ತಿರುವನಂತಪುರ : ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟಿ೨೦ ಸರಣಿಯ ಮೊದಲ ಪಂದ್ಯ ಇಲ್ಲಿನ ಗ್ರೀನ್‌ಫೀಲ್ಡ್ ಸ್ಟೇಡಿಯಮ್‌ನಲ್ಲಿ ಬುಧವಾರ (ಸೆಪ್ಟೆಂಬರ್ ೨೮) ನಡೆಯಲಿದೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ೨೦ ವಿಶ್ವ ಕಪ್‌ಗೆ ಮೊದಲು ಭಾರತ ತಂಡಕ್ಕೆ ಇದು ಕೊನೇ ಸರಣಿಯಾಗಿದೆ. ಹೀಗಾಗಿ ಬೌಲಿಂಗ್ ಹಾಗೂ ಬ್ಯಾಟಿಂಗ್ ವಿಭಾಗದ ಸಕಲ ವೈಫಲ್ಯಗಳನ್ನು ಈ ಹಣಾಹಣಿಗಳಲ್ಲಿ ಸರಿಪಡಿಸಿಕೊಳ್ಳಬೇಕಾಗಿದೆ.
ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಭಾರತ ಗೆದ್ದಿರುವ ಹೊರತಾಗಿಯೂ ತಂಡದಲ್ಲಿ ಸುಧಾರಣೆಯ ಅಗತ್ಯವಿದೆ ಎಂದು ನಾಯಕ ರೋಹಿತ್ ಶರ್ಮ ಅಭಿಪ್ರಾಯಪಟ್ಟಿದ್ದರು. ಆ ಸುಧಾರಣೆಗಳು ಇಲ್ಲಿ ನಡೆಯಬೇಕಾಗಿದೆ. ಅದರಲ್ಲೂ ಕೆ.ಎಲ್ ರಾಹುಲ್ ಅವರ ಆರಂಭಿಕ ಬ್ಯಾಟಿಂಗ್‌ನಲ್ಲಿ ಲಯ ಕಂಡುಕೊಳ್ಳಬೇಕಾಗಿದೆ. ಅಗತ್ಯ ಸಂದರ್ಭದಲ್ಲಿ ಬ್ಯಾಟ್ ಬೀಸಿ ಬೇಷ್ ಅನಿಸಿಕೊಳ್ಳಬೇಕು. ಅನಗತ್ಯ ಸಂದರ್ಭದಲ್ಲಿ ಬ್ಯಾಟ್ ಬೀಸಿದರೆ ಯಾವುದೇ ಪ್ರಯೋಜನ ಇಲ್ಲ ಎಂಬುದನ್ನು ಅರಿತುಕೊಳ್ಳಬೇಕಾಗಿದೆ.
ಈ ಸರಣಿಯಲ್ಲಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ ಅವರು ಇಲ್ಲ. ಹೀಗಾಗಿ ಅವರ ಸ್ಥಾನವನ್ನು ಯಾರು ಭರ್ತಿ ಮಾಡಬಲ್ಲರು ಎಂಬುದನ್ನು ಪರೀಕ್ಷೆ ಮಾಡಬಹುದು. ವಿಶ್ವ ಕಪ್‌ಗೆ ಅನಿವಾರ್ಯತೆ ಎದುರಾದರೆ ಅವರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳುವುದಕ್ಕೆ ಸಾಧ್ಯವಿದೆ.
ಸ್ಲಾಗ್ ಓವರ್ ಚಿಂತೆ
ಭಾರತ ತಂಡದ ಸ್ಲಾಗ್ ಓವರ್ ಬೌಲಿಂಗ್ ಚಿಂತೆ ಇನ್ನೂ ನೀಗಿಲ್ಲ. ಅರ್ಶ್‌ದೀಪ್ ಸಿಂಗ್ ಈ ಪಂದ್ಯದಲ್ಲಿ ಅವಕಾಶ ಪಡೆಯಲಿದ್ದು, ಕೊರತೆ ನೀಗಿಸುವ ನಿರೀಕ್ಷೆ ಇದೆ. ಜಸ್‌ಪ್ರಿತ್ ಬುಮ್ರಾ ಕೂಡ ಟೀಮ್ ಮ್ಯಾನೇಜ್ಮೆಂಟ್‌ಗೆ ವಿಶ್ವಾಸ ಮೂಡಿಸಬೇಕಾಗಿದೆ. ಸ್ಪಿನ್ ಬೌಲರ್ ಯಜ್ವೇಂದ್ರ ಚಹಲ್ ಪರಿಣಾಮಕಾರಿ ಬೌಲಿಂಗ್ ನಡೆಸಬೇಕಾಗಿದೆ.
ವಿಶ್ವ ಕಪ್‌ಗೆ ಮೊದಲು ಎಲ್ಲರಿಗೂ ಅವಕಾಶ ನೀಡಲು ಉದ್ದೇಶಿಸಿರುವ ನಾಯಕ ರೋಹಿತ್ ಶರ್ಮ, ರವಿಚಂದ್ರನ್ ಅಶ್ವಿನ್ ಅವರಿಗೂ ಅವಕಾಶ ನೀಡಬಹುದು. ಆದೇ ರೀತಿ ದಿನೇಶ್ ಕಾರ್ತಿಕ್ ಅವರ ಸೇವೆಯನ್ನೂ ಬಳಸಿಕೊಳ್ಳುವ ಸಾಧ್ಯತೆಗಳಿವೆ.
ಇದೇ ವೇಳೆ ತೆಂಬಾ ಬವುಮಾ ನೇತೃತ್ವದ ದಕ್ಷಿಣ ಆಫ್ರಿಕಾವೂ ಟಿ೨೦ ವಿಶ್ವ ಕಪ್ ಹಿನ್ನೆಲೆಯಲ್ಲಿ ಭಾರತ ವಿರುದ್ಧದ ಸರಣಿಯನ್ನು ಸಮರ್ಥವಾಗಿ ಬಳಸಿಕೊಳ್ಳುವ ಸಾಧ್ಯತೆಗಳಿವೆ.
ಹೇಗಿದೆ ಪಿಚ್
ಈ ಪಿಚ್ ಬ್ಯಾಟಿಂಗ್‌ಗೆ ಪೂರಕ. ಆದರೆ, ಆರಂಭದಲ್ಲಿ ಬೌಲರ್‌ಗಳಿಗೆ ನೆರವಾಗುತ್ತದೆ. ನಂತರದಲ್ಲಿ ನಿಧಾನಗೊಂಡು ಬ್ಯಾಟರ್‌ಗಳಿಗೆ ಅನುಕೂಲ ಕಲ್ಪಿಸುತ್ತದೆ. ದೊಡ್ಡ ಮೊತ್ತದ ಸ್ಕೋರ್ ಇಲ್ಲಿ ದಾಖಲಾಗುತ್ತದೆ.
ನೇರ ಪ್ರಸಾರ ಎಲ್ಲಿ?
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಸರಣಿಯ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ಟಿವಿಗಳಲ್ಲಿ ನೇರ ಪ್ರದರ್ಶನಗೊಳ್ಳುತ್ತದೆ. ಅದೇ ರೀತಿ ಡಿಸ್ನಿ ಹಾಟ್ ಸ್ಟಾರ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಕೂಡ ಇರುತ್ತದೆ
ತಂಡಗಳು
ಭಾರತ ಟಿ20 ತಂಡ:
ರೋಹಿತ್ ಶರ್ಮ (ನಾಯಕ), ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ದಿನೇಶ್ ಕಾರ್ತಿಕ್ , ರವಿಚಂದ್ರನ್ ಅಶ್ವಿನ್, ಯಜ್ವೇಂದ್ರ ಚಹಲ್, ಅಕ್ಷರ್ ಪಟೇಲ್, ಅರ್ಶ್‌ದೀಪ್ ಸಿಂಗ್, ಶಹಬಾಜ್, ಹರ್ಷಲ್ ಪಟೇಲ್, ದೀಪಕ್ ಚಾಹರ್, ಜಸ್ಪ್ರೀತ್ ಬುಮ್ರಾ.
ದಕ್ಷಿಣ ಆಫ್ರಿಕಾ:
ತೆಂಬಾ ಬವುಮಾ, ಕ್ವಿಂಟನ್ ಡಿ ಕಾಕ್, ಹೆನ್ರಿಕ್ ಕ್ಲಾಸೆನ್, ರೀಜಾ ಹೆಂಡ್ರಿಕ್ಸ್, ಕೇಶವ್ ಮಹಾರಾಜ್, ಏಡೆನ್ ಮಾರ್ಕ್ರಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಆನ್ರಿಚ್ ನೋರ್ಜೆ, ವೇಯ್ನ್ ಪರ್ನೆಲ್,ಡ್ವೇನ್ ಪ್ರಿಟೋರಿಯಸ್, ಕಗಿಸೊ ರಬಾಡ, ರಿಲಿ ರೊಸೊ, ತಬ್ರೇಜ್ ಶಂಸಿ, ಟ್ರಿಸ್ಟಾನ್ ಸ್ಟಬ್ಸ್.
ಇದನ್ನೂ ಓದಿ | IND vs SA | ತಿರುವನಂತಪುರ ಕ್ರೀಡಾಂಗಣದಲ್ಲಿ ಭಾರತ ತಂಡ ಎಷ್ಟು ಬಾರಿ ಗೆದ್ದಿದೆ? ಪಿಚ್ ಸ್ಥಿತಿ ಹೇಗಿದೆ?