ಮುಂಬಯಿ : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಭಾನುವಾರ ಮುಂಬರುವ ಟಿ೨೦ ವಿಶ್ವ ಕಪ್‌ನಲ್ಲಿ ಆಡಲಿರುವ ಭಾರತ ತಂಡಕ್ಕಾಗಿ (Team India) ವಿನ್ಯಾಸ ಮಾಡಲಾಗಿರುವ ಹೊಸ ಜರ್ಸಿಯನ್ನು ಅನಾವರಣ ಮಾಡಿತು. ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ತವರಿನ ಚುಟುಕು ಕ್ರಿಕೆಟ್ ಸರಣಿಯಲ್ಲೂ ರೋಹಿತ್ ಶರ್ಮ ಬಳಗ ಇದೇ ಜರ್ಸಿ ಧರಿಸಿ ಆಡಲಿದೆ.
ಮುಂದಿನ ಟಿ೨೦ ವಿಶ್ವ ಕಪ್‌ಗೆ ಹೊಸ ಜರ್ಸಿಯನ್ನು ವಿನ್ಯಾಸ ಮಾಡಲಾಗುವುದು ಎಂದು ಬಿಸಿಸಿಐ ಈ ಹಿಂದೆಯೇ ಘೋಷಿಸಿತ್ತು. ಅಂತೆಯೇ ಭಾನುವಾರ ಕಿಟ್ ಪ್ರಾಯೋಜಕ ಸಂಸ್ಥೆ ಎಮ್‌ಪಿಎಲ್‌ನ ಹೆಸರು ಹೊಂದಿರುವ ಹೊಸ ಜರ್ಸಿಯನ್ನು ಅನಾವರಣ ಮಾಡಿದೆ. ಈ ಮೂಲಕ ಹೊಸ ದಿರಿಸಿನ ನೋಟವನ್ನು ವೀಕ್ಷಿಸಲು ಕಾತರದಿಂದ ಕಾಯುತ್ತಿದ್ದ ಕ್ರಿಕೆಟ್ ಅಭಿಮಾನಿಗಳ ಕೌತುಕಕ್ಕೆ ತೆರೆ ಬಿತ್ತು. ಈ ಮೂಲಕ ಎಮ್‌ಪಿಎಲ್ ೨೦೨೦ರಲ್ಲಿ ಕಿಟ್ ಪ್ರಾಯೋಜಕತ್ವ ಪಡೆದ ಬಳಿಕ ಮೂರು ಬಾರಿ ವಿನ್ಯಾಸ ಬದಲಿಸಿದಂತಾಗಿದೆ.
ಹೇಗಿದೇ ಹೊಸ ಜರ್ಸಿ?
ಹೊಸ ಜೆರ್ಸಿ ಆಕಾಶ ನೀಲಿ (ಸ್ಕೈ ಬ್ಲೂ) ಬಣ್ಣದಿಂದ ಕೂಡಿದ್ದು, ಭುಜ ಮತ್ತು ತೋಳುಗಳ ಮೇಲೆ ಗಾಢ ನೀಲಿ ಬಣ್ಣವಿದೆ. ಟೀಂ ಇಂಡಿಯಾದ ಹೊಸ ಜರ್ಸಿ ಹಿಂದಿಗಿಂತ ಸ್ವಲ್ಪ ಭಿನ್ನವಾಗಿ ಕಾಣಿಸುತ್ತದೆ. ಟಿ ಶರ್ಟ್‌ನ ಬಲಭಾಗದಲ್ಲಿ ಎಮ್‌ಪಿಎಲ್ ಲೋಗೊ ಹಾಕಲಾಗಿದೆ. ಎಡ ಭಾಗದಲ್ಲಿ ಬಿಸಿಸಿಐ ಲೋಗೋ ಇದೆ. ಇಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಸ್ವಲ್ಪ ಕೆಳಗೆ ಬಿಸಿಸಿಐನ ಪ್ರಾಯೋಜಕ ಸಂಸ್ಥೆ ಬೈಜೂಸ್‌ನ ಲೋಗೋ ಇದೆ. ಅದರ ಕೆಳಗೆ ಇಂಡಿಯಾ ಎಂದ ದೊಡ್ಡದಾಗಿ ಬರೆಯಲಾಗಿದೆ.ಇಲ್ಲೂ ಏನೂ ವ್ಯತ್ಯಾಸವಾಗಿಲ್ಲ. ಅಂತೆಯೇ ಹಳೆಯ ಜರ್ಸಿಯಲ್ಲಿ ಕಾಲರ್ ಬಳಿಯ ಹಾಗೂ ಎರಡೂ ಪಾರ್ಶ್ವಗಳಲ್ಲಿ ಬಳಸಿದ್ದ ಕೇಸರಿ ಬಣ್ಣವನ್ನು ತೆಗೆಯಲಾಗಿದೆ. ಆದರೆ, ಉಳಿದ ಭಾಗದಲ್ಲಿನ ಶೇಡ್ ಹಾಗೂ ಡಿಸೈನ್ ಬದಲಾಗಿವೆ.
ಯಾರೆಲ್ಲ ಇದ್ದಾರೆ ಪೋಸ್ಟರ್‌ನಲ್ಲಿ?
ಹೊಸ ಜರ್ಸಿ ಅನಾವರಣ ಮಾಡಿದ ಬಿಸಿಸಿಐ ಪೋಸ್ಟರ್ ಒಂದನ್ನು ಟ್ವೀಟ್ ಮಾಡಿದೆ. ಅದರಲ್ಲಿ ಮೂವರು ಪುರುಷ ಹಾಗೂ ಅಷ್ಟೇ ಸಂಖ್ಯೆಯ ಮಹಿಳಾ ಕ್ರಿಕೆಟಿಗರ ಚಿತ್ರ ಬಳಸಿದ್ದಾರೆ. ಪುರುಷರ ತಂಡದ ನಾಯಕ ರೋಹಿತ್ ಶರ್ಮ, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ಹಿಟ್ಟರ್ ಸೂರ್ಯಕುಮಾರ್ ಯಾದವ್, ಮಹಿಳೆಯರ ತಂಡದ ನಾಯಕಿ ಹರ್ಮನ್‌ಪ್ರೀತ್‌ಕೌರ್, ಹಿಟ್ಟರ್ ಶಫಾಲಿ ವರ್ಮ ಹಾಗೂ ಬೌಲರ್ ರೇಣುಕಾ ಸಿಂಗ್ ಪೋಸ್ಟರ್‌ನಲ್ಲಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಟಿ೨೦ ಸರಣಿಯ ಸೆಪ್ಟೆಂಬರ್ ೨೦ರಂದು ಆರಂಭಗೊಂಡರೆ, ವಿಶ್ವ ಕಪ್ ಅಕ್ಟೋಬರ್ ೧೬ರಿಂದ ಶುರುವಾಗಲಿದೆ.
ವಿಶ್ವ ಕಪ್‌ಗೆ ಭಾರತ ತಂಡ
ರೋಹಿತ್ ಶರ್ಮ (ನಾಯಕ), ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ, ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಹಲ್, ಅಕ್ಷರ್ ಪಟೇಲ್, ಜಸ್‌ಪ್ರಿತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಶ್‌ದೀಪ್ ಸಿಂಗ್.
ಇದನ್ನೂ ಓದಿ | T20 World Cup | ಬುಮ್ರಾ, ಹರ್ಷಲ್ ವಾಪಸ್; ಟಿ20 ವಿಶ್ವ ಕಪ್‌ಗೆ 15 ಸದಸ್ಯರ ಟೀಮ್ ಇಂಡಿಯಾ ಪ್ರಕಟ