ಪುಣೆ: ಇಲ್ಲಿನ ಶ್ರೀಶಿವಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆಯುತ್ತಿರುವ ವಿವೋ ಪ್ರೋ ಕಬಡ್ಡಿ ಲೀಗ್‌ನ (Pro Kabaddi) ಭಾನುವಾರದ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ 37-31 ಅಂಕಗಳ ಅಂತರದಲ್ಲಿ ಜಯ ಗಳಿಸಿ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದೆ.
ಬರ್ತ್‌ಡೇ ಬಾಯ್ ಭರತ್ ಸೂಪರ್ 10 ಸಾಧನೆ ಮಾಡಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ವಿಕಾಶ್ ಕಂಡೊಲ (9) ಮತ್ತು ನೀರಜ್ ನರ್ವಾಲ್ (5) ರೈಡಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿ ಅದ್ಭುತ ಜಯಕ್ಕೆ ನೆರವಾದರು. ಇತ್ತಂಡಗಳು ಕೊನೆಯ ಕ್ಷಣದವರೆಗೂ ಸಮಬಲದ ಹೋರಾಟ ನೀಡುತ್ತಿದ್ದವು, ಆದರೆ ವಿಕಾಶ್ ಕಂಡೋಲ ಕೊನೆಯ ಕ್ಷಣದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು ಆಲೌಟ್ ಮಾಡುವ ಮೂಲಕ ಬೆಂಗಳೂರು ಬುಲ್ಸ್ ಮುನ್ನಡೆ ಕಂಡು ಜಯವನ್ನು ಖಚಿತಪಡಿಸಿಕೊಂಡಿತು. ಜೈಪುರ ಪಿಂಕ್ ಪ್ಯಾಂಥರ್ಸ್ ಪರ ಅರ್ಜುನ್ ದೇಸ್ವಾಲ್ ಸೂಪರ್ ಟೆನ್ ಸಾಧನೆ ಮಾಡಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ. ಕೊನೆಯ ಕ್ಷಣದಲ್ಲಾದ ಆಲೌಟ್ ತಂಡದ ಜಯವನ್ನು ಕಸಿದುಕೊಂಡಿತು.
ಪ್ರಥಮಾರ್ಧದಲ್ಲಿ ಸಮಬಲ
ಒಂದು ಹಂತದಲ್ಲಿ 15-5ರಲ್ಲಿ ಮುನ್ನಡೆ ಕಂಡಿದ್ದ ಬೆಂಗಳೂರು ಬುಲ್ಸ್ ಇದ್ದಕ್ಕಿದ್ದಂತೆ ಪಂದ್ಯದ ಮೇಲೆ ಹಿಡಿತ ಸಾಧಿಸಿದುದರ ಪರಿಣಾಮ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧದ ಪಂದ್ಯ 19-19ರಲ್ಲಿ ಸಮಬಲಗೊಂಡಿತು. ಭರತ್ ಅವರು ರೈಡಿಂಗ್‌ನಲ್ಲಿ 7 ಅಂಕಗಳನ್ನು ಗಳಿಸಿ ಬೆಂಗಳೂರು ಬುಲ್ಸ್ ತಂಡಕ್ಕೆ ಉತ್ತಮ ಮುನ್ನಡೆಗೆ ಅವಕಾಶ ನೀಡಿದ್ದರು. ವಿಕಾಶ್ ಕಂಡೋಲ 4 ಅಂಕಗಳನ್ನು ಗಳಿಸಿ ಭರತ್‌ಗೆ ಸಾಥ್ ನೀಡಿದ್ದರು. ನೀರಜ್ ನರ್ವಾಲ್ ಟ್ಯಾಕಲ್‌ನಲ್ಲಿ 3 ಅಂಕಗಳನ್ನು ಗಳಿಸಿ ತಂಡಕ್ಕೆ ನೆರವಾದರು. ಜೈಪುರ ಪಿಂಕ್ ಪ್ಯಾಂಥರ್ಸ್ ಆರಂಭದಲ್ಲಿ ನೀರಸ ಪ್ರದರ್ಶನ ತೋರಿತ್ತು, ಆದರೆ ಕೊನೆಯ ಕ್ಷಣದಲ್ಲಿ ಅರ್ಜುನ್ ದೇಶ್ವಾಲ್ ಅವರು ರೈಡಿಂಗ್‌ನಲ್ಲಿ 8 ಅಂಕಗಳನ್ನು ಗಳಿಸುವ ಮೂಲಕ ಪಂದ್ಯ 19-19ರಲ್ಲಿ ಸಮಬಲಗೊಂಡಿತು. ರೈಡಿಂಗ್‌ನಲ್ಲಿ ಬೆಂಗಳೂರು 13 ಅಂಕಗಳನ್ನು ಗಳಿಸಿದರೆ, ಜೈಪುರ ಪಿಂಕ್ ಪ್ಯಾಂಥರ್ಸ್ 12 ಅಂಕಗಳನ್ನು ಗಳಿಸಿತ್ತು. ಇತ್ತಂಡಗಳು ತಲಾ ಒಂದೊಂದು ಬಾರಿ ಆಲೌಟ್ ಆದವು. ಟ್ಯಾಕಲ್‌ನಲ್ಲೂ ಸಮಾನ ಅಂಕ ( 4) ಗಳಿಸಿದವು. ಇಂದು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಬೆಂಗಳೂರು ಬುಲ್ಸ್‌ನ ರೈಡರ್ ಭರತ್ ಹೂಡಾ ಅವರು ಪ್ರಸಕ್ತ ಲೀಗ್‌ನಲ್ಲಿ 100 ರೈಡಿಂಗ್ ಅಂಕಗಳನ್ನು ಗಳಿಸಿದ ಹೆಗ್ಗಳಿಕೆಗೆ ಪಾತ್ರರಾದರು.
ಇದನ್ನೂ ಓದಿ | Pro Kabaddi | ಭರತ್ ಸೂಪರ್ ಶೋ; ಡೆಲ್ಲಿಗೆ ಸೋಲುಣಿಸಿ ಅಗ್ರ ಸ್ಥಾನಕ್ಕೇರಿದ ಬೆಂಗಳೂರು ಬುಲ್ಸ್