Site icon Vistara News

Delhi High Court: ಸಾರ್ವಜನಿಕ ಜೀವನದಲ್ಲಿರುವವರು ದಪ್ಪ ಚರ್ಮದವರಾಗಿರಬೇಕು; ಗಂಭೀರ್‌ಗೆ ದಿಲ್ಲಿ ಹೈಕೋರ್ಟ್ ಕಿವಿಮಾತು

Be thick-skinned, Delhi High Court says to gautam gambhir

ನವದೆಹಲಿ: ಸಾಮಾಜಿಕ ಮಾಧ್ಯಮಗಳ ಈ ಯುಗದಲ್ಲಿ ಸಾರ್ವಜನಿಕ ಜೀವನದಲ್ಲಿರುವ ನ್ಯಾಯಾಧೀಶರು ಸೇರಿದಂತೆ ರಾಜಕಾರಣಿಗಳು ಸಹ ದಪ್ಪ ಚರ್ಮದವರಾಗಿರಬೇಕು ಎಂದು ದೆಹಲಿ ಹೈಕೋರ್ಟ್ (Delhi High Court) ಬುಧವಾರ ಅಭಿಪ್ರಾಯಪಟ್ಟಿದೆ. ಹಿಂದಿ ಪತ್ರಿಕೆಯ ವಿರುದ್ಧ ಈಸ್ಟ್ ದಿಲ್ಲಿ ಸಂಸದರೂ ಆಗಿರುವ ಕ್ರಿಕೆಟಿಗ ಗೌತಮ್ ಗಂಭೀರ್ (Gautam Gambhir) ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದು, ಆ ಪ್ರಕರಣ ವಿಚಾರಣೆ ವೇಳೆ ಕೋರ್ಟ್ ಅಭಿಪ್ರಾಯಪಟ್ಟಿದೆ.

ಮಧ್ಯಂತರ ತಡೆ ಕೋರಿದ್ದ ಗೌತಮ್ ಗಂಭೀರ್ ಅವರ ಮಧ್ಯಂತರ ಕೋರಿಕೆಯನ್ನು ನ್ಯಾಯಮೂರ್ತಿ ಚಂದ್ರಧಾರಿ ಸಿಂಗ್ ನಿರಾಕರಿಸಿದರು. ಸಂಪೂರ್ಣ ಸುರಕ್ಷತೆಯನ್ನು ಒದಗಿಸಲು ಸಾಧ್ಯವಿಲ್ಲ ಎಂದ ಕೋರ್ಟ್, ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಲು ಪಂಜಾಬ್ ಕೇಸರಿ ಪತ್ರಿಕೆಯ ಸಂಪಾದಕ ಹಾಗೂ ವರದಿಗಾರರಿಗೆ ನೋಟಿಸ್ ಜಾರಿ ಮಾಡಿತು.

ಪಂಜಾಬ್ ಕೇಸರಿ ಪತ್ರಿಕೆ ವಿರುದ್ದ ಗೌತಮ್ ಗಂಭೀರ್ ಅವರು 2 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಗೌತಮ್ ಗಂಭೀರ್ ಜಾತಿವಾದಿ ಹಾಗೂ ತಂಟೆಕೋರ ರಾಜಕಾರಣಿ ಎಂದು ತಮ್ಮ ಸರಣಿ ಲೇಖನಗಳಲ್ಲಿ ಅವಮಾನ ಮಾಡಿದ್ದಾರೆಂದು ಅರ್ಜಿದಾರರು ಆರೋಪಿಸಿದ್ದಾರೆ.

ಗೌತಮ್ ಗಂಭೀರ್ ಅವರ ಪರವಾಗಿ ಜೈ ಅನಂತ್ ದೇಹದ್ರಾಯಿ ಅವರು ವಾದವನ್ನು ಆಲಿಸಿದ ನ್ಯಾಯಮೂರ್ತಿ ಚಂದ್ರಧಾರಿ ಸಿಂಗ್ ಅವರು, ನೀವೊಬ್ಬ ಸಾರ್ವಜನಿಕ ವ್ಯಕ್ತಿ ಮತ್ತು ಚುನಾಯಿತ ಪ್ರತಿನಿಧಿಯಾಗಿದ್ದೀರಿ. ಹಾಗಾಗಿ, ತೀರಾ ಅಷ್ಟೊಂದು ಸೂಕ್ಷ್ಮ ವ್ಯಕ್ತಿಯಾಗುವ ಅಗತ್ಯವಿಲ್ಲ. ಸೋಷಿಯಲ್ ಮೀಡಿಯಾ ಜಮಾನದಲ್ಲಿ ಸಾರ್ವಜನಿಕ ಜೀವನದಲ್ಲಿರುವವರು ದಪ್ಪ ಚರ್ಮದವರಾಗಿರಬೇಕಾದ ಅಗತ್ಯವಿದೆ. ಇದಕ್ಕೆ ಜಡ್ಜ್‌ ಕೂಡ ಹೊರತಲ್ಲ ಎಂದು ಅವರು ಹೇಳಿದರು.

ಏನಿದು ಪ್ರಕರಣ?

ಮಾಜಿ ಕ್ರಿಕೆಟಿಗ ಮತ್ತು ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರು ಹಿಂದಿ ದಿನಪತ್ರಿಕೆ ಪಂಜಾಬ್ ಕೇಸರಿ ವಿರುದ್ಧ ದೆಹಲಿ ಹೈಕೋರ್ಟ್​​ನಲ್ಲಿ 2 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ತಮ್ಮನ್ನು ಪುರಾಣದಲ್ಲಿನ ರಾಕ್ಷಸ ಪಾತ್ರವಾಗಿರುವ ಭಸ್ಮಾಸುರನಿಗೆ ಹೋಲಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಪಂಜಾಬ್​ ಕೇಸರಿ ಪತ್ರಿಕೆಯ ಸಂಪಾದಕ ಆದಿತ್ಯ ಚೋಪ್ರಾ ಮತ್ತು ವರದಿಗಾರರಾದ ಅಮಿತ್ ಕುಮಾರ್ ಮತ್ತು ಇಮ್ರಾನ್ ಖಾನ್ ವಿರುದ್ಧ ಗಂಭೀರ್​ ಮೊಕದ್ದಮೆ ಹೂಡಿದ್ದಾರೆ. ತಮ್ಮನ್ನು ವ್ಯವಸ್ಥಿತವಾಗಿ ಗುರಿಯಾಗಿಸಿಕೊಂಡು ಹಲವಾರು ದುರುದ್ದೇಶಪೂರಿತ ಮತ್ತು ಮಾನಹಾನಿಕರ ಲೇಖನಗಳನ್ನು ಪ್ರಕಟಿಸಿರುವ ಈ ಮೂವರು ಪತ್ರಿಕೋದ್ಯಮ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಗಂಭೀರ್​ ಆರೋಪಿಸಿದ್ದಾರೆ.

ವಕೀಲ ಜೈ ಅನಂತ್ ದೆಹದ್ರಾಯ್ ಅವರ ಮೂಲಕ ಸಲ್ಲಿಸಿದ ಮೊಕದ್ದಮೆಯಲ್ಲಿ ಗಂಭೀರ್, ಪತ್ರಿಕೆಯು ನನ್ನ ಕಥೆಗಳಿಗೆ ಅನಗತ್ಯ ತಿರುವುಗಳನ್ನು ನೀಡಲಾಗಿದೆ, ಪತ್ರಿಕೆಯು ಭಸ್ಮಾಸುರ ಎಂದು ಕರೆಯುವ ಮೂಲಕ ವರದಿಯಲ್ಲಿ ಅವಮಾನ ಮಾಡಲಾಗಿದೆ ಎಂದು ಗಂಭೀರ್​ ಆರೋಪಿಸಿದ್ದಾರೆ.

ಇದನ್ನೂ ಓದಿ: Gautam Gambhir: ಎಬಿಡಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಗೌತಮ್​ ಗಂಭೀರ್!

ಡೆಲ್ಲಿಯ ಸಂಸದ ನಾಪತ್ತೆಯಾಗಿದ್ದು ಅವರನ್ನು ಡೆಲ್ಲಿಯ ಮಂದಿ ಹುಡುಕುತ್ತಿದ್ದಾರೆ. ಡೆಲ್ಲಿಯಂದ ಕಣ್ಮರೆಯಾಗಿರುವ ಸಂಸದರು ಲಕ್ನೊ ಸೂಪರ್​ ಜೈಂಟ್ಸ್​ ತಂಡವನ್ನು ಭಸ್ಮಾಸುರನಂತೆ ನಾಶ ಮಾಡುತ್ತಿದ್ದಾರೆ. ಸಭೆಗಳನ್ನು ನಡೆಸುವ ವೇಳೆ ಈ ಸಂಸದನಿಂದ ದೂರವಿರಿ ಎಂದು ವರದಿಯಲ್ಲಿ ಬರೆಯುವ ಮೂಲಕ ನನಗೆ ಅವಮಾನ ಮಾಡಲಾಗಿದೆ ಎಂದು ಗಂಭೀರ್​ ದೂರಿದ್ದಾರೆ.

Exit mobile version