ದುಬೈ: ಬ್ಯಾಟಿಂಗ್‌ನಲ್ಲಿ ಕಾಣದ ಅಬ್ಬರ, ಬೌಲಿಂಗ್‌ನಲ್ಲಿ ಮೊನಚಿನ ಬರ ಹಾಗೂ ಫೀಲ್ಡಿಂಗ್‌ನಲ್ಲಿ ತೋರಿದ ನಿರ್ಲಕ್ಷ್ಯದಿಂದಾಗಿ ಏಷ್ಯಾ ಕಪ್ (Asia Cup) ಟೂರ್ನಿಯಲ್ಲಿ ಸುಲಭವಾಗಿ ಫೈನಲ್‌ಗೇರುವ ಅವಕಾಶವನ್ನು ಭಾರತ ತಂಡವು ಕಷ್ಟಸಾಧ್ಯ ಎನ್ನುವ ಹಂತಕ್ಕೆ ತಂದಿದೆ. ಆದರೆ, ಟೂರ್ನಿಯ ಸೂಪರ್ 4ರ ಹಂತದಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ವಿರುದ್ಧ ಸೋತರೂ ರೋಹಿತ್ ಪಡೆಯು ಫೈನಲ್‌ಗೇರುವ ಅವಕಾಶ ಹೊಂದಿದೆ. ಇದಕ್ಕೆ ಬೇರೆ ತಂಡಗಳ ಸೋಲು, ರನ್‌ರೇಟ್ ಮಾನದಂಡ ಸೇರಿ ಹಲವು ಲೆಕ್ಕಾಚಾರವಿದೆ. ಹಾಗಾದರೆ, ಏನು ಆ ಲೆಕ್ಕಾಚಾರ ಎಂಬುದರ ಸಂಕ್ಷಿಪ್ತ ವಿವರ ಹೀಗಿದೆ.
ಫೈನಲ್ ಲೆಕ್ಕಾಚಾರ ಹೇಗಿದೆ?
ಭಾರತ, ಪಾಕಿಸ್ತಾನ, ಶ್ರೀಲಂಕಾ ಹಾಗೂ ಅಫಘಾನಿಸ್ತಾನ ತಂಡಗಳು ಸೂಪರ್ 4ರ ಹಂತ ತಲುಪಿವೆ. ಪ್ರತಿ ತಂಡವೂ ಪ್ರತಿಯೊಂದು ತಂಡದ ವಿರುದ್ಧ ಒಂದೊಂದು ಪಂದ್ಯ ಅಂದರೆ, ಒಟ್ಟು ಮೂರು ಪಂದ್ಯ ಆಡಲಿದೆ. ಸೂಪರ್ 4ರ ಹಂತದ ಕೊನೆಗೆ ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನ ಗಳಿಸುವ ತಂಡಗಳು ಫೈನಲ್‌ಗೇರಲಿವೆ.
ಈಗಿನ ಅಂಕಪಟ್ಟಿ ಏನು ಹೇಳುತ್ತದೆ?
ಬುಧವಾರದ ಪಂದ್ಯ ಆರಂಭಕ್ಕೂ ಮೊದಲಿನ ಅಂಕಪಟ್ಟಿ ನೋಡುವುದಾದರೆ, ಎರಡು ಪಂದ್ಯಗಳನ್ನು ಆಡಿ ಎರಡರಲ್ಲೂ ಗೆದ್ದು, ನಾಲ್ಕು ಅಂಕ ಸಂಪಾದಿಸಿರುವ ಶ್ರೀಲಂಕಾ ಫೈನಲ್ ಟಿಕೆಟ್‌ಅನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಒಂದು ಪಂದ್ಯ ಆಡಿ ಗೆದ್ದಿರುವ ಪಾಕಿಸ್ತಾನ ಎರಡು ಅಂಕ ಪಡೆದು ಎರಡನೇ ಸ್ಥಾನದಲ್ಲಿದೆ. ಆಡಿರುವ ಎರಡೂ ಪಂದ್ಯ ಸೋತ ಭಾರತ ತಂಡ ರನ್ ರೇಟ್ ಆಧಾರದ ಮೇಲೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಆಡಿದ ಒಂದು ಪಂದ್ಯ ಸೋತಿರುವ ಅಫಘಾನಿಸ್ತಾನ ಕೊನೆಯ ಸ್ಥಾನದಲ್ಲಿದೆ.
ಭಾರತಕ್ಕಿರುವ ಸಾಧ್ಯತೆ ಏನು?
ಉಳಿದ ಪಂದ್ಯಗಳಲ್ಲಿ ತಂಡಗಳ ಸೋಲು-ಗೆಲುವಿನ ಆಧಾರದ ಮೇಲೆ ಭಾರತ ತಂಡದ ಭವಿಷ್ಯ ನಿರ್ಧಾರವಾಗುತ್ತದೆ. ಅದರಲ್ಲೂ, ಬುಧವಾರ ಪಾಕಿಸ್ತಾನ ಹಾಗೂ ಅಫಘಾನಿಸ್ತಾನ ತಂಡದ ಮಧ್ಯೆ ನಡೆಯುವ ಪಂದ್ಯವು ನಿರ್ಣಾಯಕವಾಗಿದೆ. ಈ ಪಂದ್ಯದಲ್ಲಿ ಪಾಕ್ ವಿರುದ್ಧ ಆಫ್ಘನ್ ಗೆಲುವು ಸಾಧಿಸಿದರೆ ಮಾತ್ರ ರೋಹಿತ್ ಪಡೆಗೆ ಉಳಿಗಾಲ. ಒಂದು ವೇಳೆ ಪಾಕಿಸ್ತಾನ ಗೆದ್ದರೆ ಭಾರತಕ್ಕೆ ಗೇಟ್ ಪಾಸ್ ನಿಶ್ಚಿತ.
ಹಾಗೊಂದು ವೇಳೆ, ಪವಾಡ ನಡೆದು, ಆಫ್ಘನ್ ತಂಡವು ಬಲಿಷ್ಠ ಪಾಕಿಸ್ತಾನವನ್ನು ಸೋಲಿಸಿದರೂ ಭಾರತ ತಂಡ ನಿಟ್ಟುಸಿರು ಬಿಡುವಂತಿಲ್ಲ. ಗುರುವಾರ ಆಫ್ಘನ್ ವಿರುದ್ಧ ನಡೆಯುವ ಪಂದ್ಯದಲ್ಲಿ ಭಾರತ ಬೃಹತ್ ಅಂತರದಲ್ಲಿ ಗೆಲುವು ಸಾಧಿಸಿ ಉತ್ತಮ ರನ್‌ರೇಟ್ ಕಾಪಾಡಿಕೊಳ್ಳಬೇಕು. ಹಾಗೆಯೇ, ಶುಕ್ರವಾರ ನಡೆಯುವ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾ ಗೆಲ್ಲಬೇಕು. ಇಷ್ಟೆಲ್ಲ ಅದೃಷ್ಟ, ಲೆಕ್ಕಾಚಾರ ರೋಹಿತ್ ಬಳಗದ ಪರವಾಗಿಯೇ ಇರಬೇಕು. ಇದರಲ್ಲಿ ಸ್ವಲ್ಪ ಏರುಪೇರಾದರೂ ಭಾರತ ತಂಡವು ಖಾಲಿ ಕೈಯಲ್ಲಿ ತವರಿನ ಫ್ಲೈಟ್ ಹತ್ತಬೇಕಾಗುತ್ತದೆ.
ಇದನ್ನೂ ಓದಿ | Asia Cup | ಶ್ರೀಲಂಕಾ ವಿರುದ್ಧ ಭಾರತಕ್ಕೆ 6 ವಿಕೆಟ್ ಸೋಲು, ಫೈನಲ್ ಅವಕಾಶ ಬಹುತೇಕ ಕಷ್ಟ