ಚೆನ್ನೈ: ಆರಂಭಿಕ ಬ್ಯಾಟರ್ಗಳಾದ ಋತುರಾಜ್ ಗಾಯಕ್ವಾಡ್ (57 ರನ್, 31 ಎಸೆತ, 3 ಫೋರ್, 4 ಸಿಕ್ಸರ್) ಅವರ ಅರ್ಧ ಶತಕ ಹಾಗೂ ಡೇವೋನ್ ಕಾನ್ವೆ (47 ರನ್, 29 ಎಸೆತ, 5 ಫೋರ್, 2 ಸಿಕ್ಸರ್) ಅವರ ಸಂದರ್ಭೋಚಿತ ಬ್ಯಾಟಿಂಗ್ ನೆರವಿನಿಂದ ಮಿಂಚಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಲಕ್ನೊ ಸೂಪರ್ ಜಯಂಟ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿ 217 ರನ್ಗಳ ಬೃಹತ್ ಮೊತ್ತ ಪೇರಿಸಿದೆ. ಆರಂಭದಿಂದಲೂ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ನೀಡಿ ಚೆನ್ನೈ ತಂಡದ ಆಟಗಾರರು ಎದುರಾಳಿ ತಂಡಕ್ಕೆ ದೊಡ್ಡ ಮೊತ್ತದ ಗುರಿಯನ್ನೊಡ್ಡಿದೆ. ಚೆನ್ನೈ ತಂಡದ ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಐಪಿಎಲ್ 16ನೇ ಆವೃತ್ತಿಯಲ್ಲಿ ಸತತ ಎರಡನೇ ಅರ್ಧ ಶತಕ ಬಾರಿಸಿದ್ದರು. ಗುಜರಾತ್ ವಿರುದ್ಧದ ಮೊದಲ ಪಂದ್ಯದಲ್ಲಿ ಅವರು 92 ರನ್ ಬಾರಿಸಿದ್ದರು.
ಇಲ್ಲಿನ ಚೆಪಾಕ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಟಾಸ್ ಗೆದ್ದ ಲಕ್ನೊ ತಂಡದ ನಾಯಕ ಕೆ. ಎಲ್ ರಾಹುಲ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಸ್ಥಳೀಯ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕುವ ಯೋಜನೆ ರೂಪಿಸಿದ್ದರು. ಆದರೆ, ಸಿಎಸ್ಕೆ ಬ್ಯಾಟರ್ಗಳು ರಾಹುಲ್ ಯೋಜನೆಯನ್ನು ಬುಡಮೇಲು ಮಾಡಿದರು. ಹೀಗಾಗಿ ಚೆಪಾಕ್ ಅಂಗಳದಲ್ಲಿ ಬೌಂಡರಿ, ಸಿಕ್ಸರ್ಗಳ ಮಳೆ ಸುರಿಯಿತು. ತಮ್ಮ ಪಾಲಿನ 20 ಓವರ್ಗಳಲ್ಲಿ ಚೆನ್ನೈ ತಂಡ 7 ವಿಕೆಟ್ ಕಳೆದುಕೊಂಡು 217 ರನ್ ಬಾರಿಸಿತು.
ಆರಂಭಿಕರಾಗಿ ಬ್ಯಾಟ್ ಮಾಡಲು ಬಂದ ಋತುರಾಜ್ ಹಾಗೂ ಕಾನ್ವೆ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಜೋಡಿ ಪವರ್ಪ್ಲೇ ಅವಧಿಯ ಮೊದಲ ಆರು ಓವರ್ಗಳಲ್ಲಿ 79 ರನ್ ಬಾರಿಸಿದರೆ 8.1 ಓವರ್ಗಳಲ್ಲಿ 100 ರನ್ ಕಲೆ ಹಾಕಿದರು. ಏತನ್ಮಧ್ಯೆ, ಋತುರಾಜ್ ಗಾಯಕ್ವಾಡ್ 28 ಎಸೆತಗಳಲ್ಲಿ 50 ಬಾರಿಸಿ ಹಾಲಿ ಆವೃತ್ತಿಯ ಐಪಿಎಲ್ನ ಎರಡನೇ ಅರ್ಧ ಶತಕ ಬಾರಿಸಿದರು. ಈ ವೇಳೆ ದಾಳಿಗೆ ಇಳಿದ ಸ್ಪಿನ್ನರ್ ರವಿ ಬಿಷ್ಣೋಯಿ ಗಾಯಕ್ವಾಡ್ ವಿಕೆಟ್ ಕಬಳಿಸಿದರು. ಆದಾಗ್ಯೂ ಈ ಜೋಡಿ ಮೊದಲ ವಿಕೆಟ್ಗೆ 110 ರನ್ಗಳನ್ನು ಬಾರಿಸಿ ಚೆನ್ನೈ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟಿತು. ಇದಾದ ಬಳಿಕ ಡೆವೋನ್ ಕಾನ್ವೆ ವಿಕೆಟ್ ಒಪ್ಪಿಸಿದರು.
ಇದನ್ನೂ ಓದಿ : IPL 2023 : ಭರ್ಜರಿ ಗೆಲುವಿನ ನಡುವೆಯೇ ಆರ್ಸಿಬಿಗೆ ಗಾಯದ ಆಘಾತ, ಪ್ರಮುಖ ಬೌಲರ್ ಔಟ್?
ಬಳಿಕ ಆಡಲು ಬಂದ ಶಿವಂ ದುಬೆ 27 ರನ್ಗಳನ್ನು ಬಾರಿಸಿದರು. ಆರಂಭದಲ್ಲಿ ನಿಧಾನಗತಿಯಲ್ಲಿ ಆಡಿದ ಅವರು ಬಳಿಕ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಅವರ ವಿಕೆಟ್ ಕೂಡ ಬಿಷ್ಣೋಯಿ ಪಾಲಾಯಿತು. ಆಲ್ರೌಂಡರ್ ಬೆನ್ ಸ್ಟೋಕ್ಸ್ 8 ರನ್ಗಳಿಗೆ ವಿಕೆಟ್ ಒಪ್ಪಿಸುವ ಮೂಲಕ ಮತ್ತೆ ನಿರಾಸೆ ಮೂಡಿಸಿದರು. ಆದರೆ, ಮತ್ತೊಂದು ಬದಿಯಲ್ಲಿ ಅಂಬಾಟಿ ರಾಯುಡು ರನ್ ಗಳಿಕೆಗೆ ಇಂಬು ಕೊಟ್ಟು 27 ರನ್ ಬಾರಿಸಿ ಕೊನೇ ತನಕ ಔಟಾಗದೇ ಉಳಿದರು. ಆಲ್ರೌಂಡರ್ ರವೀಂದ್ರ ಜಡೇಜಾ 3 ರನ್ಗೆ ಔಟಾದರೆ, ನಾಯಕ ಮಹೇಂದ್ರ ಸಿಂಗ್ ಧೋನಿ 3 ಎಸೆತಗಳಲ್ಲಿ 12 ರನ್ ಬಾರಿಸಿದರು. ಕ್ರೀಸ್ಗೆ ಬಂದ ಅವರು ಮೊದಲ ಎರಡು ಎಸೆತಗಳಲ್ಲಿ ಭರ್ಜರಿ ಎರಡು ಸಿಕ್ಸರ್ ಬಾರಿಸಿದರು.