Site icon Vistara News

IPL 2023 | ಧೋನಿಯ ಉತ್ತರಾಧಿಕಾರಿ ಆಗುವರೇ ಬೆನ್​ಸ್ಟೋಕ್ಸ್​; ತಂಡದ ಸಿಇಒ ಹೇಳುವುದೇನು?

Stokes

ಕೊಚ್ಚಿ: ಕೇರಳದ ಕೊಚ್ಚಿಯಲ್ಲಿ ಡಿಸೆಂಬರ್​ 23ರಂದು ನಡೆದ ಐಪಿಎಲ್​ (IPL 2023) ಮಿನಿ ಹರಾಜಿನಲ್ಲಿ ಇಂಗ್ಲೆಂಡ್​ ಟೆಸ್ಟ್​ ತಂಡದ ನಾಯಕ ಹಾಗೂ ವಿಶ್ವ ಕ್ರಿಕೆಟ್​ನ ಸ್ಟಾರ್​ ಆಲ್​ರೌಂಡರ್​ ಬೆನ್​ ಸ್ಟೋಕ್ಸ್​​ ಚೆನ್ನೈ ತಂಡ ಸೇರಿಕೊಂಡಿದ್ದಾರೆ. ಅವರಿಗಾಗಿ ಚೆನ್ನೈ ಬಳಗ 16.25 ಕೋಟಿ ರೂಪಾಯಿ ಹೂಡಿಕೆ ಮಾಡಿದೆ. ಎಷ್ಟಾದರೂ ಸರಿ ಸ್ಟೋಕ್ಸ್​ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲೇಬೇಕು ಎಂದು ಪಣತೊಟ್ಟವರಂತೆ ತಂಡದ ಫ್ರಾಂಚೈಸಿ ಮಾಲೀಕರು ಬಿಡ್​ ಮಾಡಿದ್ದರು.

ಸಿಎಸ್​ಕೆ ಮಾಲೀಕರು ಬೆನ್ ​ಸ್ಟೋಕ್ಸ್​ ಅವರನ್ನು ತಮ್ಮ ತಂಡಕ್ಕೆ ಸೇರಿಕೊಳ್ಳಲು ದೊಡ್ಡ ಮೊತ್ತವನ್ನು ಹೂಡಿಕೆ ಮಾಡುವಲ್ಲಿ ದೊಡ್ಡ ಯೋಜನೆಯಿದೆ. ಅವರನ್ನು ತಂಡದ ಮುಂದಿನ ನಾಯಕರನ್ನಾಗಿ ಆಯ್ಕೆ ಮಾಡುವುದೇ ರಣತಂತ್ರದ ಭಾಗ ಎನ್ನಲಾಗಿದೆ. ಯಾಕೆಂದರೆ ಮಹೇಂದ್ರ ಸಿಂಗ್​ ಧೋನಿಗೆ ಹಾಲಿ ಆವೃತ್ತಿ ಕೊನೇ ಐಪಿಎಲ್​ ಆಗಿದ್ದು, ಮುಂದಿನ ವರ್ಷದಿಂದ ಹೊಸ ನಾಯಕರನ್ನು ಹುಡುಕುವುದು ತಂಡದ ಅನಿವಾರ್ಯತೆಯಾಗಿದೆ. ಹೀಗಾಗಿ ಆಲ್​ರೌಂಡರ್​ ಹಾಗೂ ನಾಯಕತ್ವದಲ್ಲೂ ಉತ್ತಮ ಟ್ರ್ಯಾಕ್​ ರೆಕಾರ್ಡ್​ ಹೊಂದಿರುವ ಸ್ಟೋಕ್ಸ್​ ಅವರನ್ನು ಧೋನಿಯ ಉತ್ತರಾಧಿಕಾರಿಯಾಗಿ ನೇಮಕ ಮಾಡಲು ಫ್ರಾಂಚೈಸಿ ಮುಂದಾಗಿದೆ ಎನ್ನಲಾಗಿದೆ.

ಕಳೆದ ಆವೃತ್ತಿಯ ಆಲ್​ರೌಂಡರ್​ ರವೀಂದ್ರ ಜಡೇಜಾ ಅವರನ್ನು ಚೆನ್ನೈ ಸೂಪರ್​ ಕಿಂಗ್ಸ್ ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು. ಆದರೆ, ಅವರು ನಾಯಕತ್ವದ ಜವಾಬ್ದಾರಿಯಲ್ಲಿ ಸಂಪೂರ್ಣ ವೈಫಲ್ಯ ಕಂಡಿದ್ದರು. ಬಳಿಕ ಧೋನಿಯೇ ನಾಯಕತ್ವದ ಜವಾಬ್ದಾರಿಯನ್ನು ಮತ್ತೆ ಹೆಗಲೇರಿಸಿಕೊಂಡಿದ್ದರು. ಹೀಗಾಗಿ ಹೊಸ ನಾಯಕನ ಹುಡುಕಾಟದಲ್ಲಿದ್ದ ತಂಡದ ಮ್ಯಾನೇಜ್ಮೆಂಟ್​ ಕಣ್ಣಿಗೆ ಧೋನಿ ಸಿಕ್ಕಿದ್ದಾರೆ.

ಧೋನಿ ಪ್ರತಿಕ್ರಿಯೆ ಏನು?

ಬೆನ್​ ಸ್ಟೋಕ್ಸ್​ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದಕ್ಕೆ ಸಿಎಸ್​ಕೆ ನಾಯಕ ಮಹೇಂದ್ರ ಸಿಂಗ್​ ಧೋನಿಯೂ ಸಂತಸ ವ್ಯಕ್ತಪಡಿಸಿದ್ದಾರೆ. ಸಿಇಒ ಕಾಶಿ ವಿಶ್ವನಾಥ್ ಅವರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ನಮ್ಮ ತಂಡಕ್ಕೆ ಆಲ್​ರೌಂಡರ್​ ಒಬ್ಬರ ಅಗತ್ಯವಿತ್ತು. ಸ್ಟೋಕ್ಸ್​ ಸೇರಿಕೊಂಡಿದ್ದಕ್ಕೆ ಖುಷಿಯಿದೆ. ಧೋನಿಯೂ ಹರ್ಷ ವ್ಯಕ್ತಪಡಿಸಿದ್ದಾರೆ. ನಮ್ಮ ತಂಡ ಉತ್ತಮ ಪ್ರದರ್ಶನ ನೀಡುತ್ತಿದ್ದು, ಮುಂದೆಯೂ ಉತ್ತಮ ಪ್ರದರ್ಶನ ನೀಡಲಿದೆ, ಎಂದು ಅವರು ಹೇಳಿದ್ದಾರೆ.

ಚೆನ್ನೈ ಸೂಪರ್​ ಕಿಂಗ್ಸ್​ ತಂಡ

ಎಂಎಸ್ ಧೋನಿ (ನಾಯಕ), ಭಗತ್ ವರ್ಮ. ಅಜಯ್ ಮಂಡಲ್, ಕೈಲ್ ಜೇಮಿಸನ್, ನಿಶಾಂತ್ ಸಿಂಧು, ಶೇಕ್ ರಶೀದ್, ಬೆನ್ ಸ್ಟೋಕ್ಸ್, ಅಜಿಂಕ್ಯ ರಹಾನೆ, ಡೆವೊನ್ ಕಾನ್ವೇ, ರುತುರಾಜ್ ಗಾಯಕ್ವಾಡ್, ಅಂಬಾಟಿ ರಾಯುಡು, ಸುಭ್ರಾಂಶು ಸೇನಾಪತಿ, ಮೊಯೀನ್ ಅಲಿ, ಶಿವಂ ದುಬೆ, ರಾಜವರ್ಧನ್ ಹಂಗರ್​ಗೇಕರ್, ಡ್ವೇನ್​ ಪ್ರಿಟೋರಿಯಸ್​, ಮಿಚೆಲ್​ ಸ್ಯಾಂಟ್ನರ್​, ರವೀಂದ್ರ ಜಡೇಜಾ, ತುಷಾರ್ ದೇಶಪಾಂಡೆ, ಮುಖೇಶ್ ಚೌಧರಿ, ಮಥೀಶ ಪಥಿರಾಣ, ಸಿಮರ್ಜೀತ್ ಸಿಂಗ್, ದೀಪಕ್ ಚಾಹರ್, ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ.

ಇದನ್ನೂ ಓದಿ | IPL Auction 2023 | ಆಲ್​ರೌಂಡರ್​ಗಳದ್ದೇ ಆಟ, ಆಂಗ್ಲರದ್ದೇ ಪಾರಮ್ಯ; ಇದು ಐಪಿಎಲ್​ ಮಿನಿ ಹರಾಜಿನ ನೋಟ

Exit mobile version