Site icon Vistara News

Brij Bhushan Singh: ಬಿಜೆಪಿ ಸಂಸದ ಬ್ರಿಜ್‌ಭೂಷಣ್​ಗೆ ಸಮನ್ಸ್ ನೀಡಿದ ದೆಹಲಿ ಕೋರ್ಟ್​

MP Brij Bhushan Sharan Singh

ನವದೆಹಲಿ: ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಭಾರತೀಯ ಕುಸ್ತಿ ಫೆಡರೇಶನ್‌ನ ನಿರ್ಗಮಿತ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್‌ಭೂಷಣ್‌ ಶರಣ್​ ಸಿಂಗ್‌(Brij Bhushan Sharan Singh) ವಿರುದ್ಧ ದೆಹಲಿ ನ್ಯಾಯಾಲಯ ಶುಕ್ರವಾರ ಸಮನ್ಸ್ ನೀಡಿದೆ. ಜತೆಗೆ ಆರೋಪದಲ್ಲಿ ಸಾಕಷ್ಟು ಸಾಕ್ಷ್ಯಗಳಿವೆ ಎಂದು ಹೇಳಿದೆ. ಕಳೆದ ತಿಂಗಳು ದೆಹಲಿ ಪೊಲೀಸರು(Delhi Police) ಪಟಿಯಾಲ ನ್ಯಾಯಾಲಯಕ್ಕೆ 500 ಪುಟಗಳ ಚಾರ್ಜ್‌ಶೀಟ್‌(Chargesheet) ಸಲ್ಲಿಸಿ ಬ್ರಿಜ್‌ಭೂಷಣ್‌ ವಿರುದ್ಧ ದಾಖಲಾದ ಪೋಕ್ಸೊ(POCSO) ಕೇಸನ್ನು ರದ್ದುಗೊಳಿಸುವಂತೆ ಕೋಟ್​ಗೆ ಶಿಫಾರಸು ಮಾಡಿದ್ದರು. ಆದರೆ ಇದೀಗ ಅವರ ವಿರುದ್ಧದ ಆರೋಪದಲ್ಲಿ ಸಾಕಷ್ಟು ಸಾಕ್ಷ್ಯಗಳಿದ್ದು ಪ್ರಕರಣವನ್ನು ಮುಂದುವರಿಸಬಹುದಾಗಿ ಎಂದು ದೆಹಲಿ ನ್ಯಾಯಾಲಯ ತಿಳಿಸಿದೆ. ಬ್ರಿಜ್​ ಭೂಷಣ್​ ಜತೆಗೆ ಅಮಾನತುಗೊಂಡಿರುವ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್‌ಗೂ ಸಮನ್ಸ್ ನೀಡಲಾಗಿದೆ.

ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ACMM) ಹರ್ಜೀತ್ ಸಿಂಗ್ ಜಸ್ಪಾಲ್ ಅವರು ಜುಲೈ 18 ರಂದು ಬ್ರಿಜ್ ಭೂಷಣ್ ಅವರಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದ್ದಾರೆ. ಬಿಜೆಪಿ ಸಂಸದರೂ ಆಗಿರುವ ಬ್ರಿಜ್ ಭೂಷಣ್ ವಿರುದ್ಧ ನಗರ ಪೊಲೀಸರು ಜೂನ್ 15 ರಂದು ಸೆಕ್ಷನ್ 354, 354 ಎ (ಲೈಂಗಿಕ ಕಿರುಕುಳ), 354 ಡಿ (ಹಿಂಬಾಲಿಸುವಿಕೆ) ಮತ್ತು 506 (ಕ್ರಿಮಿನಲ್ ಬೆದರಿಕೆ)ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಸಿದ್ದರು.

ಭಾರತ ಕುಸ್ತಿ ಒಕ್ಕೂಟದ ಸಹಾಯಕ ಕಾರ್ಯದರ್ಶಿಯಾಗಿದ್ದ ತೋಮರ್ ವಿರುದ್ಧ IPC ಯ ಸೆಕ್ಷನ್ 109, ಅಪರಾಧಕ್ಕೆ ಕುಮ್ಮಕ್ಕು ನೀಡುವುದು, 354, 354A ಮತ್ತು 506 (ಅಪರಾಧ ಬೆದರಿಕೆ) ಅಡಿಯಲ್ಲಿ ಅಪರಾಧಗಳ ಆರೋಪಪಟ್ಟಿ ಸಲ್ಲಿಸಲಾಗಿದೆ.

ಇದನ್ನೂ ಓದಿ Wrestlers Protest: ಬ್ರಿಜ್​ ಭೂಷಣ್​ ಮನೆಗೆ ಬಂದ ಅಪರಿಚಿತ ವ್ಯಕ್ತಿಯ ಬಂಧನ

ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ದೂರು ನೀಡಿದ್ದ ಅಪ್ರಾಪ್ತ ಬಾಲಕಿಯ ಕುಸ್ತಿಪಟುವಿನ ತಂದೆ ಯೂ-ಟರ್ನ್​ ಹೊಡೆದಿದ್ದರು. ಬ್ರಿಜ್​ ಭೂಷಣ್​ ವಿರುದ್ಧ ಸುಳ್ಳು ಲೈಂಗಿಕ ಕಿರುಕುಳದ ದೂರು ನೀಡಿರುವುದಾಗಿ ಹೇಳಿಕೆ ನೀಡಿದ್ದರು. ಆದರೂ ಅವರ ವಿರುದ್ಧ ಪೊಲೀಸರು(Delhi Police) ಪಟಿಯಾಲ ನ್ಯಾಯಾಲಯಕ್ಕೆ 500 ಪುಟಗಳ ಚಾರ್ಜ್‌ಶೀಟ್‌(Chargesheet) ಸಲ್ಲಿಸಿದ್ದರು. ಇದೀಗ ಅವರಿಗೆ ಕೋರ್ಟ್​ ಸಮನ್ಸ್​ ನೀಡಿದೆ.

Exit mobile version