Site icon Vistara News

Boycott Maldives: ವರ್ಷಗಳ ಹಿಂದೆ ಭಾರತ ಪ್ರವಾಸೋದ್ಯಮದ ಬಗ್ಗೆ ಹೇಳಿಕೆ ನೀಡಿದ್ದ ಧೋನಿಯ ವಿಡಿಯೊ ವೈರಲ್​

MS Dhoni

ಮುಂಬಯಿ: ಮಾಲ್ಡೀವ್ಸ್‌ನ ಕೆಲವು ಮಂತ್ರಿಗಳು ಮಾಡಿದ ಭಾರತ ವಿರೋಧಿ ಕಾಮೆಂಟ್‌ಗಳು ಭಾರತೀಯರನ್ನು ಕೆರಳುವಂತೆ ಮಾಡಿದ್ದು ಬಾಯ್ಕಾಟ್‌ ಮಾಲ್ಡೀವ್ಸ್‌(Boycott Maldives) ಎಂಬ ಅಭಿಯಾನ ಶುರುವಾಗಿದೆ. ಇದರ ಬೆನ್ನಲ್ಲೇ ಟೀಮ್​ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ(MS Dhoni) ಅವರು ಹಿಂದೊಮ್ಮೆ ಭಾರತೀಯ ಪ್ರವಾಸೋದ್ಯಮದ ಬಗ್ಗೆ ಹೇಳಿದ ಮಾತುಗಳು ಈಗ ವೈರಲ್​ ಆಗಿದೆ. ಧೋನಿಯ ಹೇಳಿಕೆಯನ್ನು ಈಗ ಬಾಯ್ಕಾಟ್‌ ಮಾಲ್ಡೀವ್ಸ್‌ ವಿಚಾರಕ್ಕೆ ಲಿಂಕ್​ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಮಾಡಲಾಗುತ್ತಿದೆ.

ಧೋನಿ ಅವರು ಕಳೆದ ವರ್ಷ ಸಂದರ್ಶನವೊಂದರಲ್ಲಿ ಅಭಿಮಾನಿಯೊಬ್ಬರು ಪ್ರವಾಸದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ವೇಳೆ, “ಪ್ರಮಾಣಿಕವಾಗಿ ಹೇಳಬೇಕೆಂದರೆ ನಾನು ಹೆಚ್ಚು ಪ್ರಯಾಣ ಮಾಡಿದ್ದೇನೆ. ಆದರೆ, ಅದು ಪ್ರವಾಸವಲ್ಲ. ನನ್ನ ಕ್ರಿಕೆಟ್ ಆಡುವ ಸಮಯದಲ್ಲಿ ಮಾಡಿದ ಪ್ರಯಾಣ. ಕ್ರಿಕೆಟ್​ ಸರಣಿಗಾಗಿ ನಾನು ಹಲವು ದೇಶಕ್ಕೆ ಭೇಟಿ ನೀಡಿದ್ದೇನೆ. ಆದರೆ ಅಲ್ಲಿರುವ ಯಾವುದೇ ಪ್ರವಾಸಿ ತಾಣಗಳಿಗೆ ಹೋಗಿಲ್ಲ. ಕ್ರಿಕೆಟ್​ ಆಡಿದ ಬಳಿಕ ನೇರವಾಗಿ ಭಾರತಕ್ಕೆ ಬರುತ್ತಿದೆ. ನನ್ನ ಪತ್ನಿಗೆ ಟ್ರಾವೆಲ್​ ಎಂದರೆ ಬಲು ಇಷ್ಟ. ಕ್ರಿಕೆಟ್​ ನಿವೃತ್ತಿ ಬಳಿಕ ನಾನು ಖಂಡಿತಾ ಪ್ರವಾಸ ಮಾಡುವ ಎಲ್ಲ ಯೋಜನೆಗಳನ್ನು ಈಗಾಗಲೇ ರೂಪಿಸಿದ್ದೇನೆ. ಭಾರತವೇ ನನ್ನ ಮೊದಲ ಆಯ್ಕೆ ಮತ್ತು ಆದ್ಯತೆ ಎಂದು ಧೋನಿ ಹೇಳಿದ್ದರು.

ಇದನ್ನೂ ಓದಿ Boycott Maldives: ಮರವಂತೆ ಬೀಚ್ ಫೋಟೊ ಹಂಚಿಕೊಂಡು ಮಾಲ್ಡೀವ್ಸ್‌ಗೆ ತಿರುಗೇಟು ನೀಡಿದ ವೀರೇಂದ್ರ ಸೆಹವಾಗ್

“ಭಾರತದಲ್ಲಿ ಹಲವು ಸುಂದರ ತಾಣಗಳಿವೆ. ನಾನು ನನ್ನ ಮೊದಲ ಪ್ರವಾಸವನ್ನು ನಮ್ಮ ದೇಶದಲ್ಲೇ ಮಾಡಿ ಇಲ್ಲಿನ ಪ್ರವಾಸೋದ್ಯಮಕ್ಕೆ ಬೆಂಬಲ ಸೂಚಿಸುತ್ತೇನೆ” ಎಂದು ಧೋನಿ ಅಂದು ಸಂದರ್ಶನವೊಂದರಲ್ಲಿ ಹೇಳಿದ್ದರು. ಧೋನಿಯ ಈ ಹೇಳಿಕೆಯನ್ನು ಈಗ ಅವರ ಅಭಿಮಾನಿಗಳು ಮಾಲ್ಡೀವ್ಸ್‌ ವಿಚಾರಕ್ಕೆ ಲಿಂಕ್​ ಮಾಡಲಾರಂಭಿಸಿದ್ದು ಭಾರತೀಯ ಪ್ರವಾಸೋದ್ಯಮ ಸ್ಥಳಗಳಿಗೆ ಮೊದಲ ಆದ್ಯತೆ ನೀಡಿದ ಧೋನಿ ಅಪ್ಪಟ ದೇಶಾಭಿಮಾನಿ ಎಂದು ಕಮೆಂಟ್​ ಮಾಡಲಾರಂಭಿಸಿದ್ದಾರೆ.

ಧೋನಿಯ ಹಳೆಯ ವಿಡಿಯೊ ಮತ್ತೆ ಮುನ್ನಲೆಗೆ ಬರಲು ಕಾರಣವೇನು?


ಧೋನಿ ಅವರು ವರ್ಷಗಳ ಹಿಂದೆ ಭಾರತ ಪ್ರವಾಸೋದ್ಯಮದ ಬಗ್ಗೆ ಹೇಳಿದ ವಿಡಿಯೊ ಈಗ ವೈರಲ್​ ಆಗಲು ಒಂದು ಕಾರಣವಿದೆ. ಅದೇನೆಂದರೆ, ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಲಕ್ಷದ್ವೀಪಕ್ಕೆ ತೆರಳಿ, ಅಲ್ಲಿನ ಬೀಚ್‌ಗಳಲ್ಲಿ ತಿರುಗಾಡಿದ ಫೋಟೊಗಳನ್ನು ಹಂಚಿಕೊಂಡಿರುವುದಕ್ಕೆ ಮಾಲ್ಡೀವ್ಸ್‌ ಅಸಮಾಧಾನ ವ್ಯಕ್ತಪಡಿಸಿತ್ತು. ಮಾಲ್ಡೀವ್ಸ್‌ ಸಚಿವರು ಸೇರಿ ಹಲವರು ಭಾರತ ಹಾಗೂ ನರೇಂದ್ರ ಮೋದಿ ವಿರುದ್ಧ ಪೋಸ್ಟ್‌ ಹಂಚಿಕೊಂಡಿದ್ದರು. ಇದು ಭಾರತೀಯರನ್ನು ಕೆರಳಿಸುವಂತೆ ಮಾಡಿತ್ತು. ಇದೇ ವಿಚಾರವಾಗಿ ಬಾಯ್ಕಾಟ್‌ ಮಾಲ್ಡೀವ್ಸ್‌(Boycott Maldives) ಎಂಬ ಅಭಿಯಾನ ಕೂಡ ಆರಂಭವಾಗಿದೆ.

“ಭಾರತವು ಸುಖಾಸುಮ್ಮನೆ ಮಾಲ್ಡೀವ್ಸ್‌ ಪ್ರವಾಸೋದ್ಯಮವನ್ನು ಟಾರ್ಗೆಟ್​ ಮಾಡುತ್ತಿದೆ. ಬೀಚ್‌ ಪ್ರವಾಸೋದ್ಯಮದಲ್ಲಿ ಭಾರತವು ಮಾಲ್ಡೀವ್ಸ್‌ಗೆ ಸವಾಲೊಡ್ಡಬೇಕು ಎಂದರೆ ತುಂಬ ಸವಾಲುಗಳನ್ನು ಎದುರಿಸಬೇಕಾಗುತ್ತದೆ” ಎಂದು ಮಾಲ್ಡೀವ್ಸ್‌ ಸಚಿವ ಅಬ್ದುಲ್ಲಾ ಮಹ್ಜೂಮ್‌ ಮಾಜಿದ್ ಪೋಸ್ಟ್‌ ಮಾಡಿದ್ದರು. ಮತ್ತೊಬ್ಬ ಸಹಾಯಕ ಸಚಿವೆ ಮರಿಯಮ್‌ ಶಿವುನಾ, “ಇಸ್ರೇಲ್‌ ಕೈಗೊಂಬೆಯಾಗಿರುವ ನರೇಂದ್ರ ಮೋದಿ ಅವರು ಲೈಫ್‌ ಜಾಕೆಟ್‌ ಧರಿಸಿ ಜಿಗಿಯುತ್ತಾರೆ” ಎಂದು ಉದ್ಧಟತನದ ಪೋಸ್ಟ್‌ ಮಾಡಿದ್ದರು.

Exit mobile version