ಗುವಾಹಟಿ: ಏಪ್ರಿಲ್ 8ರಂದು ನಡೆಯಲಿರುವ ಐಪಿಎಲ್ನ ಡಬಲ್ ಹೆಡರ್ನ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡ ಪರಸ್ಪರ ಎದುರಾಗಲಿವೆ. ಈ ಪಂದ್ಯಕ್ಕೆ ಇತ್ತಂಡಗಳ ಇಬ್ಬರು ವಿದೇಶಿ ಆಟಗಾರರು ಅಲಭ್ಯರಾಗುವ ಸಾಧ್ಯತೆಗಳಿವೆ. ರಾಜಸ್ಥಾನ್ ತಂಡದ ಜೋಸ್ ಬಟ್ಲರ್ ಹಾಗೂ ಡೆಲ್ಲಿ ತಂಡದ ಆಲ್ರೌಂಡರ್ ಮಿಚೆಲ್ ಮಾರ್ಷ್ ಅಲಭ್ಯರಾಗಲಿದ್ದಾರೆ. ಬಟ್ಲರ್ ಗಾಯದ ಸಮಸ್ಯೆಗೆ ಒಳಗಾದರೆ ಮಿಚೆಲ್ ಮಾರ್ಷ್ ತಮ್ಮ ಮದುವೆ ಕಾರಣಕ್ಕೆ ವಿಶ್ರಾಂತಿ ತೆಗೆದುಕೊಂಡು ಆಸ್ಟ್ರೇಲಿಯಾಗೆ ಮರಳಿದ್ದಾರೆ.
ಈ ಪಂದ್ಯ ಗುವಾಹಟಿಯ ಬರ್ಸಾಪಾರ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಅಯೋಜನೆಗೊಂಡಿದೆ. ಆರ್ಆರ್ ತಂಡಕ್ಕೆ ಬಟ್ಲರ್ ಅಲಭ್ಯತೆ ಆತಂಕ ತಂದೊಡ್ಡಿದೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆಡುವ ವೇಳೆ ಬಟ್ಲರ್ ಕಿರುಬೆರಳಿಗೆ ಗಾಯವಾಗಿತ್ತು. ಅದಕ್ಕೆ ಹೊಲಿಗೆ ಹಾಕಲಾಗಿದೆ. ಅದು ವಾಸಿಯಾಗದ ಕಾರಣ ಅವರಿಗೆ ಆಡುವುದು ಸಾಧ್ಯವಿಲ್ಲ ಎಂದು ಹೇಳಲಾಗಿದೆ.
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅವರು ಆರಂಭಿಕರಾಗಿ ಬ್ಯಾಟ್ ಮಾಡಲು ಇಳಿದಿರಲಿಲ್ಲ. ಮೂರನೇ ಕ್ರಮಾಂಕದಲ್ಲಿ ಆಡಿದ್ದರೂ 11 ಎಸೆತಗಳಲ್ಲಿ 19 ರನ್ ಗಳಿಸಿ ಔಟಾಗಿದ್ದರು. ಆಟದ ನಡುವೆ ಅವರು ಸಾಕಷ್ಟು ನೋವು ಎದುರಿಸಿದ್ದರು.
ಮಾರ್ಷ್ಗೆ ಮದುವೆ
ಡೆಲ್ಲಿ ತಂಡದ ಆಲ್ರೌಂಡರ್ ಮಿಚೆಲ್ ಮಾರ್ಷ್ಗೆ ಮದುವೆ ನಿಗದಿಯಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಕ್ಕೆ ಅವರು ಒಂದು ವಾರ ಕಾಲ ಆಸ್ಟ್ರೇಲಿಯಾಗೆ ಮರಳಲಿದ್ದಾರೆ. ಮದುವೆ ಮುಗಿಸಿದ ಬಳಿಕ ಅವರು ವಾಪಸ್ ಬಂದು ಡೆಲ್ಲಿ ತಂಡದಲ್ಲಿ ಆಡಲಿದ್ದಾರೆ.
ಮಾರ್ಷ್ ಆರಂಭಿಕ ಬ್ಯಾಟರ್ ಆಗಿದ್ದರೂ ಡೇವಿಡ್ ವಾರ್ನರ್ ಹಾಗೂ ಪೃಥ್ವಿ ಶಾ ಮೊದಲು ಬ್ಯಾಟ್ ಮಾಡುತ್ತಿರುವ ಕಾರಣ ಮೂರನೇ ಕ್ರಮಾಂಕದಲ್ಲಿ ಆಡುತ್ತಿದ್ದಾರೆ. ಆಡಿರುವ ಎರಡು ಪಂದ್ಯಗಳಲ್ಲಿ ಅವರು ದೊಡ್ಡ ಯಶಸ್ಸು ಕಂಡಿಲ್ಲ. ಡೇವಿಡ್ ವಾರ್ನರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ರೋವ್ಮನ್ ಪೊವೆಲ್ಗೆ ಮಾರ್ಷ್ ಬದಲಿಗೆ ಅವಕಾಶ ನೀಡಬಹುದು. ಅಲ್ಲದಿದ್ದರೆ ಬಾಂಗ್ಲದೇಶದ ಮುಸ್ತಾಫಿಜುರ್ ರಹ್ಮಾನ್ ಅಥವಾ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಲುಂಗಿ ಎನ್ಗಿಡಿಗೆ ಅವಕಾಶ ನೀಡಬಹುದು.
ಇದನ್ನೂ ಓದಿ : IPL 2023 : ಕೈಬೆರಳಿಗೆ ಗಾಯ, ಜೋಸ್ ಬಟ್ಲರ್ ಮುಂದಿನ ಪಂದ್ಯಕ್ಕೆ ಅಲಭ್ಯ?
ಡೇವಿಡ್ ವಾರ್ನರ್ ಪಡೆ ಐಪಿಎಲ್ 16ನೇ ಆವೃತ್ತಿಯಲ್ಲಿ ಉತ್ತಮ ಆರಂಭ ಪಡೆದುಕೊಂಡಿಲ್ಲ. ಆಡಿರುವ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿದೆ. ಮೊದಲ ಪಂದ್ಯದಲ್ಲಿ ಲಖನೌ ಸೂಪರ್ ಜಯಂಟ್ಸ್ ವಿರುದ್ಧ ಸೋತಿದ್ದರೆ ಎರಡನೇ ಪಂದ್ಯದಲ್ಲಿ ಚೆನ್ನೈ ಗುಜರಾತ್ ಜಯಂಟ್ಸ್ ವಿರುದ್ದ ಮಣಿದಿತ್ತು.
ರಾಜಸ್ಥಾನ್ ರಾಯಲ್ಡ್ ತಂಡ ಆಡಿರುವ ಎರಡರಲ್ಲಿ ಒಂದನ್ನು ಗೆದ್ದುಕೊಂಡಿದೆ. ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಗೆಲುವು ಕಂಡಿದ್ದರೆ ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ವೀರೋಚಿತ ಸೋಲು ಅನುಭವಿಸಿತ್ತು.