ಮುಂಬಯಿ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್(Sachin Tendulkar) ಅವರ ಪುತ್ರ ಅರ್ಜುನ್ ತೆಂಡೂಲ್ಕರ್(Arjun Tendulkar) ಸೇರಿ 20 ಮಂದಿ ಯುವ ಕ್ರಿಕೆಟ್ ಆಟಗಾರರಿಗೆ ಬಿಸಿಸಿಐ ಸಮನ್ಸ್(BCCI Summons) ನೀಡಿದೆ. ಸಮನ್ಸ್ ಎಂದಾಕ್ಷಣ ಆಟಗಾರರ ವಿರುದ್ಧ ಇಲ್ಲಿ ಯಾವುದೇ ಶಿಸ್ತು ಕ್ರಮ ಕೈಗೊಳ್ಳಲಾಗುವುದಿಲ್ಲ. ಬದಲಾಗಿ ಇದು ತರಬೇತಿಯಲ್ಲಿ ಪಾಲ್ಗೊಳ್ಳುವಂತೆ ನೀಡಿದ ಕರೆಯಾಗಿದೆ.
ಭಾರತ ತಂಡ ಕಳೆದೊಂದು ದಶಕದಿಂದ ಐಸಿಸಿ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗುತ್ತಿದೆ. ಕಳೆದ ವಾರ ಮುಕ್ತಾಯ ಕಂಡ ಟೆಸ್ಟ್ ವಿಶ್ವ ಕಪ್ನಲ್ಲಿಯೂ ಹೀನಾಯ ಸೋಲು ಕಂಡಿತ್ತು. ಇದೀಗ ಎಚ್ಚೆತ್ತುಕೊಂಡಿರುವ ಬಿಸಿಸಿಐ, ಭವಿಷ್ಯದಲ್ಲಿ ಉತ್ತಮ ತಂಡವನ್ನು ರೂಪಿಸಲು ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ. ಇದೇ ನಿಟ್ಟಿನಲ್ಲಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಸುಮಾರು ಮೂರು ವಾರಗಳ ಶಿಬಿರಕ್ಕೆ 20 ಸಂಭಾವ್ಯ ಆಲ್‌ರೌಂಡರ್‌ಗಳನ್ನು ಕರೆಸಿದೆ.
ಈ ವರ್ಷದ ಕೊನೆಯಲ್ಲಿ ಉದಯೋನ್ಮುಖ ಏಷ್ಯಾ ಕಪ್ (U-23) ನಡೆಯಲಿದೆ. ಈ ಟೂರ್ನಿಯ ಜತೆಗೆ ಭಾರತ ತಂಡಕ್ಕೂ ಸೂಕ್ತವಾದ ಆಟಗಾರರನ್ನು ಗುರುತಿಸುವ ನಿಟ್ಟಿನಲ್ಲಿ ಬಿಸಿಸಿಐ ಸಂಭಾವ್ಯ ಯುವ ಆಟಗಾರರಿಗೆ ಈ ಶಿಬಿರದಲ್ಲಿ ಪಾಲ್ಗೊಳ್ಳುವಂತೆ ಸೂಚನೆ ನೀಡಿದೆ.
ವಿವಿಎಸ್ ಲಕ್ಷ್ಮಣ್ ಕಲ್ಪನೆ
ಈ ಶಿಬಿರವು ಭಾರತ ತಂಡದ ಮಾಜಿ ಆಟಗಾರ ಹಾಗೂ ಪ್ರಸ್ತುತ ಎನ್‌ಸಿಎ ಕ್ರಿಕೆಟ್‌ನ ಮುಖ್ಯಸ್ಥರಾಗಿರುವ ವಿವಿಎಸ್ ಲಕ್ಷ್ಮಣ್(VVS Laxman) ಅವರ ಕಲ್ಪನೆಯಾಗಿದೆ ಎಂದು ತಿಳಿದುಬಂದಿದೆ. ಇದೇ ವಿಚಾರವಾಗಿ ಪಿಟಿಐ ಜತೆ ಮಾತನಾಡಿರುವ ಬಿಸಿಸಿಐ ಅಧಿಕಾರಿಯೊಬ್ಬರು, “ಇತ್ತೀಚಿನ ದಿನಗಳಲ್ಲಿ ಭಾರತ ತಂಡಕ್ಕೆ ಸೂಕ್ತ ಆಲ್ರೌಂಡರ್ಗಳ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ ಹಲವಾರು ಸ್ವರೂಪಗಳಲ್ಲಿ ಬಹು-ನುರಿತ ಆಟಗಾರರನ್ನು ಹುಡುಕುವ ಪ್ರಯತ್ನಕ್ಕೆ ಕೈ ಹಾಕಿದ್ದೇವೆ. ಇದು ಲಕ್ಷ್ಮಣ್ ಅವರ ಕಲ್ಪನೆಯಾಗಿದೆ” ಎಂದು ಅವರು ಹೇಳಿದರು.
ಸದ್ಯ ಆಯ್ಕೆಗೊಂಡಿರುವ 20 ಯುವ ಆಟಗಾರರು ಶಿವಸುಂದರ್ ದಾಸ್ (ಮಧ್ಯಂತರ) ನೇತೃತ್ವದ ಹಿರಿಯ ರಾಷ್ಟ್ರೀಯ ಆಯ್ಕೆ ಸಮಿತಿಯು ಪ್ರದರ್ಶನ ಮತ್ತು ಸಾಮರ್ಥ್ಯದ ಆಧಾರದ ಮೇಲೆ ಈ ಆಟಗಾರರನ್ನು ಆಯ್ಕೆ ಮಾಡಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ BCCI: ದೇಶಿ ಕ್ರಿಕೆಟ್ ಟೂರ್ನಿಯ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಪರ ಪದಾರ್ಪಣೆ ಮಾಡಿರುವ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ಅವರು ಈ ಶಿಬಿರದ ಪ್ರಮುಖ ಆಕರ್ಷಣೆಯಾಗಿದ್ದಾರೆ. ಇದೇ ವರ್ಷ ಗೋವಾ ಪರ ಪ್ರಥಮ ದರ್ಜೆ ಕ್ರಿಕೆಟ್ ಆಡಿದ ಅವರು ಚೊಚ್ಚಲ ಪ್ರಯತ್ನದಲ್ಲೇ ತಂದೆಯಂತೆ ಶತಕ ಸಿಡಿಸಿ ಮಿಂಚಿದ್ದರು. ಒಟ್ಟಾರೆ ಬಿಸಿಸಿಐಯ ಈ ನಿರ್ಧಾರದಿಂದ ಹಲವು ಯುವ ಆಟಗಾರರು ಬೆಳಕಿಗೆ ಬರುವುದಂತು ಖಂಡಿತ ಎನ್ನಬಹುದು.