ನವದೆಹಲಿ: ಅಪ್ರಾಪ್ತ ವಯಸ್ಸಿನ ಮಹಿಳಾ ಕುಸ್ತಿಪಟು ಸೇರಿದಂತೆ ಉನ್ನತ ದರ್ಜೆಯ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ತಮ್ಮ ಬಂಧನಕ್ಕೆ ಒತ್ತಡ ಹೆಚ್ಚುತ್ತಿರುವ (Wrestlers Protest) ಹಿನ್ನೆಲೆಯಲ್ಲಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಜೂನ್ 5ರಂದು ಅಯೋಧ್ಯೆಯಲ್ಲಿ ಆಯೋಜಿಸಲಾಗಿದ್ದ ಬೃಹತ್ ಯಾತ್ರೆಯನ್ನು ಮುಂದೂಡಿದ್ದಾರೆ.
ಕುಸ್ತಿಪಟುಗಳನ್ನು ಬೆಂಬಲಿಸಿ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಸುಮಾರು 50 ಕಾಪ್ ಪಂಚಾಯಿತಿ ಮತ್ತು ಕುಲ ಆಧಾರಿತ ಸಂಘಟನೆಗಳ ಪ್ರತಿನಿಧಿಗಳು ಸಭೆ ಸೇರಿ ಕುಸ್ತಿಪಟುಗಳಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಬ್ರಿಜ್ಭೂಷಣ್ ಸಿಂಗ್ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲು ಅಧ್ಯಕ್ಷ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದರು. ಇವೆಲ್ಲದರ ಹಿನ್ನೆಲೆಯಲ್ಲಿ ಯಾತ್ರೆಯನ್ನು ಬ್ರಿಜ್ಭೂಷಣ್ ರದ್ದು ಮಾಡಿದ್ದಾರೆ.
ಫೇಸ್ಬುಕ್ ಪೋಸ್ಟ್ ಮೂಲಕ ಜೂನ್ 5ರ ಯಾತ್ರೆಯನ್ನು ಮುಂದೂಡುವುದಾಗಿ ಬ್ರಿಜ್ಭೂಷಣ್ ಘೋಷಿಸಿದ್ದಾರೆ. ಈ ವೇಳೆ ಅವರು ತಮ್ಮ ವಿರುದ್ಧ ನಡೆಯುತ್ತಿರುವ ಪೊಲೀಸ್ ತನಿಖೆ ಮತ್ತು ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಉಲ್ಲೇಖಿಸಿದ್ದಾರೆ. ಅಯೋಧ್ಯೆಯ ಯಾತ್ರೆಯಲ್ಲಿ ಹಲವಾರು ಸಂತರು ಸಿಂಗ್ ಅವರೊಂದಿಗೆ ವೇದಿಕೆ ಹಂಚಿಕೊಳ್ಳುವ ಸಾಧ್ಯತೆ ಇತ್ತು.
ಇದನ್ನೂ ಓದಿ : ಫೋಟೋ ತೆಗೆಸಿಕೊಳ್ತಿದ್ದವರು ಈಗ ಆರೋಪ ಮಾಡ್ತಿದ್ದಾರೆ, ರಾಜೀನಾಮೆ ಕೊಡೋದಿಲ್ಲ: ಕುಸ್ತಿಪಟುಗಳ ವಿರುದ್ಧ ಬ್ರಿಜ್ ಭೂಷಣ್ ಸಿಂಗ್ ಕಿಡಿ
ಅಯೋಧ್ಯೆಯ ಸಂತರು ಕಳೆದ ವಾರ ಸಿಂಗ್ಗೆ ಬೆಂಬಲ ಸೂಚಿಸಿ ಪತ್ರಿಕಾಗೋಷ್ಠಿ ನಡೆಸಿದ್ದರು. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಗೆ ತಿದ್ದುಪಡಿ ತರಬೇಕೆಂದು ಒತ್ತಾಯಿಸಿದ್ದರು. ಪೋಕ್ಸೊ ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಮತ್ತು ಬ್ರಿಜ್ಭೂಷಣ್ ಸಿಂಗ್ ಅವರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದರು.
ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಬಜರಂಗ್ ಪೂನಿಯಾ, ರಿಯೋ ಗೇಮ್ಸ್ ಕಂಚಿನ ಪದಕ ವಿಜೇತ ಸಾಕ್ಷಿ ಮಲಿಕ್ ಮತ್ತು ಡಬಲ್ ವಿಶ್ವ ಚಾಂಪಿಯನ್ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಬುಧವಾರ ತಮ್ಮ ಪದಕಗಳನ್ನು ಗಂಗಾ ನದಿಯಲ್ಲಿ ವಿಸರ್ಜಿಸಲು ಮುಂದಾಗಿ ಬಳಿಕ ರೈತ ಸಂಘದ ಒತ್ತಾಯದ ಬಳಿಕ ನಿರ್ಧಾರ ಬದಲಿಸಿದ್ದರು. ಹರಿದ್ವಾರದ ಗಂಗಾ ದಡದಲ್ಲಿ ಕುಸ್ತಿಪಟುಗಳು ಕಣ್ಣೀರಿಟ್ಟರು.
ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್ಐ) ಮುಖ್ಯಸ್ಥ ಸ್ಥಾನದಿಂದ ಅಮಾನತಾಗಿರುವ ಸಿಂಗ್ ವಿರುದ್ಧ ಎರಡು ಪ್ರಕರಣಗಳನ್ನು ದಾಖಲಿಸಲಾಗಿದ್ದು, ಅವರನ್ನು ತಕ್ಷಣ ಬಂಧಿಸುವಂತೆ ಕುಸ್ತಿಪಟುಗಳು ಒತ್ತಾಯಿಸಿದ್ದರು. ಆದರೆ ತನ್ನ ವಿರುದ್ಧ ಒಂದೇ ಒಂದು ಆರೋಪ ಸಾಬೀತಾದರೆ ನೇಣು ಹಾಕಿಕೊಳ್ಳುವುದಾಗಿ ಬ್ರಿಜ್ಭೂಷಣ್ ಸಿಂಗ್ ಬುಧವಾರ ಸವಾಲೆಸೆದಿದ್ದರು.