ಮುಂಬಯಿ: ಭಾರತ ಕ್ರಿಕೆಟ್ ತಂಡದ ತವರು ಪಂದ್ಯಗಳ ನೇರಪ್ರಸಾರದ ಹಕ್ಕನ್ನು ವಯಾಕಾಮ್ 18(Viacom18) ಪಡೆದುಕೊಂಡಿದೆ. ಮುಂದಿನ 5 ವರ್ಷಗಳ ಕಾಲ ಈ ಒಪ್ಪಂದ ಚಾಲ್ತಿಯಲ್ಲಿ ಇರಲಿದೆ. ಒಪ್ಪಂದ ಪ್ರಕಾರ ಭಾರತೀಯ ಕ್ರಿಕೆಟ್ ತಂಡದ ತವರು ಪಂದ್ಯಗಳಿಗೆ ಟಿವಿ ಮತ್ತು ಡಿಜಿಟಲ್ ಹಕ್ಕುಗಳನ್ನು(BCCI TV And Digital Media Rights) ವಯಾಕಾಮ್ 18 ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಈ ವಿಚಾರವನ್ನು ಬಿಸಿಸಿಐ(BCCI) ಖಚಿತಪಡಿಸಿದೆ.
8,200 ಕೋಟಿ ರೂ.
ಹಲವು ವಾರಗಳಿಂದ ಭಾರತ ಕ್ರಿಕೆಟ್ ತಂಡದ ತವರು ಪಂದ್ಯಗಳ ನೇರಪ್ರಸಾರದ ಹಕ್ಕಿನ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇತ್ತು. ಆರಂಭದಲ್ಲಿ ಸ್ಟಾರ್ಸ್ಪೋರ್ಟ್ಸ್ ಈ ಹಕ್ಕನ್ನು ಪಡೆಯಲಿದೆ ಎಂದು ಹೇಳಲಾಗಿತ್ತು. ಆದರೆ ಇದೀಗ ಅಂತಿಮವಾಗಿ ಭಾರತದ 88 ತವರು ಪಂದ್ಯಗಳಿಗೆ ಪ್ರತ್ಯೇಕ ಟೆಲಿವಿಷನ್ ಮತ್ತು ಡಿಜಿಟಲ್ ಹಕ್ಕುಗಳನ್ನು ವಯಾಕಾಮ್ 18 ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮೂಲಗಳ ಅಂದಾಜಿನ ಪ್ರಕಾರ ಬಿಸಿಸಿಐ ಪಂದ್ಯಗಳ ಮಾರಾಟದಿಂದ ಒಟ್ಟು ಆದಾಯದಲ್ಲಿ ಒಂದು ಬಿಲಿಯನ್ ಯುಎಸ್ ಡಾಲರ್ (8,200 ಕೋಟಿ. ರೂ) ಪಡೆಯುವ ನಿರೀಕ್ಷೆಯಿದೆ ಎಂದು ಪಿಟಿಐ ವರದಿ ಮಾಡಿದೆ.
ಐದು ವರ್ಷಗಳ ತವರು ಸರಣಿಯ ಪಟ್ಟಿ
ಐದು ವರ್ಷಗಳ ಅವಧಿಯುಲ್ಲಿ ಇದೇ ವರ್ಷ ತವರಿನಲ್ಲಿ ನಡೆಯುವ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧದ ಪಂದ್ಯಗಳ ಸರಣಿಯೂ ಒಳಗೊಂಡಿದೆ. ಒಟ್ಟಾರೆಯಾಗಿ ಆಸ್ಟ್ರೇಲಿಯಾ ವಿರುದ್ಧ ಭಾರತ ಮುಂದಿನ ಐದು ವರ್ಷಗಳಲ್ಲಿ ಪೂರ್ವ ನಿಗದಿಯಾದಂತೆ ಒಟ್ಟು 21 ಪಂದ್ಯಗಳನ್ನು ಆಡಲಿದೆ. ಇದರಲ್ಲಿ ಐದು ಟೆಸ್ಟ್ ಪಂದ್ಯಗಳು, ಆರು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು ಮತ್ತು ಹತ್ತು ಟ್ವೆಂಟಿ 20 ಪಂದ್ಯಗಳು ಸೇರಿವೆ. ಈ ಸಂಖ್ಯೆ ಮುಂದಿನ ದಿನಗಳಲ್ಲಿ ಹೆಚ್ಚಾದರೂ ಅಚ್ಚರಿಯಿಲ್ಲ.
ಆಸ್ಟ್ರೇಲಿಯಾವನ್ನು ಹೊರತು ಪಡಿಸಿ ಇಂಗ್ಲೆಂಡ್ ವಿರುದ್ಧ 18 ಪಂದ್ಯಗಳು ನಡೆಯಲಿದೆ. ಹತ್ತು ಟೆಸ್ಟ್, ಮೂರು ಏಕದಿನ ಮತ್ತು 5 ಟಿ20 ಪಂದ್ಯಗಳು ಒಳಗೊಂಡಿದೆ. ಈ ಅವಧಿಯಲ್ಲಿ ಭಾರತವು ಒಟ್ಟು 25 ಟೆಸ್ಟ್ ಗಳು, 27 ಏಕದಿನಗಳು ಮತ್ತು 36 ಟಿ20 ಪಂದ್ಯಗಳನ್ನು ಆಡುತ್ತದೆ. ಆದರೆ ಮುಂದಿನ ದಿನಗಳಲ್ಲಿ ಬೇರೆ ದೇಶದ ಜತೆ ಸರಣಿ ನಿಗದಿಯಾದರೆ ಪಂದ್ಯಗಳ ಸಂಖ್ಯೆ ಹೆಚ್ಚಾಗಲಿದೆ. ಜತೆಗೆ ಬಿಸಿಸಿಐ ಕೂಡ ಹೆಚ್ಚಿನ ಆದಾಯ ಪಡೆಯಲಿದೆ. ಮುಂದಿನ 5 ವರ್ಷ ತವರು ಪಂದ್ಯಗಳ ನೇರಪ್ರಸಾರದ ಹಕ್ಕನ್ನು ಪಡೆದ ವಯಾಕಾಮ್ 18 ಸಂಸ್ಥೆಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅಭಿನಂದನೆ ಸಲ್ಲಿದ್ದಾರೆ.
ಇದನ್ನೂ ಓದಿ BCCI Meeting: ಬಿಸಿಸಿಐ ಮಹತ್ವದ ಸಭೆಯಲ್ಲಿ ರೋಹಿತ್,ದ್ರಾವಿಡ್ ಭಾಗಿ; ವಿಶ್ವಕಪ್ ಬಗ್ಗೆ ಚರ್ಚೆ
ಈ ಹಿಂದೆ ಬಿಸಿಸಿಐ ಡಿಸ್ನಿ ಸ್ಟಾರ್‌ನೊಂದಿಗೆ ಮಾಧ್ಯಮ ಹಕ್ಕುಗಳ ಒಪ್ಪಂದ ಮಾಡಿಕೊಂಡಿತ್ತು. ಇದು ಇದೇ ವರ್ಷ ಮಾರ್ಚ್ನಲ್ಲಿ ಕೊನೆಗೊಂಡಿತ್ತು. ಡಿಸ್ನಿ ಸ್ಟಾರ್ ಸಂಸ್ಥೆ ಮಾಧ್ಯಮ ಹಕ್ಕುಗಳನ್ನು 6138.10 ಕೋಟಿ ರೂ.ಗೆ ಪಡೆದುಕೊಂಡಿತ್ತು. ಎಲ್ಲ ಸ್ವರೂಪಗಳ ಪ್ರತಿ ಅಂತಾರಾಷ್ಟ್ರೀಯ ಪಂದ್ಯಕ್ಕೆ 61 ಕೋಟಿ ರೂ.ಪಾವತಿಸಿತ್ತು.