ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 51ನೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ಹಾಗೂ ಕೃಣಾಲ್ ಪಾಂಡ್ಯ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿವೆ. ಲೀಗ್ನ ಇತಿಹಾಸದಲ್ಲಿ ಮೊದಲ ಬಾರಿಗೆ ಸಹೋದರರ ನಾಯಕತ್ವದ ತಂಡವು ಪರಸ್ಪರ ಸೆಣಸಾಡುತ್ತಿದೆ. ಆದರೆ, ಇಲ್ಲಿ ಸ್ಪರ್ಧೆಗಿಂತ ಅವರಿಬ್ಬರ ಪ್ರೀತಿ, ಅಭಿಮಾನವೇ ಹೆಚ್ಚು ಹೈಲೈಟ್ ಎನಿಸಿತು.
ಟಾಸ್ಗಾಗಿ ಬಂದ ಹಾರ್ದಿಕ್ ಪಾಂಡ್ಯ ಹಾಗೂ ಕೃಣಾಲ್ ಪಾಂಡ್ಯ ಪರಸ್ಪರ ಪ್ರೀತಿಯಿಂದ ಆಲಂಗಿಸಿದರು. ಅದಕ್ಕಿಂತ ಮೊದಲು ಹಾರ್ದಿಕ್ ಅವರು ಕೃಣಾಲ್ ಪಾಂಡ್ಯ ಅವರ ಶರ್ಟ್ನ ಕಾಲರ್ ಸರಿ ಮಾಡಿ, ಹ್ಯಾಟ್ ಸರಿ ಮಾಡಿದರು. ಈ ದೃಶ್ಯ ಟಿವಿ ನೇರ ಪ್ರಸಾರದ ಕ್ಯಾಮೆರಾಗಳ ಗಮನ ಸೆಳೆಯಿತು. ಸಹೋದರರ ಪ್ರೀತಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಮೆಚ್ಚುಗೆಗಳು ವ್ಯಕ್ತಗೊಂಡವು.
ಅಂದ ಹಾಗೆ ಕೃಣಾಲ್ ಪಾಂಡ್ಯ ಲಕ್ನೊ ತಂಡದ ಕಾಯಂ ನಾಯಕ ಅಲ್ಲ. ಕೆ. ಎಲ್ ರಾಹುಲ್ ಕಳೆದ ವರ್ಷದಿಂದ ತಂಡದ ನೇತೃತ್ವ ವಹಿಸಿಕೊಂಡಿದ್ದಾರೆ. ಆದರೆ, ಆರ್ಸಿಬಿ ವಿರುದ್ಧದ ಪಂದ್ಯದ ವೇಳೆ ತೊಡೆ ನೋವಿಗೆ ಒಳಗಾಗಿರುವ ರಾಹುಲ್ ಟೂರ್ನಿಯಿಂದ ಹೊರಕ್ಕೆ ನಡೆದಿದ್ದಾರೆ. ಹೀಗಾಗಿ ಕೃಣಾಲ್ಗೆ ನಾಯಕತ್ವ ವಹಿಸಲಾಗಿದೆ.
ಟಾಸ್ ಸೋತ ಹಾರ್ದಿಕ್ ಪಡೆಯಿಂದ ಬ್ಯಾಟಿಂಗ್
ಭಾನುವಾರದ ಐಪಿಎಲ್ನ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಟಾಸ್ ಗೆದ್ದ ಲಕ್ನೋ ಸೂಪರ್ಜೈಂಟ್ಸ್ ತಂಡದ ನಾಯಕ ಕೃಣಾಲ್ ಪಾಂಡ್ಯ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹಾರ್ದಿಕ್ ಪಡೆ ಬ್ಯಾಟಿಂಗ್ ಆಹ್ವಾನ ಪಡೆದಿದೆ.
ಕೆ.ಎಲ್. ರಾಹುಲ್ ಗಾಯಾಳಾಗಿ ಐಪಿಎಲ್‌ನಿಂದ ಹೊರಗುಳಿದ ಕಾರಣ ನಾಯಕತ್ವದ ಜವಾಬ್ದಾರಿ ಹೊತ್ತಿರುವ ಕೃಣಾಲ್ ಪಾಂಡ್ಯ ಅವರು ತಮ್ಮ ಸಹೋದರನ ತಂಡವಾದ ಗುಜರಾತ್ ವಿರುದ್ಧ ಲಕ್ನೋಗೆ ಮೊದಲ ಗೆಲುವು ತಂದು ಕೊಡಲಿದ್ದಾರಾ ಎಂಬುದು ಈ ಪಂದ್ಯದ ಕೌತುಕ. ಲಕ್ನೋ ತಂಡ ನವೀನ್ ಉಲ್ ಹಕ್ ಅವರನ್ನು ಈ ಪಂದ್ಯಕ್ಕೆ ಕೈ ಬಿಟ್ಟು ಕ್ವಿಂಟನ್ ಡಿ ಕಾಕ್ಗೆ ಅವಕಾಶ ನೀಡಿತು.
ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯ ಲಕ್ನೋ ಪಾಲಿಗೆ ಮಹತ್ವದ್ದಾಗಿದೆ. ಲಕ್ನೋ ಗೆದ್ದರೆ 13 ಅಂಕದೊಂದಿಗೆ ಮತ್ತೆ ದ್ವಿತೀಯ ಸ್ಥಾನಕ್ಕೇರುವ ಮೂಲಕ ಪ್ಲೇ ಆಪ್ ರೇಸ್ನಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ. ಬಲಾಬಲದ ಲೆಕ್ಕಾಚಾರದಲ್ಲಿ ಗುಜರಾತ್ ಹೆಚ್ಚು ಬಲಿಷ್ಠವಾಗಿದೆ. ಎಲ್ಲ ವಿಭಾಗದಲ್ಲಿಯೂ ಸಮರ್ಥವಾಗಿದೆ. ಉಭಯ ತಂಡಗಳು ಐಪಿಎಲ್ನಲ್ಲಿ ಈ ವರೆಗೆ ಮೂರು ಬಾರಿ ಮುಖಾಮುಖಿಯಾಗಿದ್ದು ಮೂರೂ ಪಂದ್ಯದಲ್ಲಿಯೂ ಲಕ್ನೋ ಸೋಲು ಕಂಡಿದೆ.
ಪಿಚ್ ಹೇಗಿದೆ?
ನರೇಂದ್ರ ಮೋದಿ ಸ್ಟೇಡಿಯಂನ ಪಿಚ್ ಸಮತೋಲಿತವಾಗಿದೆ. ವೇಗಿಗಳು ಆರಂಭದಲ್ಲಿ ಸ್ವಲ್ಪ ಅನುಕೂಲ ಪಡೆಯುವ ಸಾಧ್ಯತೆಗಳಿವೆ. ತಳವೂರಿ ನಿಂತರೆ ಬ್ಯಾಟರ್ಗಳಿಗೂ ಹೆಚ್ಚು ರನ್ ಗಳಿಸುವ ಅವಕಾಶಗಳಿವೆ. 190 ಆಸುಪಾಸು ರನ್ ಕ್ರೋಡೀಕರಣಗೊಳ್ಳಬಹುದು. ಮೊದಲು ಬೌಲಿಂಗ್ ಮಾಡಿದ ತಂಡಕ್ಕೆ ಗೆಲುವಿನ ಅವಕಾಶ ಹೆಚ್ಚು.