ನವ ದೆಹಲಿ: ಅಪ್ರಾಪ್ತ ವಯಸ್ಸಿ ಮಹಿಳಾ ಕುಸ್ತಿಪಟು ಮೇಲೇ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷರ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಡೆಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಐದು ಬಾರಿಯ ಸಂಸದ ಹಾಗೂ ಪ್ರಭಾವಿ ರಾಜಕೀಯ ವ್ಯಕ್ತಿಯಾಗಿರುವ ಅವರನ್ನು ಡೆಲ್ಲಿ ಪೊಲೀಸರು ಇನ್ನೂ ಬಂಧಿಸಿಲ್ಲ. ಆದರೆ, ತಮ್ಮ ವಿರುದ್ಧ ನಡೆಯುತ್ತಿರುವುದೆಲ್ಲರೂ ರಾಜಕೀಯ ಸಂಚು ಎಂಬುದಾಗಿ ಬ್ರಿಜ್ ಭೂಷಣ್ ಸಿಂಗ್ ಭಾನುವಾರ ಆರೋಪಿಸಿದ್ದಾರೆ.
ಭಾರತದ ಟಾಪ್ ಅಥ್ಲೀಟ್ಗಳಾದ ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಹಾಗೂ ಬಜರಂಗ್ ಪೂನಿಯಾ ಮತ್ತಿತರರು ನವ ದೆಹಲಿಯ ಜಂತರ್ಮಂತರ್ನಲ್ಲಿ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಜನವರಿಯಲ್ಲಿ ಪ್ರತಿಭಟನೆ ಮಾಡಿದಾಗ ಕೇಂದ್ರ ಸರಕಾರ ಮೇಲುಸ್ತುವಾರಿ ಸಮಿತಿ ರಚನೆ ಮಾಡಿ ವರದಿ ನೀಡುವಂತೆ ತಿಳಿಸಿತ್ತು. ಆ ವರದಿಯನ್ನು ಸಲ್ಲಿಸಲಾಗಿದ್ದರೂ ಅದನ್ನು ಬಹಿರಂಗ ಮಾಡುತ್ತಿಲ್ಲ ಎಂದು ಕುಸ್ತಿಪಟುಗಳು ಏಪ್ರಿಲ್ 23ರಿಂದ ಜಂತರ್ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರೆಲ್ಲರೂ ಬ್ರಿಜ್ ಭೂಷಣ್ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹಾಗೂ ಹಣಕಾಸಿನ ದುರುಪಯೋಗದ ಆರೋಪ ಹೊರಿಸಿದ್ದಾರೆ. ಈ ಬಗ್ಗೆ ಅವರು ಡೆಲ್ಲಿ ಪೊಲೀಸರಿಗೆ ದೂರು ನೀಡಿದ್ದರೂ ಅವರು ಪ್ರಕರಣ ದಾಖಲಿಸಿಕೊಂಡಿರಲಿಲ್ಲ. ಬಳಿಕ ಅವರು ಸುಪ್ರೀಮ್ ಕೋರ್ಟ್ ಮೆಟ್ಟಿಲೇರಿ ಡೆಲ್ಲಿ ಪೊಲೀಸರಿಗೆ ನಿರ್ದೇಶನ ಕೊಡಿಸಿದ್ದರು. ಇದೀಗ ಬ್ರಿಜ್ಭೂಷಣ್ ಮೇಲೆ ಎಫ್ಐಆರ್ ದಾಖಲಾಗಿದೆ.
ಇಷ್ಟಾದರೂ ಬ್ರಿಜ್ ಭೂಷಣ್ ಬಂಧನವಾಗದೇ ನಾವು ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಹೇಳಿ ಧರಣಿ ಮುಂದುವರಿಸಿದ್ದಾರೆ. ಅದಾದ ಬಳಿಕ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಭೂಪಿಂದರ್ ಸಿಂಗ್ ಹೂಡ, ಡೆಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್, ರಾಷ್ಟ್ರೀಯ ಲೋಕದಳ ನಾಯಕ ಜಯಂತ್ ಚೌಧರಿ ಮತ್ತಿರರು ಪ್ರತಿಭಟನಾ ಸ್ಥಳಕ್ಕೆ ತೆರಳಿ ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿದ್ದರು. ಹೀಗಾಗಿ ವಿಷಯ ರಾಜಕೀಯಕ್ಕೆ ತಿರುಗಿದೆ.
ಈ ಬಗ್ಗೆ ಮಾತನಾಡಿದ ಬ್ರಿಜ್ಭೂಷಣ್ ಸಿಂಗ್, ಅಥ್ಲೀಟ್ಗಳ ಪ್ರತಿಭಟನೆ ಆರಂಭದಿಂದಲೂ ರಾಜಕೀಯ ಪ್ರೇರಿತವಾಗಿತ್ತು. ಜಂತರ್ ಮಂತರ್ನಲ್ಲಿ ಕೇಳಿ ಬರುತ್ತಿರುವುದು ಅಥ್ಲೀಟ್ಗಳ ಧ್ವನಿ ಅಲ್ಲ. ಅವರೆಲ್ಲರೂ ರಾಜಕಾರಣಿಗಳ ಬೆಂಬಲ ಪಡೆದುಕೊಂಡಿದ್ದಾರೆ ಎಂದ ಆರೋಪಿಸಿದ್ದಾರೆ.
ಕಾಂಗ್ರೆಸ್ ಮತ್ತು ಇತರ ರಾಜಕೀಯ ಪಕ್ಷಗಳು ಅಥ್ಲೀಟ್ಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ. ರಾಜಕೀಯ ಪಕ್ಷಗಳ ಮಾತಿನ ಪ್ರಕಾರ ನನ್ನ ರಾಜೀನಾಮೆಯನ್ನು ಅವರು ಕೇಳುತ್ತಿದ್ದಾರೆ ಎಂಬುದಾಗಿ ಬ್ರಿಜ್ ಭೂಷಣ್ ಹೇಳಿದ್ದಾರೆ.