ಮುಂಬಯಿ: ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿಗೆ(BCCI Selection Committee) ಚೇತನ್ ಶರ್ಮಾ ಮತ್ತೊಂದು ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ವಿಚಾರವನ್ನು ಬಿಸಿಸಿಐ ಟ್ವೀಟ್ ಮಾಡುವ ಮೂಲಕ ಖಚಿತ ಪಡಿಸಿದೆ.
ಟಿ20 ವಿಶ್ವ ಕಪ್ನಲ್ಲಿ ಭಾರತ ಕಳಪೆ ಪ್ರದರ್ಶನ ತೋರಿದ ಕಾರಣ ಬಿಸಿಸಿಐ ಚೇತನ್ ಶರ್ಮಾ ಸಾರಥ್ಯದ ಆಯ್ಕೆ ಸಮಿತಿಯನ್ನು ದಿಢೀರ್ ಬರ್ಖಾಸ್ತು ಮಾಡಿತ್ತು. ಆದರೆ ಇದೀಗ ಮತ್ತೊಂದು ಅವಧಿಗೆ ಅವರಿಗೆ ಬಿಸಿಸಿಐ ಮಣೆಹಾಕಿದೆ. ಶನಿವಾರ ಬಿಸಿಸಿಐ ತನ್ನ ಅಧಿಕೃತ ಪ್ರಕಟಣೆಯಲ್ಲಿ ಚೇತನ್ ಶರ್ಮಾ ಮತ್ತೊಂದು ಬಾರಿಗೆ ಟೀಮ್ ಇಂಡಿಯಾದ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ತಿಳಿಸಿದೆ. ಆದರೆ ಈ ಸಮಿತಿಗೆ ನಾಲ್ವರನ್ನು ಹೊಸದಾಗಿ ನೇಮಕ ಮಾಡಲಾಗಿದೆ.
ನೂತನ ಆಯ್ಕೆ ಸಮಿತಿಯಲ್ಲಿ ಚೇತನ್ ಶರ್ಮಾ ಮಾತ್ರ ಹಳೆಯ ಮುಖವಾಗಿದ್ದು, ಉಳಿದ ನಾಲ್ವರು ಮೊದಲ ಬಾರಿಗೆ ಹಿರಿಯ ಆಯ್ಕೆ ಸಮಿತಿಯ ಭಾಗವಾಗಲಿದ್ದಾರೆ. ಇದರಲ್ಲಿ ಮಾಜಿ ಕ್ರಿಕೆಟಿಗರಾದ ಸಲೀಲ್ ಅಂಕೋಲಾ, ಶಿವಸುಂದರ್ ದಾಸ್, ಸುಬ್ರೋತೊ ಬ್ಯಾನರ್ಜಿ ಮತ್ತು ಶ್ರೀಧರನ್ ಶರತ್ ಸ್ಥಾನ ಪಡೆದಿದ್ದಾರೆ.
ಮೊದಲೇ ಸುಳಿವು ಸಿಕ್ಕಿತ್ತು
ಹೊಸ ವರ್ಷದಂದು ನಡೆದ ಬಿಸಿಸಿಐ ಸಭೆಯಲ್ಲಿ ಪಾಲ್ಗೊಳ್ಳುವಂತೆ ಚೇತನ್ ಶರ್ಮಾ ಅವರನ್ನು ಬಿಸಿಸಿಐ ಆಹ್ವಾನಿಸಿತ್ತು. ಈ ವೇಳೆಯೇ ಅವರು ಮತ್ತೆ ಟೀಮ್ ಇಂಡಿಯಾ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಮುಂದುವರಿಯಲಿದ್ದಾರೆ ಎಂದು ತಿಳಿದು ಬಂದಿತ್ತು. ಆದರೆ ಇದು ಅಧಿಕೃತಗೊಂಡಿರಲಿಲ್ಲ. ಇದೀಗ ಅಧಿಕೃತಗೊಂಡಿದೆ. ಈ ರೇಸ್ನಲ್ಲಿದ್ದ ಕನ್ನಡಿಗ ವೆಂಕಟೇಶ್ ಪ್ರಸಾದ್ಗೆ ನಿರಾಸೆಯಾಗಿದೆ.
ಇದನ್ನೂ ಓದಿ | BCCI Review Meeting | ಏಕ ದಿನ ವಿಶ್ವ ಕಪ್ಗೆ ತಂಡದ ರಚನೆ, ಒತ್ತಡದ ನಿರ್ವಹಣೆಗೆ ಆದ್ಯತೆ