Site icon Vistara News

Candidates Chess: ಪ್ರಜ್ಞಾನಂದ, ವಿದಿತ್​ಗೆ ಗೆಲುವು; ವೈಶಾಲಿ, ಹಂಪಿಗೆ ಸೋಲು

Candidates Chess

ಟೊರಾಂಟೊ: ಇಲ್ಲಿ ನಡೆಯುತ್ತಿರುವ ಕ್ಯಾಂಡಿಡೇಟ್ಸ್‌ ಚೆಸ್‌(Candidates Chess) ಟೂರ್ನಿಯಲ್ಲಿ ಭಾರತದ ಪಾಲಿಗೆ ಉತ್ತಮ ಫಲಿತಾಂಶ ಕಂಡುಬಂದಿದೆ. ಆರನೇ ಸುತ್ತಿನ ಸ್ಪರ್ಧೆಯಲ್ಲಿ ಗ್ರ್ಯಾಂಡ್‌ಮಾಸ್ಟರ್‌ಗಳಾದ ಆರ್‌.ಪ್ರಜ್ಞಾನಂದ(R Praggnanandhaa) ಮತ್ತು ವಿದಿತ್ ಎಸ್‌.ಗುಜರಾತಿ(Vidit Gujrathi) ಗೆಲುವು ಸಾಧಿಸಿದ್ದಾರೆ. ಇನ್ನೊಂದೆಡೆ ಭಾರತದ ಇನ್ನೊಬ್ಬ ಆಟಗಾರ ಡಿ.ಗುಕೇಶ್ ಅಮೆರಿಕದ ಹಿಕಾರು ನಕಾಮುರಾ ಜತೆ ಡ್ರಾ ಸಾಧಿಸಿ ಜಂಟಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.

ಪಜ್ಞಾನಂದ ಅವರು ಆರನೇ ಸುತ್ತಿನ ಪಂದ್ಯದಲ್ಲಿ ಅಜರ್‌ಬೈಜಾನ್‌ನ ನಿಜತ್‌ ಅಬಸೋವ್‌ ಅವರನ್ನು 45 ನಡೆಗಳಲ್ಲಿ ಮಣಿಸಿದರೆ, ಗುಜರಾತಿ ಅವರು ಬಿಳಿ ಕಾಯಿಗಳಲ್ಲಿ ಆಡಿ ಫ್ರಾನ್ಸ್‌ನ ಅಲಿರೇಝಾ ಫಿರೋಜ್ ಅವರನ್ನು 40 ನಡೆಗಳಲ್ಲಿ ಸೋಲಿಸಿದರು. ಗುಜರಾತಿ ಎರಡು ಸುತ್ತುಗಳಲ್ಲಿ ಹಿನ್ನಡೆ ಕಂಡರೂ ಕೂಡ ತಕ್ಷಣ ಎಚ್ಚೆತ್ತುಕೊಂಡು ಪಂದ್ಯದಲ್ಲಿ ಹಿಡಿತ ಸಾಧಿಸಿದರು.

ಓಪನ್ ವಿಭಾಗದಲ್ಲಿ 17 ವರ್ಷದ ಗುಕೇಶ್ ಮತ್ತು ಇಯಾನ್‌ ನೆಪೊಮ್‌ನಿಯಾಚಿ ಅವರು ತಲಾ ನಾಲ್ಕು ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಫಿಡೆ ಧ್ವಜದಡಿಯಲ್ಲಿ ಆಡುತ್ತಿರುವ ರಷ್ಯಾದ ನೆಪೋಮ್ನಿಯಾಚಿ, ಅಗ್ರ ಶ್ರೇಯಾಂಕದ ಅಮೆರಿಕದ ಫ್ಯಾಬಿಯಾನೊ ಕರುವಾನಾ ಅವರೊಂದಿಗೆ ಡ್ರಾ ಸಾಧಿಸಿದರು.

ಇದನ್ನೂ ಓದಿ Vidit Gujrathi: ಮ್ಯಾಗ್ನಸ್‌ ಕಾರ್ಲ್‌ಸನ್​ಗೆ ಆಘಾತವಿಕ್ಕಿದ ವಿದಿತ್ ಗುಜರಾತಿ

ಮಹಿಳೆಯರ ವುಭಾಗದ ಸ್ಪರ್ಧೆಯಲ್ಲಿ ಆರ್. ವೈಶಾಲಿ ಅವರು ರಷ್ಯಾದ ಕಟೆರಿನಾ ಲಗ್ನೊ ವಿರುದ್ಧ ಸೋಲನುಭವಿಸುವ ಮೂಲಕ ನಿರಾಸೆ ಅನುಭವಿಸಿದರು. ಪ್ರಗ್ನಾನಂದ ಅವರ ಹಿರಿಯ ಸಹೋದರಿಯಾಗಿರುವ ವೈಶಾಲಿ ಮುಂದಿನ ಪಂದ್ಯದಲ್ಲಿ ಗೆಲುವು ಸಅಧಿಸಿದರೆ ಮತ್ತೆ ಕಮ್​ ಬ್ಯಾಕ್​ ಮಾಡಬಹುದು. ಕೊನೇರು ಹಂಪಿ ಚೀನಾದ ಟಿಂಗ್ಜಿ ಲೀ ವಿರುದ್ಧ ಸೋತರು. ವನಿತೆಯರ ವಿಭಾಗದ ಇನ್ನೆರಡು ಪಂದ್ಯಗಳಲ್ಲಿ ರಷ್ಯಾದ ಅಲೆಕ್ಸಾಂಡ್ರಾ ಗೊರ್ಯಾಚ್ಕಿನಾ, ಬಲ್ಗೇರಿಯಾದ ನುರ್ಗ್ಯುಲ್ ಸಲಿಮೋನಾ ಅವರನ್ನು, ಚೀನಾದ ಝೊಂಗ್‌ವಿ ತಾನ್, ಉಕ್ರೇನ್‌ನ ಅನ್ನಾ ಮುಝಿಚುಕ್ ಅವರನ್ನು ಮಣಿಸಿದರು.

ಕರುವಾನಾ ಮತ್ತು ಪ್ರಜ್ಞಾನಂದ ತಲಾ 3.5 ಪಾಯಿಂಟ್ಸ್ ಸಂಗ್ರಹಿಸಿದ್ದಾರೆ. ಎರಡನೇ ಶ್ರೇಯಾಂಕದ ಹಿಕಾರು ನಕಾಮುರಾ ಮತ್ತು ವಿದಿತ್‌ ಗುಜರಾತಿ ತಲಾ ಮೂರು ಪಾಯಿಂಟ್ಸ್ ಶೇಖರಿಸಿದ್ದಾರೆ. ಅಬಸೋವ್ ಮತ್ತು ಅಲಿರೇಝಾ (ತಲಾ 1.5) ಕೊನೆಯ ಸ್ಥಾನದಲ್ಲಿದ್ದಾರೆ.

Exit mobile version