ದುಬೈ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 2023 ರ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ (WTC Final 2023) ಪಂದ್ಯಕ್ಕೆ ಮೊದಲು ಕ್ರಿಕೆಟ್ನ ನಿಯಮಗಳಲ್ಲಿ ಕೆಲವೊಂದು ಬದಲಾವಣೆಗಳು ಆಗಲಿವೆ. ಪ್ರಮುಖವಾಗಿ ಅಂಪೈರ್ಗಳು ನೀಡುವ ಸಾಫ್ಟ್ ಸಿಗ್ನಲ್ ರದ್ದಾಗಲಿದೆ ಎಂಬುದಾಗಿ ವರದಿಯಾಗಿದೆ. ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ನೇತೃತ್ವದ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಕ್ರಿಕೆಟ್ ಸಮಿತಿಯು ಈ ನಿಯಮವನ್ನು ಅನುಮೋದಿಸಿದೆ ಎಂದು ಹೇಳಲಾಗಿದೆ. ಜೂನ್ 7 ರಿಂದ12 ರವರೆಗೆ ಲಂಡನ್ನ ದಿ ಓವಲ್ನಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಫೈನಲ್ ಪಂದ್ಯದ ವೇಳೆ ಹೊಸ ನಿಯಮಗಳು ಜಾರಿಗೆ ಬರಬಹುದು.
ಬ್ಯಾಟರ್ ಒಬ್ಬರು ಔಟಾದ ವೇಳೆ ಕೆಲವೊಂದು ವೇಳೆ ಅಂಪೈರ್ಗಳಿಗೆ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳುವುದಕ್ಕೆ ಕಷ್ಟವಾಗುತ್ತದೆ. ಇಂಥ ಸಂದರ್ಭದಲ್ಲಿ ಮೂರನೇ ಅಂಪೈರ್ ನೆರವು ತೆಗೆದುಕೊಳ್ಳುವ ಫೀಲ್ಡ್ ಅಂಪೈರ್ ತಮ್ಮ ನಿರ್ಧಾರ ಏನೆಂದು ಸಾಫ್ಟ್ ಸಿಗ್ನಲ್ ನೀಡುತ್ತಾರೆ. ಆನ್ಫೀಲ್ಡ್ ಅಂಪೈರ್ಗಳು ಸಾಫ್ಟ್ ಸಿಗ್ನಲ್ ನೀಡಿದ ನಂತರ ವೀಡಿಯೊ ರಿಪ್ಲೆಗಳನ್ನು ನೋಡುತ್ತಾರೆ. ಸರಿಯಾದ ಪುರಾವೆಗಳು ಇದ್ದರೆ ಮಾತ್ರ ಅಂಪೈರ್ ನಿರ್ಧಾರವನ್ನು ಟಿವಿ ಅಂಪೈರ್ಗಳು ತಿರಸ್ಕರಿಸಿ ಬದಲಿಸಿಕೊಳ್ಳುವಂತೆ ಹೇಳುತ್ತಾರೆ. ಇಲ್ಲವಾದರೆ ಫೀಲ್ಡ್ ಅಂಪೈರ್ಗಳ ನಿರ್ಧಾರವನ್ನು ಸರಿಯೆಂದು ಪ್ರಕಟಿಸುತ್ತಾರೆ. ಹೀಗೆ ಐಸಿಸಿ ನಿಯಮಗಳ ಪ್ರಕಾರ, ಸಾಫ್ಟ್ ಸಿಗ್ನಲ್ ಎಂದರೆ ಅಂಪೈರ್ ವಿಮರ್ಶೆಯನ್ನು ಪ್ರಾರಂಭಿಸುವ ಮೊದಲು ಫೀಲ್ಡ್ ಅಂಪೈರ್ಗಳು ತೆಗೆದುಕೊಳ್ಳುವ ತೀರ್ಮಾನ.
ವಿರೋಧ ವ್ಯಕ್ತಗೊಂಡಿತ್ತು
ಆನ್ಫೀಲ್ಡ್ ಅಂಪೈರ್ಗಳು ಬರಿಗಣ್ಣಿನಿಂದ ನೋಡಿ ತೆಗೆದುಕೊಳ್ಳುವ ನಿರ್ಧಾರಗಳು ಟಿವಿ ಅಂಪೈರ್ಗಳ ನಿರ್ಧಾರದ ಮೇಲೆ ಹೆಚ್ಚು ಪ್ರಭಾವ ಬೀರುತ್ತವೆ ಎಂಬ ಆರೋಪ ಕೇಳಿ ಬರುತ್ತಿದೆ ಇದು ಆಟಗಾರರು ಮತ್ತು ವೀಕ್ಷಕ ವಿವರಣೆಗಾರರನ್ನು ಪದೇಪದೇ ಕೆರಳಿಸಿತ್ತು. ಐಸಿಸಿ ಸಾಫ್ಟ್ ಸಿಗ್ನಲ್ ಅನ್ನು ತೆಗೆದುಹಾಕಬೇಕು. ತಂತ್ರಜ್ಞಾನವನ್ನು ಹೊಂದಿರುವ 3ನೇ ಅಂಪೈರ್ಗೆ ನಿರ್ಧಾರ ತೆಗೆದುಕೊಳ್ಳಲು ಅವಕಾಶ ನೀಡಬೇಕು. ವಿವಾದಗಳು ಯಾವಾಗಲೂ ನೀಡಲಾದ ಸಾಫ್ಟ್ ಸಿಗ್ನಲ್ ಸುತ್ತಲೂ ಇರುತ್ತವೆ ಎಂಬ ಅಭಿಪ್ರಾಯಗಳು ವ್ಯಕ್ತಗೊಂಡಿದ್ದವು. ಹೀಗಾಗಿ ನಿಯಮಗಳಿಗೆ ಬದಲಾವಣೆ ತರಲು ಐಸಿಸಿ ನಿರ್ಧರಿಸಿದೆ.
ಮತ್ತೊಂದು ಮಹತ್ವದ ಬದಲಾವಣೆ ಹಗಲಿನಲ್ಲೂ ಬೆಳಕು ಕಡಿಮೆಯಾದಾಗ ಫ್ಲೈಡ್ ಲೈಟ್ಗಳನ್ನು ಬಳಸುವುದು. ಇಲ್ಲಿಯವರೆಗೆ ಸಂಜೆಯ ಬಳಿಕ ಮಾತ್ರ ಹೊನಲು ಬೆಳಕಿನ ನೆರವು ಪಡೆಯಬಹುದಿತ್ತು. ಹೊಸ ಬದಲಾವಣೆ ಬಳಿಕ ನೈಸರ್ಗಿಕ ಬೆಳಕು ಕೊರತೆಯಾದ ತಕ್ಷಣ ಫ್ಲಟ್ಲೈಟ್ ಆನ್ ಮಾಡಿ ಆಟ ಮುಂದುವರಿಸುವ ಅವಕಾಶ ನೀಡಲಾಗಿದೆ. 2021 ರ ಡಬ್ಲ್ಯುಟಿಸಿ ಫೈನಲ್ನಲ್ಲಿ ಇದ್ದಂತೆ, ಈ ವರ್ಷವೂ ಆಟಕ್ಕೆ ಆರನೇ ದಿನ ಮೀಸಲು ದಿನವಾಗಿರುತ್ತದೆ. ಇಂಗ್ಲೆಂಡ್ನ ಏಜಸ್ಬೌಲ್ನಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಉದ್ಘಾಟನಾ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪೈನಲ್ ಪಂದ್ಯದ ವೇಳೆ ಮೀಸಲು ದಿನದಲ್ಲಿ ಪಂದ್ಯವನ್ನು ಆಡಿಸಲಾಗಿತ್ತು. ಈ ಪಂದ್ಯದಲ್ಲಿ ಭಾರತ ತಂಡವನ್ನು ನ್ಯೂಜಿಲ್ಯಾಂಡ್ ತಂಡ ಸೋಲಿಸಿತ್ತು.