ಬೆಂಗಳೂರು: ಭಾರತ ಕ್ರಿಕೆಟ್ ತಂಡವು ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೋಲುಂಡ ಬೆನ್ನಲ್ಲೇ ರಾಹುಲ್ ದ್ರಾವಿಡ್(Rahul Dravid) ಅವರು ತಂಡದ ಮುಖ್ಯ ಕೋಚ್ (Head Coach) ಹುದ್ದೆಯಲ್ಲಿ ಮುಂದುವರಿಯದಿರಲು ತೀರ್ಮಾನಿಸಿದ್ದಾರೆ ಎಂದು ಗುರುವಾರ ವರದಿಯಾಗಿತ್ತು. ಅಲ್ಲದೆ ವಿವಿಎಸ್ ಲಕ್ಷ್ಮಣ್(VVS Laxman) ಅವರು ತಂಡದ ನೂತನ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ದ್ರಾವಿಡ್ ಅವರು ಐಪಿಎಲ್‌ನಲ್ಲಿ ಕೋಚಿಂಗ್ ನಡಸಲು ಆಸಕ್ತಿ ತೋರಿದ್ದಾರೆ ಎಂದು ವರದಿಯಾಗಿದೆ.
ರಾಹುಲ್ ದ್ರಾವಿಡ್ ಅವರು 2021ರ ಟಿ-20 ವಿಶ್ವಕಪ್ ಬಳಿಕ ಅಂದರೆ, ನವೆಂಬರ್‌ನಲ್ಲಿ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಇವರ ಅವಧಿಯಲ್ಲಿ ಭಾರತ ತಂಡವು 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್, ಏಕದಿನ ವಿಶ್ವಕಪ್ ಫೈನಲ್ ಪ್ರವೇಶಿಸಿತ್ತು. ಕೆಲ ತಿಂಗಳ ಹಿಂದೆ ನಡೆದ ಏಷ್ಯಾಕಪ್‌ನಲ್ಲಿ ಭಾರತ ತಂಡ ಚಾಂಪಿಯನ್ ಆಗಿತ್ತು. ಆದರೆ, ವಿಶ್ವಕಪ್ ಫೈನಲ್ ಸೋಲಿನ ಬಳಿಕ ರಾಹುಲ್ ದ್ರಾವಿಡ್ ಅವರು ಕೋಚ್ ಹುದ್ದೆಯಲ್ಲಿ ಮುಂದುವರಿಯಲು ಇಷ್ಟಪಡುತ್ತಿಲ್ಲ. ಈಗಾಗಲೇ ಅವರ ಗುತ್ತಿಗೆ ಅವಧಿ ಮುಗಿದಿದ್ದು, ಹೊಸ ಅವಧಿಯ ಕಾಂಟ್ರ್ಯಾಕ್ಟ್‌ಗೆ ಸಹಿ ಹಾಕಲು ಇಚ್ಛಿಸುತ್ತಿಲ್ಲ ಎಂದು ವರದಿಯೊಂದು ತಿಳಿಸಿದೆ.
ಇದನ್ನೂ ಓದಿ Rahul Dravid: ಕೋಚ್ ಹುದ್ದೆಗೆ ದ್ರಾವಿಡ್ ವಿದಾಯ; ಹೊಸ ತರಬೇತುದಾರ ಇವರೇನಾ?
VVS Laxman is likely to be the full-time coach of the Indian team. [TOI]
— Johns. (@CricCrazyJohns) November 23, 2023
– Rahul Dravid is not keen on his extension. pic.twitter.com/5Q6WtwOTLC
ಐಪಿಎಲ್ ಕೋಚಿಂಗ್
ಎರಡು ವರ್ಷಗಳ ಕಾಲ ಟೀಮ್ ಇಂಡಿಯಾಗೆ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಇನ್ನು ಮುಂದೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಕೋಚ್ ಆಗಲು ಉತ್ಸುಕರಾಗಿದ್ದಾರೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. ಅಲ್ಲದೆ ದ್ರಾವಿಡ್ ಅವರು ಈಗಾಗಲೇ ಎರಡು ವರ್ಷಗಳ ಒಪ್ಪಂದಕ್ಕಾಗಿ ಐಪಿಎಲ್ ಫ್ರಾಂಚೈಸಿಯೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿ ಹೇಳಿದೆ.
“ರಾಹುಲ್ ದ್ರಾವಿಡ್ ಅವರು ಎರಡು ವರ್ಷಗಳ ಒಪ್ಪಂದಕ್ಕಾಗಿ ಐಪಿಎಲ್ ತಂಡದೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ ಒಂದು ಸುತ್ತಿನ ಮಾತುಕತೆ ಕೂಡ ನಡೆದಿದೆ” ಎಂದು ಕ್ರಿಕ್ಬಜ್ ವರದಿ ಮಾಡಿದೆ. ರಾಹುಲ್ ದ್ರಾವಿಡ್ ಅವರು ಈ ಹಿಂದೆ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಕೋಚ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಅವರು ಅಂಡರ್-19 ಮತ್ತು ಎನ್ಸಿಎಯಲ್ಲಿ ಕಾರ್ಯನಿರ್ವಹಿಸಿದ್ದರು.
ವಿವಿಎಸ್ ಲಕ್ಷ್ಮಣ್ ಹೊಸ ಕೋಚ್?
ರಾಹುಲ್ ದ್ರಾವಿಡ್ ಅವರು ಮುಖ್ಯ ತರಬೇತುದಾರರಾಗಿ ಮುಂದುವರಿಯಲು ಇಚ್ಛಿಸದಿದ್ದರೆ ಟೆಸ್ಟ್ ಸ್ಪೆಷಲಿಸ್ಟ್ ವಿವಿಎಸ್ ಲಕ್ಷ್ಮಣ್ ಅವರೇ ಹೆಡ್ ಕೋಚ್ ಆಗಲಿದ್ದಾರೆ ಎಂದು ತಿಳಿದುಬಂದಿದೆ. ಆಸ್ಟ್ರೇಲಿಯಾ ವಿರುದ್ಧ ನಡೆಯುವ ಐದು ಪಂದ್ಯಗಳ ಸರಣಿ ಆರಂಭಕ್ಕೂ ಮುನ್ನವೇ ಲಕ್ಷ್ಮಣ್ ಅವರು ಮುಖ್ಯ ತರಬೇತುದಾರರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ ಬಳಿಕ ಲಕ್ಷ್ಮಣ್ ಅವರು ನ್ಯಾಷನಲ್ ಕ್ರಿಕೆಟ್ ಅಕಾಡೆಮಿ (NCA) ಮುಖ್ಯಸ್ಥರಾಗಿದ್ದರು. ಇದಕ್ಕೂ ಮೊದಲು ಅವರು ಐಪಿಎಲ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಮೆಂಟರ್ ಆಗಿದ್ದರು.
ಯೋಚನೆ ಇಲ್ಲ ಎಂದಿದ್ದ ದ್ರಾವಿಡ್
ವಿಶ್ವಕಪ್ ಸೋಲಿನ ಬಳಿಕ ಮಾಧ್ಯಮದವರ ಜತೆ ಮಾತನಾಡಿದ್ದ ರಾಹುಲ್ ದ್ರಾವಿಡ್, “ಕೋಚ್ ಹುದ್ದೆಯಲ್ಲಿ ಮುಂದುವರಿಯುವ ಅಥವಾ ತೊರೆಯುವ ಕುರಿತು ಇನ್ನೂ ಯೋಚಿಸಿಲ್ಲ” ಎಂದು ಹೇಳಿದ್ದರು.
ಮುಂದಿನ ವರ್ಷದ ಜೂನ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಭಾರತ ಆಡಬೇಕಾಗಿದೆ. ಈ ಟೂರ್ನಿಯವರೆಗೂ ಟೀಮ್ ಇಂಡಿಯಾದ ಕೋಚ್ ಆಗಿ ಉಳಿಯಲು ಬಯಸುತ್ತೀರಾ? ಎಂದು ದ್ರಾವಿಡ್ ಅವರನ್ನು ಮಾಧ್ಯಮದವರು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ದ್ರಾವಿಡ್, “ನಾನು ಇದರ ಬಗ್ಗೆ ಇನ್ನೂ ಯೋಚಿಸಿಲ್ಲ. ಸಮಯ ಸಿಕ್ಕಾಗ ನಿರ್ಧಾರ ಮಾಡುತ್ತೇನೆ” ಎಂದಷ್ಟೇ ಹೇಳಿದ್ದರು.