Site icon Vistara News

Jhulan Goswamy | ಕೊನೇ ನಿಲ್ದಾಣ ತಲುಪಿದ ಚಕಡಾ ಎಕ್ಸ್‌ಪ್ರೆಸ್‌, ಹಾದಿಯುದ್ದಕ್ಕೂ ಸಾಧನೆಯ ಮೈಲುಗಲ್ಲುಗಳು

chaka xpress

ಬಾಲಕೃಷ್ಣ ನಾಯ್ಕ ಚಿಕ್ಕೋಳ್ಳಿ

ಭಾರತೀಯ ಮಹಿಳಾ ಕ್ರಿಕೆಟ್‌ನ ದ್ರುವತಾರೆ, ವಿಶ್ವದ ಅತಿ ವೇಗದ ಎಸೆತಗಾರ್ತಿ ಜೂಲನ್ ಗೋಸ್ವಾಮಿ ಸಪ್ಟೆಂಬರ್ 24 ರಂದು ಕ್ರಿಕೆಟ್‌ ಕಾಶಿ ಲಾರ್ಡ್ಸ್‌ನಲ್ಲಿ ಕೊನೇ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಲಿದ್ದಾರೆ. ಈಗಾಗಲೇ ಅವರು ವಿದಾಯದ ನಿರ್ಧಾರ ಪ್ರಕಟಿಸಿದ್ದಾರೆ. ಇದರೊಂದಿಗೆ ಎರಡು ದಶಕಗಳ ಕಾಲ ಭಾರತೀಯ ಮಹಿಳಾ ಕ್ರಿಕೆಟ್‌ನ ವೇಗದ ಬೌಲಿಂಗ್ ವಿಭಾಗದ ಹೊಣೆ ಹೊತ್ತಿದ್ದ ‘ಚಕಡಾ ಎಕ್ಸ್‌ಪ್ರೆಸ್‌’ ತನ್ನ ವೇಗದ ಸಂಚಾರವನ್ನು ನಿಲ್ಲಿಸಲಿದೆ.

ಮಿಥಾಲಿ ರಾಜ್ ಭಾರತ ಮಹಿಳೆಯರ ತಂಡ ಪರ ಬ್ಯಾಟಿಂಗ್ ವಿಭಾಗದಲ್ಲಿ ರನ್ ಮಳೆ ಹರಿಸಿ ವಿಶ್ವ ವಿಖ್ಯಾತಿ ಪಡೆದದಿfದರೆ, ಜೂಲನ್ ತಮ್ಮ ಅದ್ಭುತ ಬೌಲಿಂಗ್ ದಾಳಿ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ದೊಡ್ಡ ಸ್ಟಾರ್ ಎನಿಸಿಕೊಂಡವರು. ಒಡಿಐ ಮಾದರಿಯಲ್ಲಿ 251 ವಿಕೆಟ್ ಕಬಳಿಸಿರುವ ಅವರು ಈ ಸಾಲಿನಲ್ಲಿ ಅಗ್ರಸ್ಥಾನಿ. ಟಿ೨೦ ಮಾದರಿಯಲ್ಲಿ 56 ಮತ್ತು ಟೆಸ್ಟ್ ಮಾದರಿಯಲ್ಲಿ 41 ವಿಕೆಟ್ ಪಡೆದು ಒಟ್ಟಾರೆ 348ಕ್ಕೂ ಹೆಚ್ಚು ವಿಕೆಟ್‌ ಪಡೆದು ವಿಶ್ವ ದಾಖಲೆ ಮಾಡಿದ್ದಾರೆ. 2016ರಲ್ಲಿ ICC ಮಹಿಳೆಯರ ಬೌಲರ್‌ಗಳ rank ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದವರು. ಅಂತೆಯೇ ಆಸ್ಟ್ರೇಲಿಯಾದ ಲಿನ್‌ ಫುಲ್‌ಸ್ಟನ್‌ ಅವರನ್ನು ಹಿಂದಿಕ್ಕಿ ವಿಶ್ವ ಕಪ್‌ ಕ್ರಿಕೆಟ್‌ನಲ್ಲಿ ೪೦ ವಿಕೆಟ್‌ ಪಡೆದು ದಾಖಲೆ ಮಾಡಿದ್ದಾರೆ. 2008ರಿಂದ 2011ರವರೆಗೆ ತಂಡದ ನಾಯಕತ್ವವನ್ನೂ ವಹಿಸಿಕೊಂಡಿದ್ದರು.

ಭಾರತದ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಗಂಟೆಗೆ ೧೨೦ ಕಿ.ಮೀ ವೇಗದಲ್ಲಿ ಚೆಂಡೆಸೆಯುವುದು ಸುಲಭದ ಕೆಲಸವಲ್ಲ. ಮಾನಸಿಕ ಮತ್ತು ದೈಹಿಕವಾಗಿ ಜೂಲನ್ ಗಟ್ಟಿಗಿತ್ತಿ. ದೊಡ್ಡ ಮಟ್ಟದ ಗಾಯಕ್ಕೆ ತುತ್ತಾಗದೆ ಸತತ 20 ವರ್ಷಗಳ ಕಾಲ ವೇಗದ ಬೌಲಿಂಗ್ ಮಾಡೊದ್ದಾರೆ. ಅಷ್ಟರ ಮಟ್ಟಿಗೆ ಫಿಟ್ನೆಸ್‌ ಕಾಪಾಡುವುದು ಅಚ್ಚರಿಯೇ ಸರಿ.

ಹಲವು ಪ್ರಶಸ್ತಿಗಳು

ಸಾಧನೆಗೆ ಪ್ರತಿಯಾಗಿ ಪದ್ಮಶ್ರೀ, ಅರ್ಜುನ ಪ್ರಶಸ್ತಿ ಜೂಲನ್ ಮುಡಿಗೇರಿದೆ. 2007ರಲ್ಲಿ ಐಸಿಸಿ ಮಹಿಳೆಯರ ಶ್ರೇಷ್ಠ ಆ ಟಗಾರ್ತಿ, 2020ರಲ್ಲಿ ದಶಕದ ಐಸಿಸಿ ಮಹಿಳಾ ಕ್ರಿಕೆಟ್‌ ಆಟಗಾರ್ತಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಜೂಲನ್‌ ಅವರ ಜೀವನ ಕಥೆ ಆಧರಿಸಿ ಸುಶಾಂತ್‌ ದಾಸ್ ನಿರ್ದೇಶನದ ಅನುಷ್ಕಾ ಶರ್ಮ ಅಭಿನಯಿಸಿದ ‘ಚಕಡಾ ಎಕ್ಸ್‌ಪ್ರೆಸ್‌’ ಚಲನಚಿತ್ರವೂ ತಯಾರಾಗಿದೆ.

ಬರೋಬ್ಬರಿ 6 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಿದ ಜೂಲನ್ ಅವರಿಗೆ ವಿಶ್ವ ಕಪ್‌ ಗೆಲ್ಲುವ ಮಹದಾಸೆಯಿತ್ತು. ಆದರೆ, ಅದು ಸಾಧ್ಯವಾಗಿಲ್ಲ. 2017ರಲ್ಲಿ ಭಾರತ ತಂಡ ಫೈನಲ್‌ಗೇರಿದ್ದರು, ಇಂಗ್ಲೆಂಡ್‌ಗೆ ಮಣಿದಿತ್ತು. ಆ ಪಂದ್ಯದಲ್ಲಿ ಅವರು ಅಮೋಘ ಬೌಲಿಂಗ್ ಮಾಡಿ 3 ವಿಕೆಟ್ ಕಿತ್ತರೂ ವಿಶ್ವಕಪ್ ಎತ್ತಿ ಹಿಡಿಯಲು ಸಾಧ್ಯವಾಗಿಲ್ಲ. 2022ರ ವಿಶ್ವ ಕಪ್‌ನ್ಲಲಿ ಗಾಯಕ್ಕೆ ತುತ್ತಾಗಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ.

ರೋಚಕ ಹಾದಿ

ಜೂಲನ್ ಸಾಗಿ ಬಂದ ಹಾದಿ ಮಾತ್ರ ರೋಚಕ. 1982ರ ನವೆಂಬರ್ 25ರಂದು ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯ ಚಕಡಾದಲ್ಲಿ ಅವರು ಜನಿಸಿದ್ದಾರೆ. ತಂದೆ ನಿಶಿತ್ ಗೋಸ್ವಾಮಿ ಏರ್‌ಲೈನ್ಸ್ ಉದ್ಯೋಗಿ, ತಾಯಿ ಜಾರ್ನಾ ಗ್ರಹಿಣಿ. ಬಂಗಾಳದಲ್ಲಿ ಕ್ರಿಕೆಟ್‌ನಷ್ಟೇ ಫುಟ್ಬಾಲ್‌ ಕೂಡ ಜನಪ್ರಿಯ ಕ್ರೀಡೆಯಾಗಿದೆ. ಪುಟ್ಬಾಲ್ ದಿಗ್ಗಜ ಡಿಯಾಗೊ ಮರಡೋನಾ ಆಟದಿಂದ ಪ್ರೇರಣೆ ಪಡೆದು ಫುಟ್ಬಾಲ್‌ ಆಡಲು ಆರಂಭಿಸಿದ್ದರು.

1997ರಲ್ಲಿ ಬಂಗಾಳದ ಈಡನ್ ಗಾರ್ಡನ್ಸ್‌ ಮೈದಾನದಲ್ಲಿ ಇಂಗ್ಲೆಂಡ್‌ ಹಾಗೂ ನ್ಯೂಜಿಲೆಂಡ್ ನಡುವಿನ ವಿಶ್ವ ಕಪ್‌ ಫೈನಲ್‌ ಪಂದ್ಯದಲ್ಲಿ ಬೌಂಡರಿ ಗೆರೆ ಬಳಿ ಬಾಲ್‌ ಗರ್ಲ್‌ ಆಗಿ ಕೆಲಸ ಮಾಡಿದ್ದರು ಜೂಲನ್‌. ಆಸ್ಟ್ರೇಲಿಯಾದ ದಿಗ್ಗಜ ಬ್ಯಾಟರ್ ಬೆಲಿಂಡಾ ಕ್ಲಾರ್ಕ್‌ ಲೀಲಾಜಾಲವಾಗಿ ಬ್ಯಾಟ್ ಬೀಸುತ್ತ ಕ್ರೀಡಾಂಗಣದ ಎಲ್ಲ ದಿಕ್ಕಿಗೂ ಚೆಂಡನ್ನು ಬಾರಿಸಿದ ಪರಿ ನೋಡಿ ಕ್ರಿಕೆಟ್‌ ಕಡೆಗೆ ಆಕರ್ಷಿತರಾದರು.

ಮಹಿಳೆಯರು ಕ್ರಿಕೆಟ್‌ ಆಡುತ್ತಾರೆಂದರೆ ಹುಬ್ಬೇರಿಸುತ್ತಿದ್ದ ಆ ದಿನಗಳಲ್ಲಿ ಕ್ರಿಕೆಟ್‌ ಕಿಟ್‌ ಬೆನ್ನಿಗೇರಿಸಿ ಚಕಡಾದಿಂದ ಕೋಕ್ಲೊತಾದ ವಿವೇಕಾನಂದ ಪಾರ್ಕ್‌ ಮೈದಾನಕ್ಕೆ ತೆರಳಲು ಬಂಗಾಳದ ಚಕಡಾದಿಂದ ಹೆಣ್ಣು ಮಗಳೊಬ್ಬಳು ಬೆಳಿಗ್ಗೆ 4.30ಕ್ಕೆ ರೈಲು ಹಿಡಿಯಲು ಓಡುವುದು ನೋಡುಗರಿಗೆ ವಿಶೇಷ ಸಂಗತಿಯಾಗಿತ್ತು. ಆರಂಭದಲ್ಲಿ ಜೂಲನ್ ಕುಟುಂಬದಿಂದಲೆ ವಿರೋಧ ಬಂದಿತ್ತು. ಆ ಸಮಯದಲ್ಲಿ ಅವಳಿಗೆ ಬೆಂಬಲವಾಗಿ ನಿಂತವರು ಅವಳ ಅಜ್ಜಿಯಂತೆ. ಜತೆಗೆ ಅವರ ಕನಸಿಗೆ ನೀರೆರೆದು ಪೋಷಿಸಿದವರು ಕೋಚ್ ಸ್ವಪನ್ ದಾಸ್. ಜೂಲನ್ ಬೌಲಿಂಗ್ ಶೈಲಿ ನೋಡಿ ಅವರ ಮನೆಗೆ ಹೋಗಿ ಕ್ರಿಕೆಟ್‌ ಅಭ್ಯಾಸಕ್ಕೆ ಕಳುಹಿಸುವಂತೆ ಮನವಿ ಮಾಡಿದ್ದರು. ಮೊದಲಿಗೆ ಪೋಷಕರು ಒಪ್ಪಿರಲಿಲ್ಲ. ಬಳಿಕ “ಕೇವಲ ಎರಡು ವರ್ಷ ಕ್ರಿಕೆಟ್‌ ಆಡಲು ಅವಕಾಶ ಕೊಡಿ. ಸರಿಯಾಗಿ ಅಭ್ಯಾಸ ಮಾಡದಿದ್ದರೆ ಬಿಟ್ಟುಬಿಡುತ್ತಾರೆ,” ಎಂಬ ಷರತ್ತಿನ ಮೇರೆಗೆ ಅಭ್ಯಾಸಕ್ಕೆ ಕರೆಸಿಕೊಂಡಿದ್ದರು.

ಸ್ವಾರಸ್ಯಕರ ವಿಷಯವೇನೆಂದರೆ ಊರಿನಲ್ಲಿ ಹುಡುಗರೊಂದಿಗೆ ಕ್ರಿಕೆಟ್ ಆಡುತ್ತಿರುವಾಗ ನಿಧಾನವಾಗಿ ಚೆಂಡೆಸೆದು ಸಿಕ್ಸರ್‌- ಪೋರ್ ಬಿಟ್ಟುಕೊಡುತಿದ್ದ ಕಾರಣ ಜೂಲನ್‌ಗೆ ಬೌಲಿಂಗ್ ಗೆ ಅವಕಾಶ ಕೊಡುತ್ತಿರಲಿಲ್ಲವಂತೆ. ಇದರಿಂದ ಸಿಟ್ಟಿಗೆದ್ದ ಅವರು ವೇಗದಲ್ಲಿ ಚೆಂಡೆಸೆಯಲು ಆರಂಭಿಸಿದ್ದರು. ಆ ಹಠ ಅವರನ್ನೀಗ ವಿಶ್ವದ ಶ್ರೇಷ್ಠ ಬೌಲರ್‌ ಸ್ಥಾನಕ್ಕೇರಿಸಿದೆ.

ಆರಂಭದಲ್ಲಿ ಬಂಗಾಳ ಪರ ಆಡಿದ್ದ ಜೂಲನ್ 2002 ರಲ್ಲಿ ಇಂಗ್ಲೆಂಡ್ ವಿರುದ್ಧ ಚೆನ್ನೈನಲ್ಲಿ ಒಡಿಐ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.2006-07ರಲ್ಲಿ ಇಂಗ್ಲೆಂಡ್ ನೆಲದಲ್ಲಿಯೇ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಸರಣಿ ಜಯದ ಶ್ರೇಯಸ್ಸು ತಮ್ಮದಾಗಿಕೊಂಡಿದ್ದರು. ಈ ಮೂಲಕ ಪ್ರಸಿದ್ಧಿ ಪಡೆದುಕೊಂಡಿದ್ದರು.

ಸಹ ಆಟಗಾರ್ತಿಯರಿಂದ ‘ಗೊಜ್ಜಿ’ ಎಂದೇ ಕರೆಯಲ್ಪಡುವ ಜೂಲನ್ ಭಾರತ ಮಹಿಳಾ ತಂಡದ ಬೌಲಿಂಗ್ ಕನ್ಸಲ್ಟೆಂಟ್‌ ಅಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನ ಬೌಲಿಂಗ್‌ಗೆ ಹೊಸ ಭಾಷ್ಯ ಬರೆದು ಕ್ರಿಕೆಟ್ ಸೊಬಗನ್ನು ಹೆಚ್ಚಿಸಿ, ನಿವೃತ್ತಿ ಬದುಕಿಗೆ ಜಾರುತ್ತಿರುವ ಜೂಲನ್ ಗೋಸ್ವಾಮಿಗೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಲೆಬೇಕು.

ಇದನ್ನೂ ಓದಿ | Jhulan Goswami | ಜೂಲನ್‌ಗೆ ಇಂದು ಕೊನೇ ಅಂತಾರಾಷ್ಟ್ರೀಯ ಪಂದ್ಯ, ಇಲ್ಲಿವೆ ಕೆಲವು ದಾಖಲೆಗಳು

Exit mobile version