ಹೈದರಾಬಾದ್: ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಐಪಿಎಲ್ನ (IPL 2023) ಜನಪ್ರಿಯತೆಯನ್ನು ದುರ್ಬಳಕೆ ಮಾಡುವ ದೊಡ್ಡ ಜಾಲವೇ ಬೆಳೆದುಬಿಟ್ಟಿದೆ. ಬೆಟ್ಟಿಂಗ್ ಮೂಲಕ ಮುಗ್ಧ ಜನರನ್ನು ಮೋಸದ ಬಲೆಗೆ ಬೀಳಿಸುತ್ತಿದ್ದ ದುಷ್ಕರ್ಮಿಗಳು ಇದೀಗ ನಕಲಿ ಟಿಕೆಟ್ ಕೂಡ ಮಾರಾಟ ಮಾಡುವ ಮೂಲಕ ಜನರನ್ನು ವಂಚಿಸುತ್ತಿದ್ದಾರೆ. ಹೀಗಾಗಿ ಐಪಿಎಲ್ ಟಿಕೆಟ್ಗಳನ್ನು ಅಧಿಕೃತ ಟಿಕೆಟ್ ಕೌಂಟರ್ ಅಥವಾ ವೆಬ್ಸೈಟ್ನಿಂದ ಮಾತ್ರ ಪಡೆದುಕೊಳ್ಳಬೇಕು. ಮೂರನೇ ವ್ಯಕ್ತಿಯಿಂದ ಹೆಚ್ಚುವರಿ ದುಡ್ಡು ಕೊಟ್ಟು ಪಡೆದುಕೊಂಡರೆ ಮೋಸಕ್ಕೆ ಒಳಗಾಗುವುದು ಖಚಿತ.
ಹೈದರಾಬಾದ್ ಪೊಲೀಸರು ಇಂಥದ್ದೊಂದು ದೊಡ್ಡ ಜಾಲವನ್ನು ಪತ್ತೆ ಹಚ್ಚಿ 13 ಮಂದಿಯನ್ನು ಸೆರೆಮನೆಗೆ ಕಳುಹಿಸಿದ್ದಾರೆ. ಈ ಖದೀಮರು ಏಪ್ರಿಲ್ 18ರಂದು ಹೈದರಾಬಾದ್ನಲ್ಲಿ ಮುಂಬಯಿ ಇಂಡಿಯನ್ಸ್ ಹಾಗೂ ಎಸ್ಆರ್ಎಚ್ ನಡುವಿನ ಪಂದ್ಯದ ಟಿಕೆಟ್ನ ಅನ್ನು ನಕಲಿ ಮಾಡಿ ಮಾರಾಟ ಮಾಡಿದ್ದರು. ಪಂದ್ಯದ ದಿನ ಸ್ಟೇಡಿಯಮ್ ಒಳಗೆ ನಕಲಿ ಟಿಕೆಟ್ ಪಡೆದುಕೊಂಡ ನೂರಾರು ಜನರು ಪ್ರವೇಶ ಪಡೆದುಕೊಂಡಿದ್ದರು. ಅಧಿಕೃತ ಟಿಕೆಟ್ ಪಡೆದುಕೊಂಡವರು ಒಳಗೆ ಬಂದು ನೋಡಿದರೆ ಅವರ ಸೀಟ್ಗಳು ಭರ್ತಿಯಾಗಿದ್ದವು. ಅಲ್ಲಿ ಕುಳಿತವರ ಬಳಿಯೂ ಟಿಕೆಟ್ಗಳಿದ್ದವು. ಈ ವೇಳೆ ಡೂಪ್ಲಿಕೇಟ್ ಟಿಕೆಟ್ ತಯಾರಿಕಾ ಜಾಲದ ಸುಳಿವು ಸಿಕ್ಕಿದೆ.
ರಾಚಕೊಂಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ನಕಲಿ ಟಿಕೆಟ್ ತಯಾರಿಕೆಯ ದೊಡ್ಡ ಜಾಲವೇ ಬಲೆಗೆ ಬಿದ್ದಿದೆ. ನಕಲಿ ಐಡಿ ಕಾರ್ಡ್ಗಳನ್ನು ಬಳಸಿಕೊಂಡು ಸ್ಟೇಡಿಮ್ ಒಳಗೆ ಬಂದಿದ್ದ ಮೋಸಗಾರರು ಪಂದ್ಯವನ್ನು ವೀಕ್ಷಿಸಿದ್ದರು. ಅದಲ್ಲದೆ, ಟಿಕೆಟ್ ವೆಂಡರ್ ಮೂಲಕ ಅಸಲಿ ಟಿಕೆಟ್ನ ಬಾರ್ಕೋಡ್ಗಳನ್ನು ಕಾಪಿ ಮಾಡಿಕೊಂಡು ಪಡೆದು ನಕಲಿ ಟಿಕೆಟ್ಗಳನ್ನು ತಯಾರಿಸಿ ಮಾರಾಟ ಮಾಡಿದ್ದರು.
ಸ್ಪಂದನಾ ಎಂಬ ಕಾನೂನು ವಿದ್ಯಾರ್ಥಿನಿಯೊಬ್ಬರು ಏಪ್ರಿಲ್ 18ರಂದು ತಮ್ಮ ಟಿಕೆಟ್ನೊಂದಿಗೆ ಪಂದ್ಯ ನೋಡಲು ಸ್ಟೇಡಿಯಮ್ ಪ್ರವೇಶ ಮಾಡಿದ್ದರು. ಅಲ್ಲಿ ಹೋಗಿ ನೋಡಿದರೆ ಅವರ ಸೀಟ್ನಲ್ಲಿ ಯಾರೊ ಕುಳಿತಿದ್ದರು. ಕಾನೂನು ವಿದ್ಯಾರ್ಥಿಯಾಗಿದ್ದ ಕಾರಣ ತಕ್ಷಣ ಅವರು ಅದನ್ನು ಅಲ್ಲಿನ ಅಧಿಕಾರಿಗಳ ಗಮನಕ್ಕೆ ತಂದರು. ಅವರು ಸ್ಪಂದನಾ ಅವರಿಗೆ ಬೇರೆ ಆಸನದ ವ್ಯವಸ್ಥೆ ಮಾಡಿಕೊಟ್ಟಿದ್ದರು. ಆದರೆ, ಅದೇ ರೀತಿಯ ದೂರುಗಳು ಹಲವಾರು ಬಂದಾಗ ಮೋಸ ನಡೆದಿರುವುದು ಗೊತ್ತಾಯಿತು. ತಕ್ಷಣ ದೂರು ದಾಖಲಿಸಿದ್ದರು.
ಇದನ್ನೂ ಓದಿ : IPL 2023 : ಹಾಲಿ ಐಪಿಎಲ್ನಲ್ಲಿ ಮೊದಲ ಸಿಕ್ಸರ್ ಬಾರಿಸಿದ ಡೇವಿಡ್ ವಾರ್ನರ್!
ನಕಲಿ ಐಡಿ ಕಾರ್ಡ್ಗಳನ್ನು ಬಳಸಿಕೊಂಡು ಸ್ಟೇಡಿಯಮ್ ಪ್ರವೇಶ ಮಾಡಿದ ವ್ಯಕ್ತಿಗಳೇ ನಕಲಿ ಟಿಕೆಟ್ ಮಾರಾಟ ಮಾಡಿದ್ದಾರೆ ಎಂಬುದಾಗಿ ಪೊಲೀಸರು ಹೇಳಿದ್ದಾರೆ. ಸ್ಟೇಡಿಯಮ್ ಒಳಗಿನ ಸಿಬ್ಬಂದಿ ಜತೆಗಿನ ಪರಿಚಯವನ್ನು ದುರ್ಬಳಕೆ ಮಾಡಿಕೊಂಡಿರು ಅವರು ನಕಲಿ ಟಿಕೆಟ್ ತಯಾರಿಸಿ ಮಾರಾಟ ಮಾಡಿ ಮೋಸ ಮಾಡಿದ್ದರು.
ಹೈದರಾಬಾದ್ ತಂಡದ ಕಳಪೆ ಪ್ರದರ್ಶನ
ಏಡೆನ್ ಮಾರ್ಕ್ರಮ್ ನೇತೃತ್ವದ ಸನ್ ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ 16ನೇ ಅವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡುತ್ತಿದೆ. ಇದುವರೆಗೆ ಅಡಿರುವ ಏಳು ಪಂದ್ಯಗಳಲ್ಲಿ ಐದರಲ್ಲಿ ಪರಾಜಯಗೊಂಡಿದೆ. ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿ ನಾಲ್ಕು ಪಾಯಿಂಟ್ಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿದೆ. ಸೋಮವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲೂ ಸೋಲುವ ಮೂಲಕ ತನ್ನ ದೌರ್ಬಲ್ಯವನ್ನು ಸಾಬೀತು ಮಾಡಿದೆ. ಮೊದಲು ಬ್ಯಾಟ್ ಮಾಡಿದ ಡೆಲ್ಲಿ ತಂಡ 144 ರನ್ ಬಾರಿಸಿತ್ತು. ಈ ಗುರಿಯನ್ನೂ ಬೆನ್ನೆಟ್ಟಲು ಸಾಧ್ಯವಾಗದೇ ಏಳು ರನ್ಗಳಿಂದ ಸೋಲು ಕಂಡಿತ್ತು. ಅತ್ತ ಡೆಲ್ಲಿ ಕ್ಯಾಪಿಟಲ್ಸ್ ಬಳಗವೂ ಹಾಲಿ ಆವೃತ್ತಿಯಲ್ಲಿ ನಿರಾಶಾದಾಯಕ ಪ್ರದರ್ಶನ ತೋರುತ್ತಿದೆ. ತಂಡದ ಬ್ಯಾಟರ್ಗಳ ವೈಫಲ್ಯದಿಂದ ಆಡಿರುವ ಏಳು ಹಣಾಹಣಿಗಳಲ್ಲಿ ಕೇವಲ ಎರಡಲ್ಲಿ ಮಾತ್ರ ಗೆಲುವು ಸಾಧಿಸಿದೆ.