ದುಬೈ: ಭಾರತ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಮುಗಿದ ಬೆನ್ನಲ್ಲೇ ಐಸಿಸಿ ನೂತನ ಟೆಸ್ಟ್ ಬ್ಯಾಟಿಂಗ್ ಮತ್ತು ಬೌಲಿಂಗ್ ಶ್ರೇಯಾಂಕವನ್ನು(ICC Test Rankings) ಬುಧವಾರ ಪ್ರಕಟಿಸಿದೆ. ನೂತನ ಶ್ರೇಯಾಂಕ ಪಟ್ಟಿಯಲ್ಲಿ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ(Rohit Sharma) ಅವರು ಹಲವು ತಿಂಗಳ ಬಳಿಕ ಟಾಪ್-10 ನಲ್ಲಿ ಸ್ಥಾನ ಪಡೆದಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ ಕ್ರಿಕೆಟ್ ಆಡದೆ ನಂ.1 ಸ್ಥಾನ ಪಡೆದಿದ್ದ ನ್ಯೂಜಿಲ್ಯಾಂಡ್ನ ಕೇನ್ ವಿಲಿಯಮ್ಸನ್(Kane Williamson) ನೂತನ ಶ್ರೇಯಾಂಕದಲ್ಲಿಯೂ ತಮ್ಮ ಅಗ್ರ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ವಿಂಡೀಸ್ ವಿರುದ್ಧ ಶತಕ ಬಾರಿಸಿದ ರೋಹಿತ್ ಶರ್ಮ ಮೂರು ಸ್ಥಾನಗಳ ಪ್ರಗತಿ ಕಂಡು ಸದ್ಯ 751 ರೇಟಿಂಗ್ ಅಂಕದೊಂದಿ 10ನೇ ಸ್ಥಾನ ಪಡೆದಿದ್ದಾರೆ. ಹಲವು ದಿನಗಳಿಂದ ಈ ಸ್ಥಾನದಲ್ಲಿದ್ದ ರಿಷಭ್ ಪಂತ್(Rishabh Pant) ಒಂದು ಸ್ಥಾನ ಕುಸಿತ ಕಂಡು 11ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಕಾರು ಅಪಘಾತದಲ್ಲಿ ಗಾಯಗೊಂಡು ಸುಮಾರು 7 ತಿಂಗಳಿನಿಂದ ಕ್ರಿಕೆಟ್ನಿಂದ ದೂರ ಉಳಿದಿದ್ದರೂ ಇದುವರೆಗೂ ಪಂತ್ 10ನೇ ಸ್ಥಾನದಲ್ಲೇ ಮುಂದುವರಿದಿದ್ದರು. ಆದರೆ ರೋಹಿತ್ ಶತಕ ಬಾರಿಸಿದ ಪರಿಣಾಮ ಪಂತ್ ಅವರನ್ನು ಹಿಂದಿಕ್ಕಿ ಮುಂದೆ ಸಾಗಿದ್ದಾರೆ. ರೋಹಿತ್ ಹೊರತುಪಡಿಸಿ ಉಳಿದ ಯಾವುದೇ ಟೀಮ್ ಇಂಡಿಯಾ ಬ್ಯಾಟರ್ ಕೂಡ ಅಗ್ರ 10ರೊಳಗೆ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ವಿರಾಟ್ ಕೊಹ್ಲಿ 14ನೇ ಸ್ಥಾನದಲ್ಲಿದ್ದಾರೆ.
ಪದಾರ್ಪಣ ಟೆಸ್ಟ್ ಪಂದ್ಯದಲ್ಲೇ ಶತಕ ಬಾರಿಸಿ ಮಿಂಚಿದ್ದ 21 ವರ್ಷದ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್(Yashasvi Jaiswal) ಕೂಡ ಶ್ರೇಯಾಂಕ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದು ಸದ್ಯ 420 ರೇಟಿಂಗ್ ಅಂಕದೊಂದಿಗೆ 73ನೇ ಸ್ಥಾನದಲ್ಲಿದ್ದಾರೆ. ದ್ವಿತೀಯ ಪಂದ್ಯದಲ್ಲಿಯೂ ಶ್ರೇಷ್ಠ ಪ್ರದರ್ಶನ ತೋರಿದರೆ ಇನ್ನು ಪ್ರಗತಿ ಕಂಡು ಉತ್ತಮ ಸ್ಥಾನ ಪಡೆಯುವ ಅವಕಾಶವಿದೆ.
ಬೌಲಿಂಗ್ ಶ್ರೇಯಾಂಕದಲ್ಲಿ ಆರ್. ಅಶ್ವಿನ್(Ravichandran Ashwin) ಅವರು ತಮ್ಮ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದಾರೆ. ವಿಂಡೀಸ್ ವಿರುದ್ಧದ ಟೆಸ್ಟ್ಗೂ ಮುನ್ನ 860 ರೇಟಿಂಗ್ ಅಂಕದೊಂದಿಗೆ ಅಗ್ರಸ್ಥಾನದಲ್ಲೇ ಇದ್ದರು. ಇದೀಗ ರೇಟಿಂಗ್ನಲ್ಲಿ ಉತ್ತಮ ಏರಿಕೆ ಕಂಡು ತಮ್ಮ ಅಗ್ರಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ. ಸದ್ಯ ಅವರ ರೇಟಿಂಗ್ ಅಂಕ 884 ಇದೆ. ವಿಂಡೀಸ್ ವಿರುದ್ಧ ಅಶ್ವಿನ್ 12 ವಿಕೆಟ್ ಪಡೆದಿದ್ದರು. ದ್ವಿತೀಯ ಸ್ಥಾನದಲ್ಲಿ ಆಸೀಸ್ ವೇಗಿ ಪ್ಯಾಟ್ ಕಮಿನ್ಸ್ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ ICC Test Rankings: 4 ತಿಂಗಳು ಕ್ರಿಕೆಟ್ ಆಡದ ವಿಲಿಯಮ್ಸನ್ ನಂ.1 ಟೆಸ್ಟ್ ಬ್ಯಾಟರ್!
ಆಲ್ ರೌಂಡರ್ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜಾ(Ravindra Jadeja) ಅಗ್ರ ಸ್ಥಾನ ಪಡೆದಿದ್ದಾರೆ. ಇದರ ಜತೆಗೆ ಬೌಲಿಂಗ್ ಶ್ರೇಯಾಂಕದಲ್ಲಿಯೂ ಮೂರು ಸ್ಥಾನಗಳ ಪ್ರಗತಿ ಕಂಡು 7ನೇ ಸ್ಥಾನದಲ್ಲಿದ್ದಾರೆ. ಜಸ್ಪ್ರೀತ್ ಬುಮ್ರಾ 10ನೇ ಸ್ಥಾನದಲ್ಲಿದ್ದಾರೆ.