Site icon Vistara News

Car Accident | ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಐವರು ಖ್ಯಾತ ಕ್ರಿಕೆಟಿಗರು ಇವರು

car crash

ಬೆಂಗಳೂರು: ಟೀಮ್​ ಇಂಡಿಯಾ ಆಟಗಾರ ರಿಷಭ್​ ಪಂತ್​ ರಸ್ತೆ ಅಪಘಾತದಲ್ಲಿ ಗಾಯಗೊಂಡು ಸದ್ಯ ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಗಂಭೀರ ಅಪಘಾತದಲ್ಲಿ ಅವರು ಪ್ರಾಣಪಾಯದಿಂದ ಪಾರಾಗಿದ್ದೇ ಪವಾಡ ಎಂಬಂತಿದೆ. ಆದರೆ ಇಂತಹ ಅಪಘಾತದಲ್ಲಿ ಈಗಾಗಲೇ ಹಲವು ಕ್ರಿಕೆಟಿಗರು ಪ್ರಾಣ ಕಳೆದುಕೊಂಡಿದ್ದಾರೆ. ಅಂತಹ ಕೆಲವು ಕ್ರಿಕೆಟಿಗರ ವರದಿ ಈ ಕೆಳಗಿನಂತಿದೆ.

ಆ್ಯಂಡ್ರೂ ಸೈಮಂಡ್ಸ್

ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟ್‌ ಆಟಗಾರ ಆ್ಯಂಡ್ರ್ಯೂ ಸೈಮಂಡ್ಸ್‌ ಮೇ 2022 ರಲ್ಲಿ ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು. ಕ್ವೀನ್ಸ್‌ಲ್ಯಾಂಡ್‌ನ ಟೌನ್ಸ್‌ವಿಲ್ಲೆ ಎಂಬಲ್ಲಿ ಈ ಅಪಘಾತ ಸಂಭವಿಸಿತ್ತು. ರಾತ್ರಿಯ ವೇಳೆ ಸೈಮಂಡ್ಸ್‌ ಒಬ್ಬರೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಕಾರು ರಸ್ತೆಯಿಂದ ಹೊರಗೆ ಸಂಚರಿಸಿ, ಪಲ್ಟಿಯಾಗಿದೆ. ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಸೈಮಂಡ್ಸ್ ಅವರಿಗೆ ಕೇವಲ 46 ವರ್ಷವಾಗಿತ್ತು.

ರುನಾಕೊ ಮಾರ್ಟನ್

ವೆಸ್ಟ್ ಇಂಡೀಸ್ ಕ್ರಿಕೆಟಿಗ ಸ್ಟಾರ್​ ಕ್ರಿಕೆಟಿಗ ರುನಾಕೊ ಮಾರ್ಟನ್ ಅವರು ತಮ್ಮ 33 ನೇ ವಯಸ್ಸಿನಲ್ಲಿ ರಸ್ತೆ ಅಪಘಾತದಲ್ಲಿ ನಿಧನರಾದರು. ಮಾರ್ಚ್ 2012 ರಲ್ಲಿ ಈ ಘಟನೆ ಸಂಭವಿಸಿತ್ತು. ಹೆದ್ದಾರಿಯೊಂದರ ಕಂಬಕ್ಕೆ ರುನಾಕೊ ಮಾರ್ಟನ್ ಚಲಾಯಿಸುತಿದ್ದ ಕಾರು ನಿಯಂತ್ರಣ ತಪ್ಪಿ ಅಪ್ಪಳಿಸಿತ್ತು. ತಲೆಯ ಭಾಗಕ್ಕೆ ಗಂಭೀರ ಪೆಟ್ಟು ಬಿದ್ದ ಪರಿಣಾಮ ವಿಂಡೀಸ್ ಕ್ರಿಕೆಟಿಗ ಸ್ಥಳದಲ್ಲೇ ಕೊನೆಯುಸಿರೆಳೆದರು.

ಬೆನ್ ಹೋಲಿಯೋಕ್

ಮಾರ್ಚ್ 2002 ರಲ್ಲಿ ಇಂಗ್ಲೆಂಡ್​ ತಂಡದ ಆಟಗಾರ ಬೆನ್ ಹೋಲಿಯೋಕ್ ಅವರು ತಮ್ಮ ಗೆಳತಿಯೊಂದಿಗೆ ಕಾರಿನಲ್ಲಿ ಪ್ರಯಾಣ ಬೆಳೆಸುತ್ತಿದ್ದ ವೇಳೆ ಅಪಘಾತ ಸಂಭವಿಸಿ ಸಾವನ್ನಪ್ಪಿದ್ದರು. ಅತೀ ವೇಗವಾಗಿ ಚಲಿಸುತ್ತಿದ್ದ ಕಾರು ಏಕಾಏಕಿ ಸ್ಕಿಡ್ ಆಗಿ ರಸ್ತೆ ಬದಿಯಲ್ಲಿದ್ದ ಗೋಡೆಗೆ ಅಪ್ಪಳಿಸಿತು. ಡಿಕ್ಕಿ ಹೊಡೆದ ರಭಸಕ್ಕೆ ಬೆನ್ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಆದರೆ ಗಂಭೀರ ಗಾಯಗೊಂಡ ಅವರ ಗೆಳತಿ ಪ್ರಾಣಾಪಯದಿಂದ ಪಾರಾದರು.

ಮಂಜುರುಲ್ ಇಸ್ಲಾಂ ರಾಣಾ

ಅತಿ ಕಿರಿಯ ವಯಸ್ಸಿನಲ್ಲಿ ರಸ್ತೆ ಅಪಘಾತದಲ್ಲಿ ಮೃತ ಪಟ್ಟ ಕ್ರಿಕೆಟಿಗನೆಂದರೆ ಬಾಂಗ್ಲಾದೇಶ ತಂಡ ಆಟಗಾರ ಮಂಜುರುಲ್ ಇಸ್ಲಾಂ ರಾಣಾ. ಮಾರ್ಚ್ 16, 2007 ರಂದು ತಮ್ಮ 22 ನೇ ವಯಸ್ಸಿನಲ್ಲಿ ರಸ್ತೆ ಅಪಘಾತದಲ್ಲಿ ಅವರು ಮೃತಪಟ್ಟರು. ಬೈಕ್​ನಲ್ಲಿ ಪ್ರಯಾಣಿಸುತ್ತಿದ್ದ ಮಂಜುರುಲ್ ಇಸ್ಲಾಂ, ಮಿನಿ ಬಸ್​ಗೆ ಡಿಕ್ಕಿ ಹೊಡೆದಿದ್ದರು. ಬಳಿಕ ನಿಯಂತ್ರಣ ಕಳೆದುಕೊಂಡ ಬೈಕ್ ಗೇಟ್ ಅಂಚಿನಲ್ಲಿದ್ದ ಪಿಲ್ಲರ್​ಗೆ ಡಿಕ್ಕಿ ಹೊಡೆದಿತ್ತು. ಈ ಪರಿಣಾಮ ಮಂಜುರುಲ್ ಇಸ್ಲಾಂ ತೀವ್ರ ಗಾಯಗೊಂಡು ನಿಧನ ಹೊಂದಿದರು.

ಎಜ್ರಾ ಮೊಸ್ಲೆ

ವೆಸ್ಟ್ ಇಂಡೀಸ್ ಮಾಜಿ ವೇಗಿ ಎಜ್ರಾ ಮೊಸ್ಲೆ ಅವರು ಫೆಬ್ರವರಿ 2021 ರಲ್ಲಿ ನಿಧನಹೊಂದಿರು. 63 ವರ್ಷದ ಅವರು ಬಾರ್ಬಡೋಸ್‌ನ ಎಬಿಸಿ ಹೆದ್ದಾರಿಯಲ್ಲಿ ಸೈಕ್ಲಿಂಗ್ ಮಾಡುತ್ತಿದ್ದಾಗ ಹಿಂಬದಿಯಿಂದ ಬಂದ ಕಾರೊಂದು ಅವರಿಗೆ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. 90 ದಶಕದಲ್ಲಿ ತಮ್ಮ ಘಾತಕ ಬೌಲಿಂಗ್​ ಮೂಲಕ ಹೆಸರುವಾಸಿಯಾಗಿದ್ದರು. ವಿಂಡೀಸ್​ ಪರ 9 ಏಕದಿನ ಪಂದ್ಯಗಳನ್ನಾಡಿದ್ದರು. ಜತೆಗೆ 279 ಪ್ರಥಮ ದರ್ಜೆ ಕ್ರಿಕೆಟ್​ ಪಂದ್ಯಗಳನ್ನು ಆಡಿದ್ದಾರೆ.

ಇದನ್ನೂ ಓದಿ | Rishabh Pant | ಅಪಘಾತದಲ್ಲಿ ಗಂಭೀರ ಗಾಯಗೊಂಡ ಪಂತ್ ಫೋಟೊಗಳು

Exit mobile version