Site icon Vistara News

ಮೆಕಲಮ್​ ಹೇಳಿದ ರೇಸ್​ನಲ್ಲಿ ಓಡುವ ‘ಬೆನ್​ ಸ್ಟೋಕ್ಸ್’​! ಏನಿದರ ರಹಸ್ಯ?

Ben Stokes and mccullum

ಲಂಡನ್​: ನ್ಯೂಜಿಲ್ಯಾಂಡ್​ ತಂಡದ ಮಾಜಿ ನಾಯಕ ಬ್ರೆಂಡನ್​ ಮೆಕಲಮ್(Brendon McCullum) ಅವರು ಇಂಗ್ಲೆಂಡ್​ ಟೆಸ್ಟ್ ತಂಡದ ಕೋಚ್​ ಆದ ಬಳಿಕ ಇಂಗ್ಲೆಂಡ್​ ತಂಡ ಉತ್ತಮ ಪ್ರಗತಿ ಕಂಡಿದೆ. ನಾಯಕ ಬೆನ್​ ಸ್ಟೋಕ್ಸ್(Ben Stokes)​ ಮತ್ತು ಮೆಕಲಮ್ ಅವರು ಜೋಡೆತ್ತಿನ ರೀತಿಯ ಕಾಂಬಿನೇಷನ್​ನಿಂದ ತಂಡ ಶ್ರೇಷ್ಠ ಪ್ರದರ್ಶನ ತೋರುತ್ತಿದೆ. ಜತೆಗೆ ಟೆಸ್ಟ್ ಕ್ರಿಕೆಟ್​ನಲ್ಲಿ ನೂತನ ಪ್ರಯೋಗವನ್ನು ಮಾಡುವ ಮೂಲಕವು ಹೊಸತನವನ್ನು ಪರಿಚಯಿಸಿತ್ತುತ್ತಿದ್ದಾರೆ. ಆದರೆ ಈ ಬಾರಿ ಕ್ರಿಕೆಟ್​ಗಿಂತ ಬೇರೆಯೇ ವಿಷಯದಲ್ಲಿ ಉಭಯ ಆಟಗಾರರ ಹೆಸರು ಮೆಲುಕು ಹಾಕಿದೆ.

ಬ್ರೆಂಡನ್ ಮೆಕಲಮ್ ಕ್ರಿಕೆಟ್​​ ಜತೆಗೆ ಕುದುರೆ ರೇಸಿಂಗ್​ನಲ್ಲಿಯೂ(Horse racing) ಅಪಾರ ಆಸಕ್ತಿ ಹೊಂದಿದ್ದಾರೆ. ಬಿಡುವಿನ ವೇಳೆ ವಿಶ್ವದ ಯಾವುದೇ ಮೂಲೆಯಲ್ಲಿ ಕುದುರೆ ರೇಸ್​ ನಡೆದರೆ ಅಲ್ಲಿ ಮೆಕಲಮ್ ಕಾಣಿಸಿಕೊಳ್ಳುತ್ತಾರೆ. ಇದಲ್ಲದೆ ತಮ್ಮ ಕುದುರೆಗಳನ್ನು ಈ ರೇಸ್​ಗಳಲ್ಲಿ ಸ್ಪರ್ಧಿಸುತ್ತಿರುತ್ತಾರೆ. ಹಲವು ಕುದುರೆಗಳನ್ನು ಸಾಕಿರುವ ಮೆಕಲಮ್​​, ಇದರಲ್ಲಿ ಒಂದು ಕುದುರೆಗೆ ಬೆನ್​ ಸ್ಟೋಕ್ಸ್​ ಎಂದು ಹೆಸರಿಟ್ಟಿದ್ದಾರೆ. ಇದೇ ವಿಚಾರವಾಗಿ ಇವರು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್​ ಆಗಿದ್ದಾರೆ.

ನ್ಯೂಜಿಲೆಂಡ್​ನಲ್ಲಿ ನಡೆದ ಕುದುರೆ ರೇಸ್​ ಒಂದರಲ್ಲಿ ಬೆನ್​ ಸ್ಟೋಕ್ಸ್ ಹೆಸರಿನ ಕುದುರೆ ಭಾಗವಹಿಸಿದೆ. ಇಲ್ಲಿ ಈ ಕುದುರೆ ದ್ವಿತೀಯ ಸ್ಥಾನ ಪಡೆದಿದೆ. ಕುದುರೆಗೆ ಸ್ಟೋಕ್ಸ್ ಎಂದು ​ನಾಮಕರಣ ಮಾಡಿದ ಕಾರಣವನ್ನು ಮೆಕಲಮ್ ಬಹಿರಂಗಪಡಿಸಿದ್ದಾರೆ.

“ಬೆನ್ ಸ್ಟೋಕ್ಸ್​ ಒಬ್ಬ ಫೈಟರ್. ಪಂದ್ಯ ಯಾವುದೇ ಸ್ಥಿತಿಯಲ್ಲಿದ್ದರೂ ಅಂತಿಮ ಕ್ಷಣದವರೆಗೂ ಹೋರಾಡಿ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಪಣತೊಟ್ಟಿರುತ್ತಾರೆ. ಅವರ ಈ ಹೋರಾಟದ ಗುಣ ಎಂಥವರಿಗೂ ಸ್ಫೂರ್ತಿ. ಹೀಗಾಗಿ ಈ ಕುದುರೆಗೂ ಫೈಟಿಂಗ್ ಸ್ಪಿರಿಟ್ ಇರಬೇಕು” ಎಂಬ ಕಾರಣಕ್ಕಾಗಿ ಅವರ ಹೆಸರನ್ನು ಇಟ್ಟಿರುವುದಾಗಿ ಮೆಕಲಮ್​​ ತಿಳಿಸಿದರು.

ಇದನ್ನೂ ಓದಿ Ashes 2023 : ಆಸ್ಟ್ರೇಲಿಯಾ ತಂಡದ ವಿರುದ್ಧ ಸಿಟ್ಟಿಗೆದ್ದು ಶತಕ ಬಾರಿಸಿದ ಇಂಗ್ಲೆಂಡ್​ ನಾಯಕ ಬೆನ್​ಸ್ಟೋಕ್ಸ್​!

ಇಂಗ್ಲೆಂಡ್​ ತಂಡ ಚೊಚ್ಚಲ ಏಕದಿನ ವಿಶ್ವಕಪ್​ ಗೆಲ್ಲುವಲ್ಲಿ ಮತ್ತು 2022 ಟಿ20 ವಿಶ್ವಕಪ್​ ಗೆಲ್ಲುವಲ್ಲಿ ಬೆನ್​ ಸ್ಟೋಕ್ಸ್​ ಪ್ರಮುಖ ಪಾತ್ರವಹಿಸಿದ್ದರು. ಫೈನಲ್​ನಲ್ಲಿ ಏಕಾಂಗಿಯಾಗಿ ಹೋರಾಡಿ ತಂಡವನ್ನು ಚಾಂಪಿಯನ್​ ಪಟ್ಟಕ್ಕೇರಿಸಿದ್ದರು. ಸದ್ಯ ಆ್ಯಶಸ್​ ಸರಣಿ ಆಡುತ್ತಿರುವ ಇಂಗ್ಲೆಂಡ್​ ನಾಲ್ಕನೇ ಟೆಸ್ಟ್​ ಪಂದ್ಯವನ್ನಾಡಲು ಸಜ್ಜಾಗಿದೆ. ಈ ಪಂದ್ಯ ಜುಲೈ 19ರಂದು ನಡೆಯಲಿದೆ. ಈಗಾಗಲೇ 5 ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್​ 1-2 ಹಿನ್ನಡೆಯಲ್ಲಿದೆ. ಸರಣಿ ಜೀವಂತವಿರಿಸಬೇಕಿದ್ದರೆ 4ನೇ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಸಂಕಟ್ಟಕ್ಕೆ ಸಿಲುಕಿದೆ.

Exit mobile version