ನವದೆಹಲಿ: ಪಾಕಿಸ್ತಾನ ಆತಿಥ್ಯದಲ್ಲಿ ಮುಂದಿನ ವರ್ಷ(2025) ನಡೆಯುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ(Champions Trophy 2025) ಕೇಂದ್ರ ಸರ್ಕಾರ ಅನುಮತಿ ನೀಡಿದರೆ ಮಾತ್ರ ಭಾರತ(India Travelling To Pakistan) ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗುವುದು ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಉಪಾಧ್ಯಕ್ಷ ರಾಜೀವ್ ಶುಕ್ಲಾ(Rajeev Shukla) ಹೇಳಿದ್ದಾರೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಮುಂದಿನ ವರ್ಷ ಫೆಬ್ರವರಿಯಿಂದ ಮಾರ್ಚ್ 2025 ರವರೆಗೆ ಪಾಕಿಸ್ತಾನದಲ್ಲಿ ನಡೆಯಲಿದೆ. ಪಂದ್ಯಾವಳಿಗಾಗಿ ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂಬ ಮಾಧ್ಯಮ ವರದಿಗಳ ಚರ್ಚೆಯ ಮಧ್ಯೆ ರಾಜೀವ್ ಶುಕ್ಲಾ ಅವರ ಈ ಹೇಳಿಕೆಯಿಂದ ಭಾರತ ತಂಡ ಪಾಕ್ಗೆ ಪ್ರಯಾಣ ಬೆಳೆಸಲಿದೆಯಾ ಎಂಬ ಭಾರೀ ಕುತೂಹಲ ಮೂಡುವಂತೆ ಮಾಡಿದೆ.
ಎಎನ್‌ಐ ಜತೆ ಮಾತನಾಡಿದ ಶುಕ್ಲಾ, “ಚಾಂಪಿಯನ್ ಟ್ರೋಫಿಯ ಸಂದರ್ಭದಲ್ಲಿ, ಭಾರತ ಸರ್ಕಾರ ನಮಗೆ ಏನು ಹೇಳುತ್ತದೆಯೋ ಅದನ್ನು ಮಾಡುತ್ತೇವೆ. ಭಾರತ ಸರ್ಕಾರ ನಮಗೆ ಅನುಮತಿ ನೀಡಿದಾಗ ಮಾತ್ರ ನಾವು ನಮ್ಮ ತಂಡವನ್ನು ಕಳುಹಿಸುತ್ತೇವೆ. ಹಾಗಾಗಿ ಭಾರತ ಸರ್ಕಾರದ ನಿರ್ಧಾರದ ಮೇಲೆ ತಂಡದ ಪ್ರಯಾಣದ ಭವಿಷ್ಯ ಅಡಗಿದೆ” ಎಂದು ಶುಕ್ಲಾ ಹೇಳಿದರು.
ನವೆಂಬರ್ 2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ 150 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ನಂತರ ಭಾರತವು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಆಡಿಲ್ಲ. ಜೂನ್-ಜುಲೈ 2008 ರಲ್ಲಿ ಏಷ್ಯಾ ಕಪ್ ಸಮಯದಲ್ಲಿ ಭಾರತೀಯ ಕ್ರಿಕೆಟ್ ತಂಡವು ಕೊನೆಯ ಬಾರಿಗೆ ಪಾಕಿಸ್ತಾನಕ್ಕೆ ಪ್ರಯಾಣಿಸಿತ್ತು. ಭಾರತದಲ್ಲಿ ಡಿಸೆಂಬರ್ 2012 ರಿಂದ ಜನವರಿ 2013 ರವರೆಗಿನ ದ್ವಿಪಕ್ಷೀಯ ಸರಣಿಯು ಎರಡು ರಾಷ್ಟ್ರಗಳ ನಡುವಿನ ಅಂತಿಮ ದ್ವಿಪಕ್ಷೀಯ ಸರಣಿಯಾಗಿದೆ. ಇದಾದ ಬಳಿಕ ಉಭಯ ತಂಡಗಳು ಕೇವಲ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಆಡುತ್ತವೆ.
ಇದನ್ನೂ ಓದಿ Champions Trophy 2025: ಚಾಂಪಿಯನ್ಸ್ ಟ್ರೋಫಿಗೆ ಸ್ಥಳ ನಿಗದಿಪಡಿಸಿದ ಪಾಕಿಸ್ತಾನ
ಕಳೆದ ವರ್ಷ ಪಾಕಿಸ್ತಾನದ ಆತಿಥ್ಯದಲ್ಲಿ ನಡೆದಿದ್ದ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಪಾಕ್ಗೆ ಹೋಗಲು ಒಪ್ಪದ ಕಾರಣ ಹೈಬ್ರೀಡ್ ಮಾದರಿಯಲ್ಲಿ ಪಾಕ್ ಮತ್ತು ಶ್ರೀಲಂಕಾದಲ್ಲಿ ಆಡಿಸಲಾಗಿತ್ತು. ಭಾರತ ತನ್ನ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿತ್ತು. ಪಾಕಿಸ್ತಾನದಲ್ಲಿ ನಡೆದಿದ್ದ ಪಂದ್ಯವಾವಳಿಗೆ ಬಿಸಿಸಿಐ ಅಧ್ಯಕ್ಷ ರೋಜನ್ ಬಿನ್ನಿ ಮತ್ತು ಉಪಾಧ್ಯಕ್ಷ ರಾಜೀವ್ ಶುಕ್ಲಾ ಹಾಜರಾಗಿದ್ದರು.
ಪಾಕಿಸ್ತಾನ ಕ್ರಿಕೆಟ್ ಮಂಡಳಿಯು(PCB) ಈಗಾಗಲೇ ಟೂರ್ನಿಯ ಪಂದ್ಯಾವಳಿಗೆ ಸ್ಥಳ ನಿಗದಿಪಡಿಸಿದೆ. ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿಯನ್ನು ಆಯ್ಕೆ ಮಾಡಿಕೊಂಡಿದೆ. ಇದೇ ವೇಳೆ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಭಾರತ ಈ ಬಾರಿ ಪಾಕ್ನಲ್ಲಿ ಕ್ರಿಕೆಟ್ ಆಡಲಿದೆ ಎಂದು ಬಲವಾದ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ರಾಜೀವ್ ಶುಕ್ಲಾ ಕೇಂದ್ರ ಸಮ್ಮತಿ ನೀಡಿದರೆ ಪಾಕ್ಗೆ ಹೋಗಲು ಸಿದ್ಧ ಎಂದು ಹೇಳಿರುವುದು ಅಚ್ಚರಿ ತಂದಿದೆ. ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ಇಂಗ್ಲೆಂಡ್, ಅಫಘಾನಿಸ್ತಾನ, ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್ ಮತ್ತು ಬಾಂಗ್ಲಾದೇಶ ಟೂರ್ನಿಗೆ ಅರ್ಹತೆ ಪಡೆದ ತಂಡಗಳಾಗಿವೆ.