Site icon Vistara News

Blind Cricket Aus v/s Nz | ಏಕದಿನ ಪಂದ್ಯದಲ್ಲಿ ದಾಖಲೆ ಬರೆದ ಸ್ಟೀಫನ್‌ ನೀರೋ ತ್ರಿಶತಕ

ನವದೆಹಲಿ: ಅಂತಾರಾಷ್ಟ್ರೀಯ ಅಂಧರ ಏಕದಿನ ಕ್ರಿಕೆಟ್‌ (Blind Cricket) ಆಟದಲ್ಲಿ ಆಸ್ಟ್ರೇಲಿಯಾದ ಸ್ಟೀಫನ್‌ ನೀರೋ ತ್ರಿಶತಕ ಬಾರಿಸಿ ವಿಶ್ವ ದಾಖಲೆ ಬರೆದಿದ್ದಾರೆ. ನ್ಯೂಜಿಲೆಂಡ್‌ ಹಾಗೂ ಆಸ್ಟ್ರೇಲಿಯಾ ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ ಸ್ಟೀಫನ್‌ ನೀರೋ ಅಜೇಯ 309 ರನ್‌ ಬಾರಿಸಿ ಹಿಂದಿನ ದಾಖಲೆಗಳನ್ನು ಮುರಿದುಹಾಕಿದ್ದಾರೆ.

2010ರಲ್ಲಿ ಸಚಿನ್‌ ತೆಂಡೂಲ್ಕರ್ ಏಕದಿನ ಪಂದ್ಯದಲ್ಲಿ ದ್ವಿಶತಕ ಬಾರಿಸುವವರೆಗೂ ಅದೊಂದು ಅಸಾಧ್ಯದ ಕೆಲಸವೇ ಎಂಬ ಭಾವನೆಯಿತ್ತು. ಆದರೆ, ಸಚಿನ್‌ ದ್ವಿಶತಕ ಬಾರಿಸಿದ ಬಳಿಕ ವಿರೇಂದ್ರ ಸೆಹ್ವಾಗ್‌, ರೋಹಿತ್‌ ಶರ್ಮಾ, ಮಾರ್ಟಿನ್‌ ಗಪ್ಟಿಲ್‌, ಫಖರ್‌ ಝಮಾನ್‌, ಕ್ರಿಸ್‌ ಗೇಲ್‌ ದ್ವಿಶತಕ ಬಾರಿಸಿ ಅಬ್ಬರಿಸಿದ್ದರು. ಆದರೆ ಈವರೆಗೆ ಯಾರೊಬ್ಬರೂ ತ್ರಿಶತಕ ಬಾರಿಸಿರಲಿಲ್ಲ.

ಕೇವಲ 140 ಎಸೆತಗಳಲ್ಲಿ ಅಜೇಯ 309 ರನ್‌ ಬಾರಿಸಿ ಸ್ಟೀಫನ್‌ ನೀರೋ ಒಂದು ಇತಿಹಾಸವನ್ನೇ ರಚಿಸಿದ್ದಾರೆ. ಈ ಆಟದಲ್ಲಿ ಅವರು ಒಟ್ಟು 49 ಫೋರ್‌ ಹಾಗೂ 1 ಸಿಕ್ಸರ್‌ ಬಾರಿಸಿ ಮಿಂಚಿದ್ದರು. ಆಸ್ಟ್ರೇಲಿಯಾ ತಂಡವು ಒಟ್ಟು 541 ರನ್‌ ಬಾರಿಸಿ ಒಂದು ಬೃಹತ್‌ ಟಾರ್ಗೆಟ್‌ ನೀಡಿತ್ತು. ಇದನ್ನು ಬೆನ್ನಟ್ಟಿದ ನ್ಯೂಜಿಲೆಂಡ್‌ ತಂಡ ಕೇವಲ 272 ರನ್‌ಗೆ ಆಲೌಟ್‌ ಆಯಿತು. ಆಸ್ಟ್ರೇಲಿಯಾ 269 ರನ್‌ಗಳ ಭರ್ಜರಿ ಜಯ ಸಾಧಿಸಿತು. ಅಥವಾ ಸ್ಟೀಫನ್‌ ನೀರೋ ನ್ಯೂಜಿಲೆಂಡ್‌ ವಿರುದ್ಧ 40 ರನ್‌ಗಳಿಂದ ಗೆದ್ದರು ಎಂದು ಕೂಡ ಹೇಳಬಹುದು.

ಈ ಹಿಂದೆ 1998ರಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಪಾಕಿಸ್ತಾನದ ಮಸೂದ್‌ ಜಾನ್‌ 262 ರನ್‌ ಗಳಿಸಿದ್ದು ಅಂಧರ ಕ್ರಿಕೆಟ್‌ನ ವಿಶ್ವದಾಖಲೆಯಾಗಿತ್ತು. ಇದೀಗ 309 ರನ್‌ ಬಾರಿಸಿ ಈ ರೆಕಾರ್ಡ್‌ ಬ್ರೇಕ್‌ ಮಾಡಿ ಹೊಸದೊಂದು ದಾಖಲೆ ಸೃಷ್ಟಿಸಿದ್ದಾರೆ.

ಇದನ್ನೂ ಓದಿ: Eng v/s Nz | ಒಂದು ಕ್ಲಾಸಿಕ್‌ ಟೆಸ್ಟ್‌ ಪಂದ್ಯ, ಇಂಗ್ಲೆಂಡ್‌ ಭರ್ಜರಿ ಗೆಲುವು

Exit mobile version