Site icon Vistara News

FIFA World Cup | ಮೆಕ್ಸಿಕೊ ತಂಡದ ಜರ್ಸಿ ತುಳಿದು ಮೆಸ್ಸಿ ಬಳಗದ ಸಂಭ್ರಮಾಚರಣೆ; ಭಾರಿ ವಿರೋಧ

FIFA WORLD CUP

ದೋಹಾ : ಕೋಟ್ಯಂತರ ಮಂದಿ ಆರಾಧಿಸುವ ಫುಟ್ಬಾಲ್‌ ತಾರೆ ಲಿಯೋನೆಲ್‌ ಮೆಸ್ಸಿ, ಮೆಕ್ಸಿಕೋ ವಿರುದ್ಧದ ಪಂದ್ಯದ ಬಳಿಕ ಡ್ರೆಸಿಂಗ್‌ ರೂಮ್‌ನಲ್ಲಿ ಸಂಭ್ರಮಾಚರಣೆ ಮಾಡಿದ ವೈಖರಿಗೆ ಭಾರಿ ವಿರೋಧ ವ್ಯಕ್ತವಾಗಿದೆ. ಅನುಭವಿ ಹಾಗೂ ವೃತ್ತಿಪರ ಕ್ರೀಡಾಪಟುವೊಬ್ಬರು ಈ ರೀತಿ ಮಾಡುವುದು ಸರಿಯಲ್ಲ ಎಂಬುದಾಗಿ ಹಲವರು ದೂರಿದ್ದಾರೆ.

ಹಾಲಿ ವಿಶ್ವ ಕಪ್‌ನ ಸಿ ಗುಂಪಿನಲ್ಲಿರುವ ಅರ್ಜೆಂಟೀನಾ ತಂಡ ಭಾನುವಾರ ನಡೆದ ಮೆಕ್ಸಿಕೊ ವಿರುದ್ಧದ ಪಂದ್ಯದಲ್ಲಿ ೨-೦ ಗೋಲ್‌ಗಳ ವಿಜಯ ಸಾಧಿಸಿತ್ತು. ತನ್ನ ಮೊದಲ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ ಸೋಲು ಕಂಡಿದ್ದ ಅರ್ಜೆಂಟೀನಾ ಬಳಗಕ್ಕೆ ಈ ಗೆಲುವು ಅನಿವಾರ್ಯವಾಗಿತ್ತು ಕೂಡ. ಆದರೆ ಈ ಗೆಲುವಿನ ಸಂಭ್ರಮಮಾಚರಣೆ ವೇಳೆ ಮೆಸ್ಸಿ ಸೇರಿದಂತೆ ಅರ್ಜೆಂಟೀನಾದ ಆಟಗಾರರು ಮೆಕ್ಸಿಕೋ ತಂಡದ ಜರ್ಸಿಯನ್ನು ಮೆಟ್ಟಿ ಆಚೆ ತಳ್ಳಿದ್ದರು ಎನ್ನಲಾಗಿದೆ. ಇದು ಮೆಕ್ಸಿಕೋದ ಪ್ರಜೆಗಳಿಗೆ ಬೇಸರ ತಂದಿದೆ.

ಮೆಕ್ಸಿಕೊದ ಬಾಕ್ಸರ್‌ ಕನೆಲೊ ಅಲ್ವಾರೆಜ್‌ ಅವರು ಮೆಸ್ಸಿ ಮತ್ತು ಅವರ ಬಳಗದ ಕೃತ್ಯವನ್ನು ಖಂಡಿಸಿದ್ದಾರೆ. ಭಗವಂತ ನಿಮ್ಮೆಲ್ಲರನ್ನೂ ನೋಡಿಕೊಳ್ಳುತ್ತಾನೆ ಎಂಬುದಾಗಿ ಬೆದರಿಕೆ ಒಡ್ಡಿದ್ದಾರೆ.

ಬಾಕ್ಸರ್‌ ಅಲ್ವಾರೆಜ್‌ ಕೂಡ ಜನಪ್ರಿಯ ಕ್ರೀಡಾಪಟು. ಅವರಿಗೂ ೨.೨ ಫಾಲೋಯರ್‌ಗಳಿದ್ದಾರೆ. ಅವರು ತಮ್ಮ ಟ್ವೀಟ್‌ನಲ್ಲಿ “ಮೆಕ್ಸಿಕೊದ ಜರ್ಸಿ ಹಾಗೂ ಧ್ವಜದಲ್ಲಿ ನೆಲವನ್ನು ಕ್ಲೀನ್‌ ಮಾಡುತ್ತಿರುವುದನ್ನು ನೀವು ನೋಡಿದ್ದೀರಾ? ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ,” ಎಂಬುದಾಗಿ ಬರೆದುಕೊಂಡಿದ್ದಾರೆ.

ಅರ್ಜೆಂಟೀನಾ ಹೇಳುವುದೇನು?

ವಿವಾದದ ವಿಚಾರವಾಗಿ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ತಂಡ ಭಿನ್ನ ವಿವರಣೆ ನೀಡುತ್ತಿದೆ. ಮೆಸ್ಸಿ ಉದ್ದೇಶಪೂರ್ವಕವಾಗಿ ಜರ್ಸಿಯನ್ನು ಮೆಟ್ಟಿಲ್ಲ ಎಂಬುದಾಗಿ ವಾದಿಸಿದೆ. ಆಟ ಮುಗಿದ ಬಳಿಕ ಲಿಯೋನೆಲ್‌ ಮೆಸ್ಸಿ ಮೆಕ್ಸಿಕೊ ಆಟಗಾರರ ಜತೆ ಜರ್ಸಿಯನ್ನು ಬದಲಿಸಿಕೊಂಡಿದ್ದರು. ಅದನ್ನವರು ತಂದು ಡ್ರೆಸಿಂಗ್‌ ರೂಮ್‌ನಲ್ಲಿ ಇಟ್ಟುಕೊಂಡಿದ್ದರು. ಶೂ ತೆಗೆಯುವ ಸಂದರ್ಭದಲ್ಲಿ ಅದನ್ನು ತಳ್ಳಿದ್ದಾರೆ ಎಂಬುದಾಗಿ ಹೇಳಿದೆ.

ಇದನ್ನೂ ಓದಿ | FIFA World Cup | ಮೆಸ್ಸಿಯ ತಂಡಕ್ಕೆ ಆರಂಭದಲ್ಲೇ ಆಘಾತ, ಸೌದಿ ಅರೇಬಿಯಾ ವಿರುದ್ಧ 2-1 ಗೋಲ್‌ಗಳ ಸೋಲು

Exit mobile version