Site icon Vistara News

Team India : ವಿಶ್ವಕಪ್​ ಫೈನಲ್​ನಲ್ಲಿ ಸೋತಿದ್ದು ಯಾಕೆ? ದ್ರಾವಿಡ್, ರೋಹಿತ್​ಗೆ ಪ್ರಶ್ನೆಗಳ ಸುರಿಮಳೆ

Rohit Sharma1

ಬೆಂಗಳೂರು : ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ (Team India) ತಂಡ ಸೋಲುವುದಕ್ಕೆ ಕಾರಣಗಳು ಏನು ಎಂಬುದರ ಬಗ್ಗೆ ನಿರಂತರ ಚರ್ಚೆಗಳು ನಡೆದಿವೆ. ಇದೀಗ 11 ದಿನಗಳ ನಂತರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧಿಕಾರಿಗಳು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರೊಂದಿಗೆ ಕುಳಿತು ಪಂದ್ಯಾವಳಿಯಲ್ಲಿ ಭಾರತದ ಪ್ರದರ್ಶನವನ್ನು ಪರಿಶೀಲನೆಗೆ ಒಳಪಡಿಸಿದ್ದಾರೆ. ನಾಯಕ ರೋಹಿತ್ ಶರ್ಮಾ ಕೂಡ ವಿಡಿಯೋ ಕಾನ್ಫೆರೆನ್ಸ್​ ಮೂಲಕ ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಕೋಚ್ ಹಾಗೂ ನಾಯಕನಿಗೆ ಬಿಸಿಸಿಐ ಸತತವಾಗಿ ಪ್ರಶ್ನೆಗಳ ಸುರಿಮಳೆಗೈದಿದೆ.

ರೋಹಿತ್ ಶರ್ಮಾ ರಜಾ ಕಳೆಯಲೆಂದು ಲಂಡನ್​ಗೆ ಹೋಗಿದ್ದಾರೆ. ಅಲ್ಲಿಂದಲೇ ಅವರು ಸಭೆಯಲ್ಲಿ ಪಾಲ್ಗೊಂಡರು. ಸತತ 10 ಗೆಲುವುಗಳೊಂದಿಗೆ ಭಾರತವು ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ತಂಡಗಳಲ್ಲಿ ಒಂದಾಗಿತ್ತು ಆದರೆ ಫೈನಲ್​​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆರು ವಿಕೆಟ್​ಗಳಿಂದ ಸೋತಿತು. ದಕ್ಷಿಣ ಆಫ್ರಿಕಾ ಪ್ರವಾಸಕ್ಕಾಗಿ ಭಾರತೀಯ ಏಕದಿನ, ಟಿ 20 ಐ ಮತ್ತು ಟೆಸ್ಟ್ ತಂಡಗಳನ್ನು ಆಯ್ಕೆ ಮಾಡುವುದು ಮತ್ತು ಭವಿಷ್ಯದ ಕ್ರಮದ ಬಗ್ಗೆ ಕಲ್ಪನೆ ಪಡೆಯುವುದು ಸಭೆಯ ಮತ್ತೊಂದು ಕಾರ್ಯಸೂಚಿಯಾಗಿತ್ತು. ಈ ಸಭೆಯಲ್ಲಿ ಸೋಲಿಗೆ ಸ್ಪಷ್ಟ ಕಾರಣಗಳನ್ನು ಕೊಡುವಂತೆ ಬಿಸಿಸಿಐ ಅಧಿಕಾರಿಗಳು ಕೋಚ್​ ದ್ರಾವಿಡ್ ಹಾಗೂ ನಾಯಕ ರೋಹಿತ್​ಗೆ ಪ್ರಶ್ನೆಗಳನ್ನು ಕೇಳಿದ್ದಾರೆ.

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಉಪಾಧ್ಯಕ್ಷ ರಾಜೀವ್ ಶುಕ್ಲಾ ಮತ್ತು ಖಜಾಂಚಿ ಆಶಿಶ್ ಶೆಲಾರ್ ಸಭೆಯಲ್ಲಿ ಭಾಗವಹಿಸಿದ್ದರು. ವರದಿಗಳ ಪ್ರಕಾರ ನವೆಂಬರ್ 19 ರಂದು ನಡೆದ ಫೈನಲ್ ಪಂದ್ಯದಲ್ಲಿ ಭಾರತದ ಕಳಪೆ ಪ್ರದರ್ಶನದ ಹಿಂದಿನ ಕಾರಣಗಳ ಬಗ್ಗೆ ಅವರು ಪ್ರಶ್ನಿಸಿದ್ದಾರೆ. ಕೋಚ್​ ದ್ರಾವಿಡ್ ಅವರ ಅವಧಿ ಫೈನಲ್ ಪಂದ್ಯಕ್ಕೆ ಕೊನೆಗೊಂಡಿದ್ದರೂ ಇದೀಗ ಮತ್ತೆ ವಿಸ್ತರಣೆ ಮಾಡಲಾಗಿದೆ. ಅವರು 2024ರ ಟಿ20 ವಿಶ್ವ ಕಪ್​ ಮುಕ್ತಾಯದ ತನಕ ಅದೇ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.

ಪಿಚ್​ ಸರಿಯಿರಲಿಲ್ಲ

ಅಹ್ಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್ ಅನ್ನು ದ್ರಾವಿಡ್ ದೂಷಿಸಿದ್ದಾರೆ ಎಂದು ವರದಿಯಾಗಿದೆ. ಭಾರತೀಯ ತಂಡದ ಮ್ಯಾನೇಜ್ಮೆಂಟ್ ನಿರೀಕ್ಷಿಸಿದಷ್ಟು ಪಿಚ್ ಅನುಕೂಲಕರವಾಗಿರಲಿಲ್ಲ ಎಂದು ಭಾರತದ ಮಾಜಿ ನಾಯಕ ಹೇಳಿದ್ದಾರೆ ಎಂಬುದಾಗಿ ವರದಿಯಾಗಿದೆ. ಚೇಸಿಂಗ್​ನಲ್ಲಿ ಆಸ್ಟ್ರೇಲಿಯಾ ತಂಡದ ಬ್ಯಾಟರ್​ಗಳನ್ನು ಔಟ್​ ಮಾಡದೇ ಇರಲು ಅದುವೇ ಕಾರಣ ಎನ್ನಲಾಗಿದೆ.

ನಿಧಾನಗತಿಯ ಪಿಚ್

ಫೈನಲ್​ ಪಂದ್ಯವನ್ನು ಬಳಸಿದ ಪಿಚ್ ನಲ್ಲಿ ಆಡಿಸಲಾಗಿತ್ತು. ಪಾಕಿಸ್ತಾನ ವಿರುದ್ಧದ ಲೀಗ್ ಪಂದ್ಯಕ್ಕೆ ಇದೇ ಪಿಚ್ ಬಳಸಲಾಗಿತ್ತು. ಭಾರತವು ಆ ಪಂದ್ಯವನ್ನು ಸಾಕಷ್ಟು ಆರಾಮವಾಗಿ ಗೆದ್ದಿತ್ತು. ಇಲ್ಲಿ ಪ್ರಮುಖ ಅಂಶವಾಗಿದ್ದು ಟಾಸ್. ಫೈನಲ್​​ನಲ್ಲಿ ಭಾರತದಂತೆಯೇ ಪಾಕಿಸ್ತಾನವು ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿತ್ತು. ಫೈನಲ್​ನಲ್ಲಿ ನಾಯಕ ರೋಹಿತ್ ಶರ್ಮಾ ಚುರುಕಿನ ಆರಂಭದ ಹೊರತಾಗಿಯೂ, ಭಾರತದ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಮಧ್ಯಮ ಓವರ್​ಗಳಲ್ಲಿ ಹೆಣಗಾಡಿದ್ದರು.

ಪಿಚ್​ನ ನಿಧಾನಗತಿಯ ಸ್ವಭಾವ ಮತ್ತು ಆಸ್ಟ್ರೇಲಿಯಾದ ಬೌಲರ್​ಗಳ ಕಾರ್ಯಕ್ಷಮತೆಯೂ ಇಲ್ಲಿ ಎದ್ದು ಕಂಡಿದೆ. ಬಳಸಿದ ಪಿಚ್ ಅನ್ನು ಸ್ಥಳೀಯ ಕ್ಯುರೇಟರ್ ಸಲಹೆಯ ಮೇರೆಗೆ ಆಯ್ಕೆ ಮಾಡಲಾಗಿತ್ತು. ವಿಶ್ವಕಪ್​ನ ನಾಕೌಟ್ ಪಂದ್ಯಗಳಿಗೆ ಹೊಸ ಪಿಚ್ ಸಿದ್ಧಪಡಿಸುವುದನ್ನು ಐಸಿಸಿ ನಿಯಮವು ಕಡ್ಡಾಯಗೊಳಿಸಿಲ್ಲ. ಆದಾಗ್ಯೂ ಹೊಸ ಪಿಚ್​ ಸೂಕ್ತ ಎಂದು ಹೇಳಲಾಗುತ್ತದೆ. ಆದರೆ, ಭಾರತದಲ್ಲಿ ಬಹುತೇಕ ಬಳಸಿದ ಪಿಚ್​ನಲ್ಲಿ ಆಡಿಸಲಾಗಿತ್ತು.

ಇದನ್ನೂ ಓದಿ : Rohit Sharma : ಟಿ20 ನಾಯಕತ್ವದ ಗೊಂದಲದ ನಡುವೆಯೇ ವಿದೇಶದಲ್ಲಿ ಪತ್ತೆಯಾದ್ರು ರೋಹಿತ್ ಶರ್ಮಾ

ಸ್ಪಿನ್ನರ್​ಗಳಿಗೆ ನೆರವಾಗುವ ಉದ್ದೇಶದಿಂದ ಪಿಚ್​ಗೆ ಕಡಿಮೆ ನೀರು ಹಾಕಲಾಗಿತ್ತು. ಅದು ಭಾರತಕ್ಕೇ ಮುಳುವಾಯಿತು. ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿದ್ದರು. ಮೊದಲ ಇನ್ನಿಂಗ್ಸ್​​ನಲ್ಲಿ 240 ರನ್​ಗಳಿಗೆ ಆಲೌಟ್ ಆಯಿತು. ಟ್ರಾವಿಸ್ ಹೆಡ್ ಅವರ ಅದ್ಭುತ ಶತಕದ ನೆರವಿನಿಂದ ಆಸ್ಟ್ರೇಲಿಯಾ ಗೆದ್ದಿತ್ತು.

Exit mobile version