Site icon Vistara News

ಕೊಹ್ಲಿ, ರೋಹಿತ್​ ಟಿ20 ವಿಶ್ವಕಪ್​ ಭವಿಷ್ಯ ಬಿಸಿಸಿಐ ಕೈಯಲ್ಲಿ; ಈ ದಿನ ನಿರ್ಧಾರ ಪ್ರಕಟ!

virat kohli rohit sharma

ಮುಂಬಯಿ: ಭಾರತ ಕ್ರಿಕೆಟ್​ ತಂಡ ಏಕದಿನ ವಿಶ್ವಕಪ್​ ಫೈನಲ್​ನಲ್ಲಿ ಸೋಲು ಕಂಡ ಬಳಿಕ ಎಲ್ಲಡೆ ಚರ್ಚೆಯಾಗುತ್ತಿರುವ ವಿಚಾರವೆಂದರೆ, ವಿರಾಟ್​ ಕೊಹ್ಲಿ(virat kohli) ಮತ್ತು ರೋಹಿತ್​ ಶರ್ಮ(rohit sharma) ಅವರು 2024ರ ಟಿ20 ವಿಶ್ವಕಪ್​ನಲ್ಲಿ ಆಡಲಿದ್ದಾರಾ ಎನ್ನುವುದು. ಮೂಲಗಳ ಪ್ರಕಾರ ಬಿಸಿಸಿಐ(BCCI) ಮುಂದಿನ ವಾರ ಇದೇ ವಿಚಾರವಾಗಿ ಕೊಹ್ಲಿ ಮತ್ತು ರೋಹಿತ್(Virat Kohli-Rohit Sharma)​ ಜತೆ ಚರ್ಚಿಸಿ ಸ್ಪಷ್ಟ ನಿರ್ಧಾರವೊಂದನ್ನು ಕೈಗೊಳ್ಳಲಿದೆ ಎಂದು ವರದಿಯಾಗಿದೆ.

ಒಂದು ವರ್ಷದಿಂದ ಟಿ20 ಕ್ರಿಕೆಟ್​ ಆಡಿಲ್ಲ

2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಸೆಮಿಫೈನಲ್​ನಲ್ಲಿ ನಿರ್ಗಮಿಸಿತ್ತು. ಇದಾದ ಬಳಿಕ ರೋಹಿತ್ ಮತ್ತು ಕೊಹ್ಲಿ ಒಂದೇ ಒಂದು ಟಿ20 ಪಂದ್ಯವನ್ನು ಕೂಡ ಇದುವರೆಗೆ ಆಡಿಲ್ಲ. ಅಂದಿನಿಂದಲೂ ಟಿ20 ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಜತೆಗ ಯುವ ಆಟಗಾರರೇ ಕಣಕ್ಕಿಳಿಯುತ್ತಿದ್ದಾರೆ. ಹೀಗಾಗಿ ಮುಂದಿನ ಟಿ20 ವಿಶ್ವಕಪ್​ ಟೂರ್ನಿಯಲ್ಲೂ ಕೊಹ್ಲಿ ಮತ್ತು ರೋಹಿತ್ ಆಡುವುದು ಬಹುತೇಕ ಅನುಮಾನ ಎನ್ನಲಾಗಿದೆ.

ಅಡ್ಡ ಗೋಡೆ ಮೇಲೆ ಬಿಸಿಸಿಐ ದೀಪ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಟಿ20 ಅಂತಾರಾಷ್ಟ್ರೀಯ ಭವಿಷ್ಯವನ್ನು ಸ್ವತಂತ್ರವಾಗಿ ನಿರ್ಧರಿಸಲು ಅವರಿಗೆ ಅಧಿಕಾರ ನೀಡುವುದಾಗಿ ತಿಳಿಸಿದೆ. ಆದರೆ ಉಭಯ ಆಟಗಾರರಿಗೆ ಯಾವುದೇ ಟಿ20 ಸರಣಿಯಲ್ಲಿ ಆಡುವ ಅವಕಾಶ ಮಾತ್ರ ನೀಡುತ್ತಿಲ್ಲ. ರೋಹಿತ್​ ಮತ್ತು ಕೊಹ್ಲಿ 2024ರಲ್ಲಿ ನಡೆಯುವ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುವ ಬಯಕೆಯನ್ನು ವ್ಯಕ್ತಪಡಿಸಿದರೆ, ಅವರ ವೈಯಕ್ತಿಕ ಆಯ್ಕೆಗಳನ್ನು ಮಂಡಳಿ ಗೌರವಿಸಲಿದೆ. ಇದಕ್ಕೆ ನಮ್ಮ ಅಭ್ಯಂತರವಿಲ್ಲ. ಅದು ಅವರ ಇಚ್ಛೆ ಎಂದು ಬಿಸಿಸಿಐ ತಿಳಿಸಿತ್ತು. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಗೂ ಮುನ್ನ ಬಿಸಿಸಿಐ ಕೊಹ್ಲಿ ಮತ್ತು ರೋಹಿತ್​ ಜತೆ ಫೈನಲ್​ ಹಂತದ ಮಾತುಕತೆ ನಡೆಸಲಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಕ್ರಿಕ್​ಇನ್ಫೋ ವರದಿ ಮಾಡಿದೆ.

ಇದನ್ನೂ ಓದಿ BCCI : ಬಿಸಿಸಿಐಗೆ ದೊಡ್ಡ ಮೊತ್ತ ಬಾಕಿ, ಬೈಜೂಸ್​ಗೆ ಮತ್ತೊಂದು ಸಂಕಷ್ಟ

ಇನ್ನೊಂದು ಮೂಲಗಳ ಪ್ರಕಾರ ರೋಹಿತ್​ ಶರ್ಮ ಮತ್ತು ವಿರಾಟ್​ ಕೊಹ್ಲಿ ಟಿ20 ಕ್ರಿಕೆಟ್​ನಿಂದ ಈಗಾಗಲೇ ದೂರ ಉಳಿಯಲು ನಿರ್ಧರಿಸಿದ್ದು ಕೇವಲ ಟೆಸ್ಟ್​ ಮತ್ತು ಏಕದಿನ ಕ್ರಿಕೆಟ್​ಗೆ ಮಾತ್ರ ಗಮನ ನೀಡಲು ನಿರ್ಧರಿಸಿರುವುದಾಗಿ ವರದಿಯೊಂದು ತಿಳಿಸಿದೆ. ಏಕದಿನ ವಿಶ್ವಕಪ್​ ಸೋಲಿನ ಬಳಿಕವೇ ಉಭಯ ಆಟಗಾರರು ಈ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಆದರೆ, ಉಭಯ ಆಟಗಾರರು ಈ ವಿಚಾರವನ್ನು ಅಧಿಕೃತವಾಗಿ ಎಲ್ಲಿಯೂ ಇದುವರೆಗೆ ಹೇಳಿಲ್ಲ. ಕೆಲ ದಿನಗಳಲ್ಲಿ ಈ ನಿರ್ಧಾರ ಪ್ರಕಟಿಸಿದರೂ ಅಚ್ಚರಿಯಿಲ್ಲ.

ಇದನ್ನೂ ಓದಿ ಸಚಿನ್ ಅವರ ಈ ದಾಖಲೆ ಮುರಿಯಲು ವಿರಾಟ್​ ಕೊಹ್ಲಿಗೆ ಅಸಾಧ್ಯ; ಲಾರಾ ವಿಶ್ವಾಸ ​

ಯುವ ಆಟಗಾರರ ದಂಡೇ ಇದೆ

ರೋಹಿತ್​ ಶರ್ಮಾ ಮತ್ತು ವಿರಾಟ್​ ಟಿ20 ಕ್ರಿಕೆಟ್​ನಿಂದ ದೂರ ಉಳಿದರೂ ತಂಡದಲ್ಲಿ ಯುವ ಆಟಗಾರರ ದಂಡೇ ಇದೆ. ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಇಶಾನ್ ಕಿಶನ್, ಋತುರಾಜ್ ಗಾಯಕ್ವಾಡ್, ರಿಂಕು ಸಿಂಗ್​, ತಿಲಕ್​ ವರ್ಮ ಹೀಗ ಪಟ್ಟಿ ಬೆಳಯುತ್ತಲೇ ಸಾಗುತ್ತದೆ. ಅಲ್ಲದೆ ಈ ಎಲ್ಲ ಯುವ ಆಟಗಾರರು ಈಗಾಗಲೇ ಆಡಿದ ಎಲ್ಲ ಸರಣಿಯಲ್ಲಿಯೂ ಉತ್ತಮ ಪ್ರದರ್ಶನ ತೋರುವ ಮೂಲಕ ಭವಿಷ್ಯದ ತಾರೆಗಳಾಗಿ ಗುರುತಿಸಿಕೊಂಡಿದ್ದಾರೆ. ಈ ಎಲ್ಲ ಅಂಶವನ್ನು ಮುಂದಿಟ್ಟು ಬಿಸಿಸಿಐ ಕೊಹ್ಲಿ ಮತ್ತು ರೋಹಿತ್​ ಟಿ20 ಭವಿಷ್ಯದಲ್ಲಿ ಯಾವ ರೀತಿಯ ನಿಲುವನ್ನು ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

Exit mobile version