯೆಂದರೆ, ವಿಶ್ವಕಪ್ 2023ರ ವಿಶ್ವ ಕಪ್​ ವೇಳೆಗೆ ಪ್ರಸಿದ್ಧ್ ಅವರ ಪುನರಾಗಮನ ಸಾಧ್ಯವಿದೆ ಎನ್ನಲಾಗಿದೆ. ಇದರಿಂದ ಟೀಮ್ ಇಂಡಿಯಾಕ್ಕೆ ದೊಡ್ಡ ಉತ್ತೇಜನ ನೀಡಲಿದೆ. ಇದೇ ವೇಳೆ ಜಸ್​ಪ್ರಿತ್​ ಬುಮ್ರಾ ಐರ್ಲೆಂಡ್ ಸರಣಿ ವೇಳೆಗೆ ತಂಡಕ್ಕೆ ಮರಳಲು ಸಜ್ಜಾಗಿದ್ದಾರೆ.

ಈ ಇಬ್ಬರು ವೇಗದ ಬೌಲರ್ಗಳು ತಮ್ಮ ಪುನಶ್ಚೇತನದ ಅಂತಿಮ ಹಂತದಲ್ಲಿದ್ದಾರೆ. ನೆಟ್ಸ್​​ನಲ್ಲಿ ತೀವ್ರತೆಯೊಂದಿಗೆ ಬೌಲಿಂಗ್ ಮಾಡುತ್ತಿದ್ದಾರೆ. ಇವರಿಬ್ಬರು ಇನ್ನು ಕೆಲವೇ ದಿನಗಳಲ್ಲಿ ಕೆಲವು ಅಭ್ಯಾಸ ಪಂದ್ಯಗಳನ್ನು ಆಡಲಿದ್ದಾರೆ, ಅದನ್ನು ಎನ್​​ಸಿಎ ಆಯೋಜಿಸಲಿದೆ. ಬಿಸಿಸಿಐ ವೈದ್ಯಕೀಯ ತಂಡವು ಅವರ ಪ್ರಗತಿಯಿಂದ ಸಮಾಧನಗೊಂಡಿದೆ. ಅಭ್ಯಾಸ ಪಂದ್ಯಗಳ ನಂತರ ಅವರನ್ನು ಮೌಲ್ಯಮಾಪನ ಮಾಡಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ.

ರಾಹುಲ್​, ಅಯ್ಯರ್​ ಕುರಿತು

ಶ್ರೇಯಸ್ ಅಯ್ಯರ್ ಆಸ್ಟ್ರೇಲಿಯಾ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಬೆನ್ನು ನೋವಿನ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಿದ್ದರಿಂದ ಅವರು ಐಪಿಎಲ್​ನಿಂದ ಹೊರಗುಳಿದಿದ್ದರು. ಐಪಿಎಲ್ 2023ರ ಸಮಯದಲ್ಲಿ ಕೆಎಲ್ ರಾಹುಲ್ ತೊಡೆ ನೋವಿನ ಗಾಯಕ್ಕೆ ಒಳಗಾಗಿದ್ದರು. ಹೀಗಾಗಿ ಅವರಿಗೂ ಸರ್ಜರಿ ಅನಿವಾರ್ಯವಾಯಿತು. ಈಗ ಇಬ್ಬರೂ ಬ್ಯಾಟರ್​​ಳು ಏಷ್ಯಾ ಕಪ್ 2023ರ ವೇಳೆಗೆ ಮರಳುವ ನಿರೀಕ್ಷೆಯಲ್ಲಿದ್ದಾರೆ.

“ರಾಹುಲ್ ಮತ್ತು ಅಯ್ಯರ್​ ನೆಟ್ಸ್​​ನಲ್ಲಿ ಬ್ಯಾಟಿಂಗ್ ಪುನರಾರಂಭಿಸಿದ್ದಾರೆ. ಪ್ರಸ್ತುತ ಸ್ಟ್ರೆಂಥ್​ ಮತ್ತು ಫಿಟ್ನೆಸ್ ಅಭ್ಯಾಸಗಳಿಗೆ ಒಳಗಾಗುತ್ತಿದ್ದಾರೆ. ಬಿಸಿಸಿಐ ವೈದ್ಯಕೀಯ ತಂಡವು ಅವರ ಪ್ರಗತಿಯಿಂದ ತೃಪ್ತವಾಗಿದೆ. ಮುಂಬರುವ ದಿನಗಳಲ್ಲಿ ಕೌಶಲ್ಯ ಮತ್ತು ಸಾಮರ್ಥ್ಯ ಮತ್ತು ಕಂಡೀಷನಿಂಗ್ ಎರಡರಲ್ಲೂ ಅವರ ತೀವ್ರತೆಯನ್ನು ಹೆಚ್ಚಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ.

ರಿಷಭ್ ಪಂತ್ ಕುರಿತು

ರಿಷಭ್ ಪಂತ್ ಸುಧಾರಣೆ ಕುರಿತು ಸುದ್ದಿ ಹೆಚ್ಚು ಕೌತುಕ ಮೂಡಿಸುತ್ತಿದೆ. ಲಿಗಮೆಂಟ್ ಶಸ್ತ್ರಚಿಕಿತ್ಸೆಯ ನಂತರ ಯುವ ವಿಕೆಟ್ ಕೀಪರ್ ಬ್ಯಾಟರ್​ ವೇಗದಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. 2022ರ ಡಿಸೆಂಬರ್ 30 ರಂದು ಭೀಕರ ಅಪಘಾತದ ನಂತರ ಅವರ ಬಲ ಮೊಣಕಾಲಿನ ಅಸ್ಥಿರಜ್ಜುಗಳಿಗೆ ಹಾನಿಯಾಗಿದ್ದವು. ಆದಾಗ್ಯೂ, ಅವರು ಈಗ ಉತ್ತಮವಾಗಿ ಪ್ರಗತಿ ಸಾಧಿಸುತ್ತಿದ್ದಾರೆ. ಬಿಸಿಸಿಐ ಪ್ರಕಾರ, ಅವರು ಎನ್​ಸಿಎನಲ್ಲಿ ಬ್ಯಾಟಿಂಗ್ ಮತ್ತು ಲೈಟ್ ಕೀಪಿಂಗ್ ಅಭ್ಯಾಸವನ್ನು ಪುನರಾರಂಭಿಸಿದ್ದಾರೆ.

ರಿಷಭ್​ ತಮ್ಮ ಪುನಶ್ಚೇತನದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದಾರೆ. ನೆಟ್ಸ್​​ನಲ್ಲಿ ಬ್ಯಾಟಿಂಗ್ ಮತ್ತು ಕೀಪಿಂಗ್ ಅನ್ನು ಪ್ರಾರಂಭಿಸಿದ್ದಾರೆ. ಅವರು ಪ್ರಸ್ತುತ ಅವರಿಗಾಗಿ ಸಿದ್ಧಗೊಳಿಸಿರುವ ಫಿಟ್​​ನೆಸ್​​ ಕಾರ್ಯಕ್ರಮವನ್ನು ಅನುಸರಿಸುತ್ತಿದ್ದಾರೆ. ಇದರಲ್ಲಿ ಶಕ್ತಿ, ನಮ್ಯತೆ ಮತ್ತು ಓಟವೂ ಸೇರಿದೆ ಎಂದು ಬಿಸಿಸಿಐ ತಿಳಿಸಿದೆ.

Exit mobile version