Site icon Vistara News

ICC World Cup 2023: ಒಂದಾದ ಬಿಜೆಪಿ-ಕಾಂಗ್ರೆಸ್! ರಾಜಕೀಯ ಮರೆಸಿದ ಕ್ರಿಕೆಟ್

BJP and Congress united for cricket and Wishes to Team India

ನವದೆಹಲಿ: ಐಸಿಸಿ ವರ್ಲ್ಡ್ ಕಪ್ (ICC World Cup 2023) ಫೈನಲ್ ಪಂದ್ಯಾವಳಿಯಲ್ಲಿ (Final Match) ಭಾರತ (Team India) ಮತ್ತು ಆಸ್ಟ್ರೇಲಿಯಾ (Team Australia) ಮುಖಾಮುಖಿಯಾಗಿವೆ. 2003ರ ಫೈನಲ್‌ ಸೋಲಿನ ಸೇಡು ತೀರಿಸಿಕೊಳ್ಳುವಂತೆ ಭಾರತ ಆಟವಾಡುತ್ತಿದೆ. ಈ ಮಧ್ಯೆ, ಈ ಕ್ರಿಕೆಟ್ ಆಟ ಭಾರತದಲ್ಲಿ ರಾಜಕೀಯ ವಿರೋಧಿಗಳಾದ ಭಾರತೀಯ ಜನತಾ ಪಾರ್ಟಿ (BJP Party) ಹಾಗೂ ಕಾಂಗ್ರೆಸ್‌ ಪಾರ್ಟಿ (Congress Party) ನಡುವಿನ ಜಿದ್ದಾಜಿದ್ದಿಗೂ ಕಾರಣವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕ್ರಿಕೆಟ್ ಒಗ್ಗಟ್ಟು ಪ್ರದರ್ಶನಕ್ಕೂ ಕಾರಣವಾಗಿದೆ. ಎರಡೂ ಪಕ್ಷಗಳು ಮೂರನೇ ಬಾರಿಗೆ ಭಾರತ ವಿಶ್ವ ಕಪ್ ಎತ್ತಿ ಹಿಡಿಯಲಿ ಎಂದು ಹಾರೈಸಿವೆ.

ರೋಹಿತ್ ಶರ್ಮಾ ಮತ್ತು ಅವರ ತಂಡವು ಐಸಿಸಿ ವಿಶ್ವಕಪ್ 2023 ರ ಫೈನಲ್‌ನಲ್ಲಿ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾವನ್ನು ಎದುರಿಸುತ್ತಿರುವ ಕಾರಣ ವಿಶ್ವದಾದ್ಯಂತದ ಭಾರತೀಯರು ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂದ್ಯದ ಮೇಲೆ ದೃಷ್ಟಿ ನೆಟ್ಟಿದ್ದಾರೆ. ಹಾಗೆಯೇ ಕಾಂಗ್ರೆಸ್ ಪಕ್ಷ ಮತ್ತು ಭಾರತೀಯ ಜನತಾ ಪಾರ್ಟಿ ಕೂಡ ತಂಡದ ಗೆಲುವಿಗೆ ಹಾರೈಸಿವೆ.

ಭಾರತೀಯ ಜನತಾ ಪಾರ್ಟಿಯು ಎಕ್ಸ್ ವೇದಿಕೆಯಲ್ಲಿ ಟೀಮ್ ಇಂಡಿಯಾಗೆ ಶುಭ ಹಾರೈಸಿದರೆ, ಅದೇ ಭಾವನೆಯನ್ನು ಕಾಂಗ್ರೆಸ್ ಪಕ್ಷವೂ ವ್ಯಕ್ತಪಡಿಸಿದೆ. ಎಕ್ಸ್ ವೇದಿಕೆಯಲ್ಲಿ ಬಿಜೆಪಿ, ಕಮ್ ಆನ್ ಇಂಡಿಯಾ, ನಮಗೆ ನಿಮ್ಮ ಮೇಲೆ ನಂಬಿಕೆ ಇದೆ ಎಂದು ಶುಭ ಹಾರೈಸಿದೆ. ಈ ಪೋಸ್ಟ್‌ಗೆ ನೈಜ ಕ್ರೀಡಾಸ್ಫೂರ್ತಿಯನ್ನು ಮೆರೆದಿರುವ ಕಾಂಗ್ರೆಸ್ ಪಕ್ಷವು, ಟ್ರೂ ದ್ಯಾಟ್, ಜೀತೇಗಾ ಇಂಡಿಯಾ(ಹೌದು ಅದು ನಿಜ, ಭಾರತ ಗೆದ್ದೇ ಗೆಲ್ಲುತ್ತದೆ) ಎಂದು ರೀಟ್ವೀಟ್ ಮಾಡಿದೆ.

ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೂ ಭಾರತೀಯ ತಂಡಕ್ಕೆ ಶುಭ ಹಾರೈಕೆಗಳನ್ನು ವ್ಯಕ್ತಪಡಿಸಿದ್ದಾರೆ. ರಾಜಕೀಯವಾಗಿ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಾರ್ಟಿಗಳು ಯಾವಾಗಲೂ ಎಲ್ಲವನ್ನೂ ವಿಱಓಧಿಸುವ ಮನಸ್ಥಿಯಲ್ಲಿರುತ್ತವೆ. ಕ್ರಿಕೆಟ್ ದೇಶವನ್ನು ಒಂದುಗೂಡಿಸುತ್ತದೆ ಎಂಬುದನ್ನು ಈಗ ಮತ್ತೊಮ್ಮೆ ಸಾಬೀತುಮ ಮಾಡಿದೆ.

ಬಿಜೆಪಿಯ ಪೋಸ್ಟ್‌ಗೆ ಕಾಂಗ್ರೆಸ್ ಅದೇ ರೀತಿಯ ರೀಟ್ವೀಟ್ ಮಾಡುವ ಮೂಲಕ ಕ್ರಿಕೆಟ್ ಪ್ರೀತಿಯನ್ನು ಹೊರ ಹಾಕಿವೆ. ಯಾವುದನ್ನು ರಾಜಕೀಯ ಮಾಡಲು ಸಾಧ್ಯವಾಗಲಿಲ್ಲವೋ ಆ ಕೆಲಸವನ್ನು ಕ್ರಿಕೆಟ್ ಮಾಡುತ್ತಿದೆ ಎಂದು ಹೇಳಬಹುದು. ಕನಿಷ್ಠ ಈ ವಿಷಯದಲ್ಲಿ ರಾಜಕೀಯ ಪಕ್ಷಗಳು ತಮ್ಮ ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟು ಪ್ರದರ್ಶಿಸಿವೆ ಮತ್ತು ಇದಕ್ಕೆ ಕ್ರಿಕೆಟ್ ಕಾರಣವಾಗಿದೆ.

ಮೋದಿ ಸ್ಟೇಡಿಯಂನಲ್ಲಿ ಜನಸಾಗರ; ಎಲ್ಲೆಲ್ಲೂ ಕಂಗೊಳಿಸಿದ ನೀಲ ವರ್ಣ

ವಿಶ್ವದ ಅತಿ ದೊಡ್ಡ ಕ್ರಿಕೆಟ್​ ಸ್ಟೆಡಿಯಂ ಎಂಬ ಖ್ಯಾತಿ ಪಡೆದಿರುವ ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ(India vs Australia Final) ಮತ್ತು ಭಾರತ ನಡುವಣ ವಿಶ್ವಕಪ್​ ಫೈನಲ್​ ಪಂದ್ಯವನ್ನು ನೋಡಲು ಜನಸಾಗರವೇ ಸೇರಿದೆ. ಸ್ಟಡಿಯಂನ ಎಲ್ಲ ಸೀಟ್​ಗಳು ಭರ್ತಿಗೊಂಡಿದೆ. ಎಲ್ಲೆಲ್ಲೂ ನೀಲಿ ಬಣ್ಣವೇ ರಾರಾಜಿಸುತ್ತಿದೆ. ಸ್ಟೇಡಿಯಂನಲ್ಲಿ ವಿಹಂಗಮ ನೋಟದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಈ ಪಂದ್ಯದಲ್ಲಿ ಟಾಸ್​ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್​ ಆಯ್ದುಕೊಂಡಿದೆ. ಭಾರತ ಬ್ಯಾಟಿಂಗ್​ ಆಹ್ವಾನ ಪಡೆದು ಇನಿಂಗ್ಸ್​ ಆರಂಭಿಸಿದೆ.

ಆಸ್ಟ್ರೇಲಿಯಾ ವಿರುದ್ಧವೇ ಮೊದಲ ಪಂದ್ಯ…

ಮೊಟೆರಾ ಕ್ರೀಡಾಂಗಣ ನಿರ್ಮಾಣವಾಗಿದ್ದು 1982ರಲ್ಲಿ. ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ಅಡಿಯಲ್ಲಿ ನಿರ್ಮಾಣಗೊಂಡ ಈ ಸ್ಟೇಡಿಯಂನ ಆಗಿನ ಹೆಸರು ಸರ್ದಾರ್ ಪಟೇಲ್ ಸ್ಟೇಡಿಯಂ. 1984ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧ ಈ ಅಂಗಳದಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯವನ್ನು ಆಯೋಜಿಸಲಾಗಿತ್ತು. ಆದರೆ ಆ ಪಂದ್ಯವನ್ನು ಆಸ್ಟ್ರೇಲಿಯಾ ಗೆದ್ದುಕೊಂಡಿತ್ತು.

ಹಲವು ಐತಿಹಾಸಿಕ ಘಟನೆಗಳಿಗೆ ಸಾಕ್ಷಿ

ಹಲವು ಐತಿಹಾಸಿಕ ಘಟನೆಗಳಿಗೆ ಈ ಕ್ರೀಡಾಂಗಣ ಸಾಕ್ಷಿಯಾಗಿದೆ. ಹಲವು ‘ಪ್ರಥಮ’ಗಳು ಈ ಮೊಟೆರಾ ಮೈದಾನದಲ್ಲಿ ದಾಖಲಾಗಿದೆ. 1987ರಲ್ಲಿ ಇದೇ ಮೈದಾನದಲ್ಲಿ ಭಾರತದ ಸುನೀಲ್ ಗಾವಸ್ಕರ್ ಟೆಸ್ಟ್ ಕ್ರಿಕೆಟ್ ನಲ್ಲಿ ಹತ್ತು ಸಾವಿರ ರನ್ ಗಳಿಸಿದ ವಿಶ್ವದ ಮೊದಲ ಸಾಧಕನಾಗಿ ಮೂಡಿ ಬಂದಿದ್ದರು. ಏಳು ವರ್ಷದ ನಂತರ ಇದೇ ಮೈದಾನದಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಸಾಧನೆಯನ್ನು ಕಪಿಲ್ ದೇವ್ ಮಾಡಿದ್ದರು. ಅಂದು 432ನೇ ವಿಕೆಟ್ ಪಡೆದು ಸರ್ ರಿಚರ್ಡ್ ಹ್ಯಾಡ್ಲಿ ದಾಖಲೆಯನ್ನು ಮುರಿದಿದ್ದರು. 2011ರಲ್ಲಿ ಇದೇ ಮೊಟೆರಾ ಅಂಗಳದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್ ನಲ್ಲಿ 18 ಸಾವಿರ ರನ್ ಬಾರಿಸಿದ ಏಕೈಕ ಆಟಗಾರ ಎಂಬ ಸಾಧನೆ ಮಾಡಿದ್ದರು.

ಈ ಸುದ್ದಿಯನ್ನೂ ಓದಿ: ICC World Cup 2023: ಐಸಿಸಿ ವರ್ಲ್ಡ್ ಕಪ್‌ಗೆ ಸ್ಪ್ರೈಟ್‌ನಿಂದ ‘ಥಂಡ್ ರಖ್’ ಬ್ರಾಂಡ್ ಜಾಹೀರಾತು

Exit mobile version