Site icon Vistara News

CAN vs USA: ಕೆನಡಾ ಪರ ಟಿ20 ವಿಶ್ವಕಪ್​ ಪಂದ್ಯವಾಡಿದ ದಾವಣಗೆರೆಯ ಶ್ರೇಯಸ್

CAN vs USA

CAN vs USA: Davanagere's Shreyas played for Canada in T20 World Cup

ನ್ಯೂಯಾರ್ಕ್​: 9ನೇ ಆವೃತ್ತಿಯ ಟಿ20 ವಿಶ್ವಕಪ್(T20 World Cup 2024)​ ಟೂರ್ನಿಗೆ ಅಧಿಕೃತ ಚಾಲನೆ ಸಿಕ್ಕಿದೆ. ಇಂದು(ಭಾನುವಾರ) ನಡೆದ ಉದ್ಘಾಟನ ಪಂದ್ಯದಲ್ಲಿ ಆತಿಥೇಯ ಅಮೆರಿಕ(CAN vs USA) ತಂಡ ಕೆನಡಾ ವಿರುದ್ಧ ಭರ್ಜರಿ 7 ವಿಕೆಟ್​ಗಳ ಗೆಲುವು ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ. ಕೆನಡಾ ಪರ ಕರ್ನಾಟಕದ, ದಾವಣಗೆರೆ ಮೂಲದ ಆಟಗಾರ ಶ್ರೇಯಸ್ ಮೋವಾ(Shreyas Movva) ಕೂಡ ಕಣಕ್ಕಿಳಿದು ಚೊಚ್ಚಲ ಟಿ20 ವಿಶ್ವಕಪ್​ ಪಂದ್ಯವನ್ನಾಡಿದ ಹಿರಿಮೆಗೆ ಪಾತ್ರರಾದರು.

ಕರ್ನಾಟಕ ಪರವೂ ಆಡಿದ್ದರು


ಹೌದು, 30 ವರ್ಷದ ವಿಕೆಟ್​ ಕೀಪರ್​ ಕಮ್​ ಬ್ಯಾಟರ್​ ಆಗಿರುವ ಶ್ರೇಯಸ್ ಮೋವಾ ದಾವಣಗೆರೆಯವರಾಗಿದ್ದಾರೆ. ಬಾಲ್ಯದ ದಿನದಲ್ಲಿ ಅಂದರೆ, 2006ರಲ್ಲಿ ದಾವಣಗೆರೆ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆದು, ಬಳಿಕ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ನಡೆಸುವ ಅಂತಾರಾಜ್ಯ ವಯೋಮಿತಿ ಒಳಗೊಂಡ 19 ವರ್ಷದೊಳಗಿನ, 16 ವರ್ಷದೊಳಗಿನ ಪಂದ್ಯಾವಳಿಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು.

ಕೆನಡಾ ಪೌರತ್ವ


ದಾವಣಗೆರೆಯ ಬಾಪೂಜಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ಶ್ರೇಯಸ್, ಹೆಚ್ಚಿನ ವಿದ್ಯಾಭ್ಯಾಸಕ್ಕೆ ಕೆನಡಾಕ್ಕೆ ತರೆಳಿದರು. ಇಲ್ಲಿಯೂ ಕೂಡ ಕ್ರಿಕೆಟ್​ ನಂಟು ಬಿಡದ ಇವರು ಅಲ್ಲಿನ ಸ್ಥಳೀಯ ಕ್ರಿಕೆಟ್​ ಟೂರ್ನಿಗಳಲ್ಲಿ ಆಡುವ ಮೂಲಕ ಗಮನಸೆಳೆದಿದ್ದರು. ಬಳಿಕ ಕೆನಡಾ ದೇಶದ ಪೌರತ್ವ ಪಡೆದು ಇದೀಗ ಕೆನಡಾ ರಾಷ್ಟ್ರೀಯ ತಂಡದ ಪರ ಆಡುತ್ತಿದ್ದಾರೆ. ಇದುವರೆಗೆ 6 ಟಿ20 ಮತ್ತು 7 ಏಕದಿನ ಪಂದ್ಯಗಳನ್ನಾಡಿ ಒಟ್ಟು 171 ರನ್​ ಬಾರಿಸಿದ್ದಾರೆ. ವಿಕೆಟ್​ ಕೀಪರ್​ ಆಗಿರುವ ಇವರು ಇದೇ ವರ್ಷ ನಡೆದಿದ್ದ ನೇಪಾಳ ವಿರುದ್ಧದ ಏಕದಿನ ಸರಣಿಯ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು.

ಇದನ್ನೂ ಓದಿ USA vs CAN: ಆರನ್ ಜೋನ್ಸ್ ಪ್ರಚಂಡ ಬ್ಯಾಟಿಂಗ್​; ಗೆಲುವಿನ ಶುಭಾರಂಭ ಕಂಡ ಅಮೆರಿಕ

ಇಂದು ನಡೆದ ಅಮೆರಿಕ ವಿರುದ್ಧದ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ನಡೆಸಿದ ಶ್ರೇಯಸ್ ಆಕ್ರಮಣಕಾರಿ ಬ್ಯಾಟಿಂಗ್​ ಮೂಲಕ 16 ಎಸೆತಗಳಿಂದ ಅಜೇಯ 32 ರನ್​ ಬಾರಿಸಿದರು. ಅವರ ಈ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ ತಲಾ 2 ಬೌಂಡರಿ ಮತ್ತು ಸಿಕ್ಸರ್​ ಸಿಡಿಯಿತು. 20 ರನ್​ಗಳು ಬೌಂಡರಿ ಮತ್ತು ಸಿಕ್ಸರ್​ ಮೂಲಕವೇ ದಾಖಲಾಯಿತು. ಆದರೆ ಪಂದ್ಯ ಸೋತ ಕಾರಣ ಇವರ ಈ ಬ್ಯಾಟಿಂಗ್​ ಪ್ರದರ್ಶನ ವ್ಯರ್ಥವಾಯಿತು.

ಪಂದ್ಯ ಸೋತ ಕೆನಡಾ


ಇಲ್ಲಿನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂ, ಡಲ್ಲಾಸ್​ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಕೆನಡಾ ತಂಡ ನವನೀತ್ ಧಲಿವಾಲ್(61) ಮತ್ತು ನಿಕೋಲಸ್ ಕಿರ್ಟನ್(51) ಅರ್ಧಶತಕದ ಬ್ಯಾಟಿಂಗ್​ ನೆರವಿನಿಂದ 5 ವಿಕೆಟ್​ಗೆ 194 ರನ್​ ಬಾರಿಸಿತು. ಜವಾಬಿತ್ತ ಅಮೆರಿಕ ಈ ಬೃಹತ್​ ಮೊತ್ತವನ್ನು 17.4 ಓವರ್​ಗಳಲ್ಲಿ ಕೇವಲ 3 ವಿಕೆಟ್​ ಕಳೆದುಕೊಂಡು 197 ರನ್​ ಬಾರಿಸಿ ಅಮೋಘ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ ಯುಎಸ್​ಎ ಗರಿಷ್ಠ ಮೊತ್ತ ಚೇಸ್​ ಮಾಡಿದ ದಾಖಲೆ ಬರೆಯಿತು. ಇದಕ್ಕೂ ಮುನ್ನ 168 ರನ್​ಗಳನ್ನು ಚೇಸ್ ಮಾಡಿದ್ದು ತಂಡದ ಅತ್ಯುತ್ತಮ ಸಾಧನೆಯಾಗಿತ್ತು. ಇದೀಗ ಟಿ20 ವಿಶ್ವಕಪ್​ನ ಚೊಚ್ಚಲ ಪಂದ್ಯದಲ್ಲೇ ಐತಿಹಾಸಿಕ ಗೆಲುವು ದಾಖಲಿಸಿದೆ.

Exit mobile version