ಮೆಲ್ಬೋರ್ನ್ : ಪಾಕಿಸ್ತಾನ ತಂಡ ನೀಡಿದ್ದ (IND vs PAK) ೧೬೦ ರನ್‌ಗಳ ಗೆಲುವಿನ ಗುರಿಯೊಂದಿಗೆ ಆಡುತ್ತಿದ್ದ ಭಾರತ ತಂಡ ೩೧ ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿದ್ದಾಗ, ಅಭಿಮಾನಿಗಳೆಲ್ಲರೂ ಗೆಲುವಿನ ಆಸೆ ಬಿಟ್ಟಿದ್ದರು. ಆರಂಭಿಕ ಬ್ಯಾಟರ್‌ಗಳಿಗೆ ಹಿಡಿ ಶಾಪ ಹಾಕುತ್ತಾ ಪಾಕ್ ವಿರುದ್ಧ ಟಿ೨೦ ವಿಶ್ವ ಕಪ್‌ನಲ್ಲಿ ಮತ್ತೊಂದು ಸೋಲು ಗ್ಯಾರಂಟಿ ಎಂದು ಅಂದುಕೊಂಡಿದ್ದರು. ಆದಾಗ್ಯೂ ಕಿಂಗ್ ಕೊಹ್ಲಿ ಕ್ರೀಸ್‌ನಲ್ಲಿ ಇರುವುದು ಎಲ್ಲರಿಗೂ ಭರವಸೆಯ ಆಶಾಕಿರಣವಾಗಿತ್ತು. ಕೋಟ್ಯಂತದ ಭಾರತ ತಂಡದ ಅಭಿಮಾನಿಗಳ ನಿರೀಕ್ಷೆ ಸುಳ್ಳಾಗಲಿಲ್ಲ. ಅಜೇಯ ೮೨ ರನ್ ಬಾರಿಸಿದ ರನ್ ಮಷಿನ್ ವಿರಾಟ್ ಕೊಹ್ಲಿ ತಂಡವನ್ನು ಗೆಲ್ಲಿಸಿ ಕೊಟ್ಟು ಮಾನ ಕಾಪಾಡಿದರು. ಈ ಮೂಲಕ ಅವರು ತಾನೊಬ್ಬ ಚೇಸ್ ಮಾಸ್ಟರ್ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದರು.
ಕೆ.ಎಲ್ ರಾಹುಲ್ ೪ ರನ್‌ಗಳಿಗೆ ಔಟಾದಾಗ ವಿರಾಟ್ ಕೊಹ್ಲಿ ಕ್ರೀಸ್‌ಗೆ ಬಂದಿದ್ದರು. ಇನ್ನೇನು ಆಟ ಬ್ಯಾಟ್ ಬೀಸಲು ಆರಂಭಿಸಬೇಕು ಎನ್ನುವಷ್ಟರಲ್ಲಿ ರೋಹಿತ್ ಶರ್ಮ (೪) ಕೂಡ ರವೂಫ್‌ಗೆ ವಿಕೆಟ್ ಒಪ್ಪಿಸಿದರು. ಮುಂಬಡ್ತಿ ಪಡೆದುಕೊಂಡು ಆಡಲು ಬಂದ ಅಕ್ಷರ್ ಪಟೇಲ್ ಅನಗತ್ಯ ರನ್‌ಔಟ್‌ಗೆ ಬಲಿಯಾದರು. ಈ ವೇಳೆ ತಂಡವನ್ನು ಗೆಲ್ಲಿಸುವ ಹೊಣೆ ವಿರಾಟ್ ಕೊಹ್ಲಿಯ ಹೆಗಲೇರಿತು. ವಿಕೆಟ್ ಉಳಿಸಿಕೊಳ್ಳುವ ಜತೆಗೆ ರನ್ ಬಾರಿಸುವ ಒತ್ತಡವನ್ನೂ ಸಹಿಸಿಕೊಂಡ ಅವರು ಭಾರತಕ್ಕೆ ವಿರೋಚಿತ ಜಯ ತಂದುಕೊಟ್ಟರು.
ವಿಕೆಟ್ ಪತನಗೊಳ್ಳುತ್ತಿದ್ದ ಕಾರಣ ಅವರಿಗೆ ರನ್ ಬಾರಿಸಲೂ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಮೊದಲ ೨೦ ಎಸೆತಗಳಲ್ಲಿ ೧೧ ರನ್ ಬಾರಿಸಿದ್ದರೆ, ನಂತರದ ೩೩ ಎಸೆತಗಳಲ್ಲಿ ೭೧ ರನ್ ಬಾರಿಸಿದರು. ಅದರಲ್ಲೂ ೧೯ನೇ ಓವರ್‌ನ ಕೊನೇ ಎರಡು ಎಸೆತಗಳಿಗೆ ಅವರು ಬಾರಿಸಿದ ೨ ಸಿಕ್ಸರ್ ಗೆಲುವಿನ ಹೊಡೆತಗಳೆನಿಸಿಕೊಂಡಿತು.
ವಿರಾಟ್ ಕೊಹ್ಲಿ ೨೦೧೬ರ ವಿಶ್ವ ಕಪ್‌ನಲ್ಲಿ ಮೊಹಾಲಿಯಲ್ಲಿ ನಡೆದ ಪಂದ್ಯದ ವೇಳೆ ಆಸ್ಟ್ರೇಲಿಯಾ ವಿರುದ್ಧ ೫೧ ಎಸೆತಗಳಲ್ಲಿ ಅಜೇಯ ೮೨ ರನ್ ಬಾರಿಸಿದ್ದರು. ಆ ಪಂದ್ಯದಲ್ಲೂ ಭಾರತ ವಿರೋಚಿತ ಜಯ ದಾಖಲಿಸಿತ್ತು.
ಇದನ್ನೂ ಓದಿ | IND vs PAK | ಒಂದು ದಿನ ಮೊದಲೇ ಭಾರತೀಯರಿಗೆ ದೀಪಾವಳಿ ಉಡುಗೊರೆ ಕೊಟ್ಟ ವಿರಾಟ್ ಕೊಹ್ಲಿ