Site icon Vistara News

Champions Trophy 2025: ಪಾಕ್​ನಲ್ಲೇ ನಡೆಯಲಿದೆ ಚಾಂಪಿಯನ್ಸ್​ ಟ್ರೋಫಿ; ಸಾಗರೋತ್ತರ ತಟಸ್ಥ ತಾಣದಲ್ಲಿ ಭಾರತದ ಪಂದ್ಯ?

Champions Trophy 2025

Champions Trophy 2025: India unlikely to travel to Pakistan, Champions Trophy in hybrid model: Sources

ನವದೆಹಲಿ: ಮುಂದಿನ ವರ್ಷ ಪಾಕಿಸ್ತಾನ ಆತಿಥ್ಯದಲ್ಲಿ ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ನಡೆಯುವ ಚಾಂಪಿಯನ್ಸ್​ ಟ್ರೋಫಿ(Champions Trophy 2025) ಪಂದ್ಯಾವಳಿಯಲ್ಲಿ ಭಾರತದ ಪಂದ್ಯಗಳು ಮಾತ್ರ ಸಾಗರೋತ್ತರ ತಟಸ್ಥ ಸ್ಥಳದಲ್ಲಿ ನಡೆಸುವಂತೆ ಬಿಸಿಸಿಐ, ಐಸಿಸಿಗೆ ಮನವಿ ಸಲ್ಲಿಸಿದೆ ಎಂದು ಎಎನ್​ಐ ವರದಿ ಮಾಡಿದೆ. ದುಬೈ ಅಥವಾ ಶ್ರೀಲಂಕಾದಲ್ಲಿ ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಐಸಿಸಿಗೆ ಕೇಳಿಕೊಂಡಿರುವುದಾಗಿ ವರದಿಯಾಗಿದೆ. ಆದರೆ ಐಸಿಸಿ ಇದಕ್ಕೆ ಸಮ್ಮತಿ ಸೂಚಿಸಲಿದೆಯಾ ಎಂದು ಕಾದು ನೋಡಬೇಕಿದೆ.

ಕಳೆದ ವರ್ಷ ಪಾಕ್​ ಆತಿಥ್ಯದಲ್ಲಿಯೇ ನಡೆದಿದ್ದ ಏಷ್ಯಾಕಪ್​ ಟೂರ್ನಿಯಲ್ಲಿ ಭಾರತ ತಂಡವು ಪಾಕ್​ಗೆ ಪ್ರಯಾಣಿಸಲು ನಿರಾಕರಿಸಿದ ಕಾರಣ, ಟೂರ್ನಿಯನ್ನು ಹೈಬ್ರಿಡ್(champions trophy hybrid model) ಮಾದರಿಯಲ್ಲಿ ಆಯೋಜಿಸಲಾಯಿತ್ತು. ಕೇವಲ ನಾಲ್ಕು ಪಂದ್ಯಗಳನ್ನು ಪಾಕಿಸ್ತಾನದಲ್ಲಿ ನಡೆಸಿ ಉಳಿದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆದಿದ್ದವು. ಭಾರತ ಎಲ್ಲ ಪಂದ್ಯಗಳನ್ನು ಲಂಕಾದಲ್ಲಿ ಆಡಿತ್ತು. ಇದೀಗ ಚಾಂಪಿಯನ್ಸ್​ ಟ್ರೋಫಿಯನ್ನೂ ಕೂಡ ಹೈಬ್ರಿಡ್ ಮಾದರಿಯಲ್ಲಿ ನಡೆಸಿ ಭಾರತದ ಪಂದ್ಯಗಳನ್ನು ಪಾಕ್​ನಿಂದ ಹೊರಗೆ ನಡೆಸುವಂತೆ ಐಸಿಸಿಗೆ ಬಿಸಿಸಿಐ ಕೇಳಿಕೊಂಡಿರುವುದಾಗಿ ವರದಿಯಾಗಿದೆ.

ನವೆಂಬರ್ 2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ 150 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ನಂತರ ಭಾರತವು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಆಡಿಲ್ಲ. ಜೂನ್-ಜುಲೈ 2008 ರಲ್ಲಿ ಏಷ್ಯಾ ಕಪ್ ಸಮಯದಲ್ಲಿ ಭಾರತೀಯ ಕ್ರಿಕೆಟ್ ತಂಡವು ಕೊನೆಯ ಬಾರಿಗೆ ಪಾಕಿಸ್ತಾನಕ್ಕೆ ಪ್ರಯಾಣಿಸಿತ್ತು. ಇದಾದ ಬಳಿಕ ಪಾಕ್​ಗೆ ಭಾರತ ತಂಡ ಕಾಲಿಟ್ಟಿಲ್ಲ.

ಇದನ್ನೂ ಓದಿ Champions Trophy 2025: ಚಾಂಪಿಯನ್ಸ್​ ಟ್ರೋಫಿ ಹೈಬ್ರಿಡ್ ಮಾದರಿಗೆ ಒತ್ತಾಯಿಸಿದ ಬಿಸಿಸಿಐ

ಭಾರತ ಪಾಕಿಗೆ ತೆರಳುವುದಿಲ್ಲ ಎಂದು ಹೇಳುತ್ತಿದ್ದ ಮಧ್ಯೆಯೂ ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಈಗಾಗಲೇ ಟೂರ್ನಿಯ ತಾತ್ಕಾಲಿಕ ವೇಳಾಪಟ್ಟಿಯನ್ನು ಕೂಡ ಪ್ರಕಟಿಸಿದೆ. ಅದರಂತೆ ಭಾರತ ಮತ್ತು ಪಾಕ್​ ನಡುವಣ ಪಂದ್ಯ ಮಾರ್ಚ್​ 1ರಂದು ಲಾಹೋರ್​ನಲ್ಲಿ ನಡೆಯಲಿದೆ. ಪಂದ್ಯಾವಳಿಗೆ 3 ತಾಣಗಳನ್ನು ಕೂಡ ಪ್ರಕಟಿಸಿದೆ. ಲಾಹೋರ್‌ನಲ್ಲಿ 7, ರಾವಲ್ಪಿಂಡಿಯಲ್ಲಿ 5 ಮತ್ತು ಕರಾಚಿಯಲ್ಲಿ 3 ಪಂದ್ಯಗಳನ್ನು ಆಡಲಾಗುವುದು. ಕರಾಚಿಯಲ್ಲಿ ಉದ್ಘಾಟನಾ ಪಂದ್ಯ ಹಾಗೂ ಒಂದು ಸೆಮಿಫೈನಲ್‌, ರಾವಲ್ಪಿಂಡಿಯಲ್ಲಿ ಇನ್ನೊಂದು ಸೆಮಿಫೈನಲ್‌, ಲಾಹೋರ್‌ನಲ್ಲಿ ಫೈನಲ್‌ ನಡೆಯಲಿದೆ ಎಂದು ತಿಳಿಸಿದೆ.

2014ರಿಂದ ಅಧಿಕಾರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ನೆರೆಯ ರಾಷ್ಟ್ರದೊಂದಿಗೆ ಯಾವುದೇ ಸ್ನೇಹಪರ ರೀತಿಯಲ್ಲಿ ಸಂಬಂಧ ಹೊಂದಿಲ್ಲ. ಶತ್ರು ದೇಶದ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಪುಲ್ವಾಮಾ ಮತ್ತು ಉರಿ ದಾಳಿಯ ನಂತರ ಎರಡೂ ದೇಶಗಳ ಸಂಬಂಧ ಹದಗೆಟ್ಟಿದೆ. ಇತ್ತೀಚೆಗೆ ಮುಕ್ತಾಯಗೊಂಡ ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿಯು ಎನ್​ಡಿಎ ಜತೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದಿದ್ದರೂ ಕೂಡ ಈ ಸರ್ಕಾರದ ವಿದೇಶಾಂಗ ನೀತಿ ಬದಲಾಗುವ ಸಾಧ್ಯತೆಗಳು ಇಲ್ಲದ ಕಾರಣ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡ ಪಾಕಿಸ್ತಾನಕ್ಕೆ ಹೋಗುವುದು ಖಚಿತವಲ್ಲ ಎಂದು ಕ್ರಿಕ್​ಬಜ್​ ವರದಿ ಮಾಡಿದೆ. ಆದರೆ, ಪಾಕ್​ ಕ್ರಿಕೆಟ್​ ಮಂಡಳಿ ಮಾತ್ರ ಭಾರತ ಕೂಡ ಪಾಕ್​ನಲ್ಲಿಯೇ ಆಡಲಿದೆ ಎಂದು ಬಲವಾಗಿ ನಂಬಿದೆ.

Exit mobile version