ನವದೆಹಲಿ: ಮಹಿಳಾ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳದ ಆರೋಪ ಎದುರಿಸಿ ಭಾರತೀಯ ಕುಸ್ತಿ ಫೆಡರೇಶನ್‌ನ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದ ಬಿಜೆಪಿ ಸಂಸದ ಬ್ರಿಜ್‌ಭೂಷಣ್ ಶರಣ್ ಸಿಂಗ್(Brij Bhushan Sharan Singh)ಗೆ ದೆಹಲಿ ನ್ಯಾಯಾಲಯ(Delhi court) ಗುರುವಾರ ಜಾಮೀನು(Brij Bhushan gets bail) ನೀಡಿದೆ. ಆದರೆ ಕೆಲವು ಷರತ್ತುಗಳನ್ನು ವಿಧಿಸಿದೆ. ಜತೆಗೆ ಅಮಾನತುಗೊಂಡ ಡಬ್ಲ್ಯುಎಫ್‌ಐ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ಅವರ ಜಾಮೀನು ಅರ್ಜಿಯನ್ನು ಕೂಡ ನ್ಯಾಯಾಲಯ ಅಂಗೀಕರಿಸಿದೆ.
ಮಂಗಳವಾರವಷ್ಟೇ ದಿಲ್ಲಿ ನ್ಯಾಯಾಲಯ ಬ್ರಿಜ್‌ಭೂಷಣ್ ಮತ್ತು ವಿನೋದ್ ತೋಮರ್ಗೆ ಎರಡು ದಿನಗಳ ಮಧ್ಯಂತರ ಜಾಮೀನು ನೀಡಿತ್ತು. ಜಾಮೀನಿನ ವಿಚಾರಣೆ ಜುಲೈ 20ಕ್ಕೆ ಮುಂದೂಡಿತ್ತು. ಅದರಂತೆ ಗುರುವಾರ ಜಾಮೀನಿನ ವಿಚಾರಣೆ ನಡೆಸಿದ ದೆಹಲಿ ನ್ಯಾಯಾಲಯ ಇಬ್ಬರಿಗೂ 25,000 ರೂ.ಗಳ ಬಾಂಡ್ ಪಡೆದುಕೊಂಡು ಜಾಮೀನು ಅಂಗೀಕರಿಸಿದೆ.
ಇದನ್ನೂ ಓದಿ Wrestlers Protest: ಬ್ರಿಜ್ ಭೂಷಣ್ ಮನೆಗೆ ಬಂದ ಅಪರಿಚಿತ ವ್ಯಕ್ತಿಯ ಬಂಧನ
ಷರತ್ತು ವಿಧಿಸಿದ ಕೋರ್ಟ್
ಜಾಮೀನು ನೀಡುವ ಸಂದರ್ಭದಲ್ಲಿ ದೆಹಲಿ ನ್ಯಾಯಾಲಯ ತನ್ನ ಪೂರ್ವಾನುಮತಿ ಇಲ್ಲದೆ ದೇಶವನ್ನು ತೊರೆಯದಂತೆ ಆರೋಪಿಗಳಿಗೆ ನಿರ್ದೇಶನ ನೀಡಿದೆ. ಪ್ರಕರಣದ ಸಾಕ್ಷಿಗಳಿಗೆ ಯಾವುದೇ ಪ್ರಚೋದನೆ ನೀಡದಂತೆಯೂ ಸೂಚಿಸಿದೆ.
ಬ್ರಿಜ್ ಭೂಷಣ್ ಹಾಗೂ ತೋಮರ್ ವಿರುದ್ಧ ವಿನೇಶ್ ಫೋಗಾಟ್, ಸಾಕ್ಷಿ ಮಲಿಕ್ ಸೇರಿದಂತೆ ಕೆಲವು ಕುಸ್ತಿಪಟುಗಳು ದೂರು ನೀಡಿದ್ದರು. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354 (ಮಹಿಳೆಯ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ), 354 ಎ (ಲೈಂಗಿಕ ಕಿರುಕುಳ), 354 ಡಿ (ಹಿಂಬಾಲಿಸುವುದು) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಮಹಿಳಾ ಕುಸ್ತಿಪಟುಗಳು ಸಲ್ಲಿಸಿದ ದೂರಿನ ಮೇರೆಗೆ ದೆಹಲಿ ಪೊಲೀಸರು ಜೂನ್ 15ರಂದು ಬ್ರಿಜ್ ಭೂಷಣ್ ಅವರ ವಿರುದ್ಧ ಕೋರ್ಟ್ಗೆ ಚಾರ್ಜ್ ಶೀಟ್ ಸಲ್ಲಿಸಿದರು.
ಬಿಜೆಪಿ ಸಂಸದ ಬ್ರಿಜ್‌ಭೂಷಣ್ ವಿರುದ್ಧ ಎರಡು ಎಫ್ಐಆರ್ಗಳನ್ನು ದಾಖಲಿಸಲಾಗಿತ್ತು. ಅದರಲ್ಲೊಂದು ಅಪ್ರಾಪ್ತ ಕುಸ್ತಿಪಟುವಿನ ಪ್ರಕರಣದಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ದಾಖಲಾದ ದೂರು ಆಗಿತ್ತು. ಬಳಿಕ ದೂರುದಾರರು ತಮ್ಮ ಹೇಳಿಕೆಗಳನ್ನು ಬದಲಾಯಿಸಿದ್ದರು. ಈ ಪ್ರಕರಣ ವಾಪಸ್ ಪಡೆಯಲಾಗಿದೆ. ಎರಡನೇ ಪ್ರಕರಣ ಉಳಿದ ಮಹಿಳಾ ಕುಸ್ತಿಪಟುಗಳು ನೀಡಿದ ದೂರಾಗಿದೆ.
ಬ್ರಿಜ್‌ಭೂಷಣ್ ವಿರುದ್ಧ ಒಟ್ಟು 21 ಸಾಕ್ಷಿಗಳು ತಮ್ಮ ಹೇಳಿಕೆಗಳನ್ನು ನೀಡಿದ್ದಾರೆ. ಅವರಲ್ಲಿ ಆರು ಮಂದಿ ಸಿಆರ್ಪಿಸಿ 164ರ ಅಡಿಯಲ್ಲಿ ತಮ್ಮ ಹೇಳಿಕೆಗಳನ್ನು ನೀಡಿದ್ದಾರೆ.
ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ ಮತ್ತು ವಿನೇಶ್ ಫೋಗಟ್ ಸೇರಿದಂತೆ ಭಾರತದ ಉನ್ನತ ಕುಸ್ತಿಪಟುಗಳು ದೆಹಲಿಯ ಜಂತರ್ ಮಂತರ್ನಲ್ಲಿ ಸಿಂಗ್ ಅವರನ್ನು ಭಾರತೀಯ ಕುಸ್ತಿ ಒಕ್ಕೂಟದ ಉನ್ನತ ಸ್ಥಾನದಿಂದ ತೆಗೆಯುವಂತೆ ಒತ್ತಾಯಿಸಿ 38 ದಿನಗಳ ಕಾಲ ಪ್ರತಿಭಟನೆ ನಡೆಸಿದ್ದರು.