ದಂಬುಲಾ (ಶ್ರೀಲಂಕಾ): ಟಿ೨೦ ಸರಣಿಯ ಕೊನೇ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ವಿರುದ್ಧ ಭಾರತ ಮಹಿಳೆಯರ ತಂಡ ಏಳು ವಿಕೆಟ್‌ಗಳಿಂದ ಸೋಲು ಕಂಡಿದ್ದು, ಲಂಕಾ ನೆಲದಲ್ಲಿ ಅವರದ್ದೇ ತಂಡವನ್ನು clean sweep ಮಾಡುವ ಹರ್ಮನ್‌ಪ್ರೀತ್ ಕೌರ್ ಬಳಗದ ಕನಸು ಭಗ್ನಗೊಂಡಿದೆ. ಆದಾಗ್ಯೂ ೨-೧ ಅಂತರದಿಂದ ಸರಣಿ ಭಾರತದ ಮಹಿಳೆಯರ ಕೈವಶವಾಗಿದೆ.
ರಣ್‌ಗಿರಿ ದಂಬುಲಾ ಅಂತಾರಾಷ್ಟ್ರಿಯ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ಸೋಮವಾರ ನಡೆದ ಸರಣಿಯ ಮೂರನೇ ಹಾಗೂ ಕೊನೇ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪ್ರವಾಸಿ ಭಾರತ ತಂಡ ನಿಗದಿತ ೨೦ ಓವರ್‌ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೧೩೮ ರನ್ ಬಾರಿಸಿತು. ಪ್ರತಿಯಾಗಿ ಆಡಿದ ಲಂಕಾ ತಂಡ ಇನ್ನೂ ೧೮ ಎಸೆತಗಳು ಬಾಕಿ ಇರುವಂತೆಯೇ ೩ ವಿಕೆಟ್ ನಷ್ಟಕ್ಕೆ ೧೪೧ ರನ್ ಬಾರಿಸಿ ಜಯಶಾಲಿಯಾಯಿತು. ಚಾಮರಿ ಅಟ್ಟಪಟ್ಟು ಅಜೇಯ ೮೦ ರನ್ ಬಾರಿಸುವ ಮೂಲಕ ಲಂಕಾ ತಂಡದ ಜಯವನ್ನು ಸುಲಭವಾಗಿಸುವ ಜತೆಗೆ ಭಾರತದ ಕನಸು ಛಿದ್ರಗೊಳಿಸಿದರು. ಜೂನ್ ೨೩ ಹಾಗೂ ೨೫ರಂದು ನಡೆದಿದ್ದ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಭಾರತ ತಂಡ ಜಯ ಸಾಧಿಸಿತ್ತು.
ಶಫಾಲಿ ಫೇಲ್
ಮೊದಲು ಬ್ಯಾಟ್ ಮಾಡಿದ ಭಾರತ ತಂಡದ ಆರಂಭಿಕರ ಪ್ರದರ್ಶನ ಉತ್ತಮವಾಗಿರಲಿಲ್ಲ. ಹೊಡೆಬಡಿಯ ಬ್ಯಾಟರ್ ಶಫಾಲಿ ವರ್ಮ ೫ ರನ್‌ಗಳಿಗೆ ಸೀಮಿತಗೊಂಡರೆ, ಸ್ಮೃತಿ ಮಂಧಾನಾ ೨೨ ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ಬಳಿಕ ಕ್ರೀಸ್‌ಗೆ ಇಳಿದ ಸಬ್ಬಿನೇನಿ ಮೇಘನಾ ೨೨ ರನ್‌ಗಳಿಗೆ ಸೀಮಿತಗೊಂಡರೆ, ನಾಯಕಿ ಹರ್ಮನ್‌ಪ್ರೀತ್ ಕೌರ್ ೩೯ ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಜೆಮಿಮಾ ರೋಡ್ರಿಗಸ್ ೩೩ ರನ್ ಗಳಿಸಿದರೆ, ಕೊನೆಯಲ್ಲಿ ಪೂಜಾ ವಸ್ತ್ರಾಕರ್ ೧೩ ರನ್ ಕೊಡುಗೆ ನೀಡಿ ಭಾರತ ತಂಡ ಸ್ಪರ್ಧಾತ್ಮ ಮೊತ್ತ ಪೇರಿಸಲು ನೆರವಾದರು.
ಲಂಕಾ ಪರ ಸುಗಂಧಿಕಾ ಕುಮಾರಿ, ಅಮಾ ಕಾಂಚನಾ, ಒಶಾದಿ ರಣಸಿಂಘೆ, ಇನೋಕಾ ರಣವೀರಾ ತಲಾ ಒಂದು ವಿಕೆಟ್ ಪಡೆದರು.
ಚಾಮರಿ ಅಬ್ಬರ
ಸವಾಲಿನ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿ ಲಂಕಾ ತಂಡದ ಆರಂಭಿಕ ವಿಕೆಟ್ ವಿಷ್ಮಿ ಗುಣರತ್ನೆ (೫) ಮೂಲಕ ಬೇಗನೆ ಪತನಗೊಂಡಿತು. ಆದರೆ, ಮತ್ತೊಂದು ತುದಿಯಲ್ಲಿ ತಳವೂರಿ ನಿಂತ ಚಾಮರಿ ಅಟ್ಟಪಟ್ಟು ಭಾರತದ ಬೌಲರ್‌ಗಳು ದಿಕ್ಕೆಡುವಂತೆ ಮಾಡಿದರು. ೪೮ ಎಸೆತಗಳಲ್ಲಿ ೧೪ ಫೋರ್ ಹಾಗೂ ೧ ಸಿಕ್ಸರ್ ಸಮೇತ ಅಜೇಯ ೮೦ ರನ್ ಬಾರಿಸಿದ ಅವರು ಭಾರತ ತಂಡದ ಗೆಲುವಿನಾಸೆಗೆ ಅಡ್ಡಿಯಾದರು. ಹರ್ಷಿತಾ ಸಮರವಿಕ್ರಮ ೧೩ ರನ್ ಬಾರಿಸಿದರೆ, ನೀಲಾಕ್ಷಿ ಡಿ ಸಿಲ್ವಾ ೩೦ ರನ್ ಗಳಿಸಿದರು. ಭಾರತ ಪರ ರೇಣುಕಾ ಸಿಂಗ್ ಹಾಗೂ ರಾಧಾ ಯಾದವ್ ತಲಾ ಒಂದು ವಿಕೆಟ್ ತಮ್ಮದಾಗಿಸಿಕೊಂಡರು.
ಸ್ಕೋರ್ ವಿವರ
ಭಾರತ ಮಹಿಳೆಯರು: (ಸ್ಮೃತಿ ಮಂಧಾನಾ ೨೨, ಶಫಾಲಿ ವರ್ಮ ೫, ಸಬ್ಬಿನೇನಿ ಮೇಘನಾ ೨೨, ಹರ್ಮನ್‌ಪ್ರೀತ್ ಕೌರ್ ೩೯, ಜೆಮಿಮಾ ರೋಡ್ರಿಗಸ್ ೩೩, ಪೂಜಾ ವಸ್ತ್ರಾಕರ್ ೧೩; ಬೌಲಿಂಗ್: ಸುಗಂಧಿ ಕುಮಾರಿ ೨೮ಕ್ಕೆ೧, ಅಮಾ ಕಾಂಚನಾ ೨೨ಕ್ಕೆ೧, ಒಶಾದಿ ರಣಸಿಂಘೆ ೧೩ಕ್ಕೆ೧, ಇನೋಕಾ ರಣವೀರ್ ೩೧ಕ್ಕೆ೧).
ಶ್ರೀಲಂಕಾ ಮಹಿಳೆಯರು: (ವಿಷ್ಮಿ ಗುಣರತ್ನೆ ೫, ಚಾಮರಿ ಅಟ್ಟಪಟ್ಟು ಅಜೇಯ ೮೦, ಹರ್ಷಿತಾ ಸಮರವಿಕ್ರಮಾ ೧೩, ನೀಲಾಕ್ಷಿ ಡಿ ಸಿಲ್ವಾ ೩೦, ಕವಿಶಾ ದಿಲ್ಹಾರಿ ೭. ಬೌಲಿಂಗ್: ರೇಣುಕಾ ಸಿಂಗ್ ೨೭ಕ್ಕೆ೧, ರಾಧಾ ಯಾದವ್ ೪೧ಕ್ಕೆ೧).
ಇದನ್ನೂ ಓದಿ: Team India ವಿರುದ್ಧದ ಟೆಸ್ಟ್‌ಗೆ ಇಂಗ್ಲೆಂಡ್ ತಂಡ ಪ್ರಕಟ: ಯಾರೆಲ್ಲ ಇದ್ದಾರೆ ತಂಡದಲ್ಲಿ