ದೋಹಾ : ಫಿಫಾ ವಿಶ್ವ ಕಪ್‌ನಲ್ಲಿ ಭಾನುವಾರ ನಡೆದ ನಾಲ್ಕು ಪಂದ್ಯಗಳಲ್ಲಿ ಎರಡರಲ್ಲಿ ಪಲಿತಾಂಶ ಮೂಡಿ ಬಂದಿದ್ದು, ಇನ್ನೆರಡು ಪಂದ್ಯಗಳು ಡ್ರಾದಲ್ಲಿ ಮುಕ್ತಾಯ ಕಂಡಿವೆ. ಬಲಿಷ್ಠ ಬ್ರೆಜಿಲ್ ತಂಡ ಸ್ವಿಜರ್ಲೆಂಡ್ ವಿರುದ್ಧ ೧-೦ ಗೋಲ್‌ಗಳ ಜಯ ಕಂಡರೆ, ದಕ್ಷಿಣ ಕೊರಿಯಾ ವಿರುದ್ಧ ಘಾನಾ ತಂಡ ೩-೨ ಗೋಲ್‌ಗಳ ವಿಜಯ ಸಾಧಿಸಿದೆ. ಕ್ಯಾಮೆರೂನ್ ಮತ್ತು ಸರ್ಬಿಯಾ ತಂಡಗಳ ನಡುವಿನ ಹಣಾಹಣಿ ೩-೩ ಗೋಲ್‌ಗಳಿಂದ ಡ್ರಾಗೊಂಡರೆ, ಸ್ಪೇನ್ ಹಾಗೂ ಜರ್ಮನಿ ನಡುವಿನ ಪಂದ್ಯ ೧-೧ ಗೋಲ್‌ಗಳಿಂದ ಡ್ರಾಗೊಂಡಿದೆ.
ಜಿದ್ದಾಜಿದ್ದಿನಿಂದ ಕೂಡಿದ್ದ ಬ್ರೆಜಿಲ್ ಹಾಗೂ ಸ್ವಿಜರ್ಲೆಂಡ್ ನಡುವಿನ ಪಂದ್ಯದಲ್ಲಿ ೮೩ನೇ ನಿಮಿಷದಲ್ಲಿ ಗೋಲ್ ಬಾರಿಸಿದ ಕಾಸೆಮಿರೊ ಗೆಲುವಿನ ರೂವಾರಿ ಎನಿಸಿಕೊಂಡರು. ಈ ಗೆಲುವಿನೊಂದಿಗೆ ಬ್ರೆಜಿಲ್ ತಂಡ ಜಿ ಗುಂಪಿನಲ್ಲಿ ಅಗ್ರ ಸ್ಥಾನ ಮುಂದುವರಿಸಿ ನಾಕೌಟ್ ಹಂತಕ್ಕೆ ಪ್ರವೇಶ ಪಡೆಯಿತು.
ಎಚ್ ಗುಂಪಿನ ಪಂದ್ಯದಲ್ಲಿ ಘಾನಾ ತಂಡ ಜಯ ಸಾಧಿಸಿದ್ದು, ಮೊಹಮ್ಮದ್ ಸೈಲ್ಸು (೨೪ನೇ ನಿಮಿಷ) ಮೊಹಮ್ಮದ್ ಕುದುಸ್ (೩೪ ಮತ್ತು ೬೮ನೇ ನಿಮಿಷ) ಗೋಲ್ ಬಾರಿಸಿ ತಂಡಕ್ಕೆ ಜಯ ತಂದಿತ್ತರು. ಕೊರಿಯಾ ಪರ ಚೊ ಗೆ ಸಂಗ್ (೫೮ ಹಾಗೂ ೬೧ನೇ ನಿಮಿಷ) ಅವಳಿ ಗೋಲ್‌ಗಳನ್ನು ಬಾರಿಸಿದರು.
ಡ್ರಾದಲ್ಲಿ ಮುಕ್ತಾಯಗೊಂಡ ಕ್ಯಾಮೆರೂನ್ ಹಾಗೂ ಸರ್ಬಿಯಾ ನಡುವಿನ ಪಂದ್ಯದಲ್ಲಿ ಕ್ಯಾಮೆರೂನ್ ಪರ ಜೀನ್ ಚಾರ್ಲ್ಸ್ (೨೯ನೇ ನಿಮಿಷ), ವಿನ್ಸೆಂಟ್ ಅಬೊಬೊಕರ್ (೬೩ನೇ ನಿಮಿಷ), ಎರಿಕ್ ಮ್ಯಾಕ್ಸಿಮಾ (೬೬ನೇ ನಿಮಿಷ) ಗೋಲ್ ಬಾರಿಸಿದರು. ಸರ್ಬಿಯಾ ಪರ ಪಾವ್‌ಲೋಕ್ (೪೫+೧ ನಿಮಿಷ), ಮಿಲ್‌ನೋವಿಕ್ (೪೫+೩ನೇ ನಿಮಿಷ), ಅಲೆಕ್ಸಾಂಡ್ರಾ ಮಿಟೋವಿಕ್ (೫೩ನೇ ನಿಮಿಷ) ಗೋಲ್ ಬಾರಿಸಿದರು.
ಇ ಗುಂಪಿನಲ್ಲಿ ಸ್ಪೇನ್ ಹಾಗೂ ಜರ್ಮನಿ ನಡುವಿನ ಪಂದ್ಯ ೧-೧ ರಿಂದ ಡ್ರಾ ಗೊಂಡಿತು. ಸ್ಪೇನ್ ಪ ಅಲ್ವಾರೊ ಮೊರಾಟ (೬೨ನೇ ನಿಮಿಷ), ಜರ್ಮನಿ ಪರ ನಿಕ್ಲಾಸ್ (೮೩ನೇ ನಿಮಿಷ) ಗೋಲ್ ಬಾರಿಸಿದರು.
ಇದನ್ನೂ ಓದಿ | Fifa World Cup | ಫಿಫಾ ವಿಶ್ವ ಕಪ್ ಟೂರ್ನಿಯಿಂದ ಹೊರಬಿದ್ದ ಆತಿಥೇಯ ಕತಾರ್