ನವ ದೆಹಲಿ: ಅಜರ್ಬೈಜಾನ್ನ ರಾಜಧಾನಿ ಬಾಕುವಿನಲ್ಲಿ ನಡೆಯುತ್ತಿರುವ ಫಿಡೆ ಚೆಸ್ ವಿಶ್ವಕಪ್‌ನಲ್ಲಿ (Chess World Cup) ಭಾರತದ ಯುವ ಚೆಸ್ ತಾರೆ ಆರ್.ಪ್ರಜ್ಞಾನಂದ (R Praggnanandhaa) ಮತ್ತು ವಿಶ್ವದ ನಂಬರ್ ಒನ್ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ನಡುವಿನ ಫೈನಲ್ ಪಂದ್ಯದ ಮೊದಲ ಸುತ್ತು ಡ್ರಾದಲ್ಲಿ ಅಂತ್ಯಗೊಂಡಿದೆ. ಹೀಗಾಗಿ ನಾಳೆ ನಡೆಯುವ ಎರಡನೇ ಸುತ್ತಿನ ಪಂದ್ಯದ ಬಳಿಕ ಫಲಿತಾಂಶ ಘೋಷಣೆಯಾಗಲಿದೆ. ಯುವ ಪ್ರತಿಭೆ ಪ್ರಜ್ಞಾನಂದ ಅವರು ಚಾಂಪಿಯನ್ಪಟ್ಟ ಅಲಂಕರಿಸಲಿ ಎಂದು ಸಾವಿರಾರು ಮಂದಿ ಪ್ರಾರ್ಥನೆ ಮಾಡುತ್ತಿರುವ ನಡುವೆಯೇ ಅವರು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ವಿಶ್ವ ಚಾಂಪಿಯನ್ ಆಟಗಾರನಿಗೆ ಮೊದಲ ಸುತ್ತಿನಲ್ಲಿಯೇ ಗೆಲುವು ನಿರಾಕರಿಸಿದರು.
ವಿಶ್ವದ ಅಗ್ರ ಶ್ರೇಯಾಂಕಿತ ಆಟಗಾರನಾಗಿರುವ ನಾರ್ವೆಯ ಮ್ಯಾಗ್ನಸ್ ಕಾರ್ಲ್ಸನ್ (Magnus Carlson) ವಿರುದ್ಧ 35 ನಡೆಗಳ ನಂತರ ಪಂದ್ಯ ಡ್ರಾಗೊಂಡಿತು. ಬುಧವಾರ ಎರಡನೇ ಕ್ಲಾಸಿಕಲ್ ಪಂದ್ಯ ನಡೆಯಲಿದೆ. ಅಲ್ಲಿಯೂ ಡ್ರಾಗೊಂಡರೆ ಟೈ ಬ್ರೇಕರ್ಗೆ ಮೊರ ಹೋಗಲಿದೆ. ಪ್ರಜ್ಞಾನಂದ ಭರ್ಜರಿ ಫಾರ್ಮ್ನಲ್ಲಿರುವ ಕಾರಣ ಗೆಲುವಿನ ನಿರೀಕ್ಷೆ ಹೆಚ್ಚಾಗಿದೆ.
ಸೋಮವಾರ ನಡೆದ ಸೆಮಿಫೈನಲ್‌ನ ಟೈಬ್ರೇಕರ್ನಲ್ಲಿ ವಿಶ್ವದ ನಂಬರ್ 3ನೇ ಆಟಗಾರ ಫ್ಯಾಬಿಯಾನೊ ಕರುವಾನಾ ಅವರನ್ನು ಮಣಿಸಿ ಪ್ರಜ್ಞಾನಂದ ಫೈನಲ್ಗೆ ಎಂಟ್ರಿ ಪಡೆದುಕೊಂಡಿದ್ದರು. ಈ ಮೂಲಕ ವಿಶ್ವ ಕಪ್ ಫೈನಲ್ಗೇರಿದ ಭಾರತದ ಎರಡನೇ ಚೆಸ್ಪಟು ಎಂಬ ಖ್ಯಾತಿ ಪಡೆದುಕೊಂಡಿದ್ದರು ಪ್ರಜ್ಞಾನಂದ. ಇದಕ್ಕಿಂತ ಮೊದಲು ವಿಶ್ವನಾಥನ್ ಆನಂದ್ ಅವರು ಚಾಂಪಿಯನ್ ಆಗಿದ್ದರು. ಅದೇ ರೀತಿ ಬಾಬಿ ಫಿಶರ್ ಮತ್ತು ಕಾರ್ಲ್‌ಸನ್ ನಂತರ ಕ್ಯಾಂಡಿಡೇಟ್ಸ್ ಟೂರ್ನಮೆಂಟ್‌ಗೆ ಅರ್ಹತೆ ಪಡೆದ 3ನೇ ಕಿರಿಯ ಆಟಗಾರ ಎಂಬ ಖ್ಯಾತಿಯನ್ನು ಆರ್.ಪ್ರಜ್ಞಾನಂದ ಗಳಿಸಿಕೊಂಡಿದದ್ದರು.
ವಿಶ್ವ ಕಪ್ ಪಂದ್ಯದ ಸ್ವರೂಪ ಹೇಗಿದೆ?
ಟೂರ್ನಿಯಲ್ಲಿ ಮೊದಲು ಎರಡು ಪಂದ್ಯಗಳು ನಡೆಯುತ್ತವೆ. ಎರಡನ್ನೂ ಗೆದ್ದವರಿಗೆ ಸುಲಭ ಗೆಲುವು. ಒಂದೊಂದು ಗೆದ್ದರೆ ಅಥವಾ ಎರಡೂ ಡ್ರಾಗೊಂಡರೆ ಟೈಬ್ರೇಕರ್ ಮೊರೆ ಹೋಗಲಾಗುತ್ತದೆ. ಮಂಗಳವಾರದ್ದು ಮೊದಲ ಪಂದ್ಯ. ಪ್ರತಿಯೊಂದು ಪಂದ್ಯಕ್ಕೆ ಆರಂಭಿಕ 40 ಚಲನೆಗಳಿಗೆ 90 ನಿಮಿಷಗಳ ಸಮಯ ನಿಗದಿ ಮಾಡಲಾಗುತ್ತದೆ ಮುಂದಿನ 40 ಚಲನೆಗಳಿಗೆ 30 ನಿಮಿಷಗಳನ್ನು ಕೊಡಲಾಗುತ್ತದೆ. ಈ ಸಮಯದ ಲೆಕ್ಕಾಚಾರ ಮೊದಲ ಚಲನೆಯಿಂದ ಆರಂಭವಾಗುತ್ತದೆ.
ಇದನ್ನೂ ಓದಿ: Chess World Cup: ಚೆಸ್ ವಿಶ್ವಕಪ್ ಫೈನಲ್ ಪ್ರವೇಶಿಸಿ ದಾಖಲೆ ಬರೆದ ಪ್ರಜ್ಞಾನಂದ
ಟೈ ಆದರೆ ಮೂರನೇ ದಿನದಂದು ಪ್ಲೇಆಫ್ ನಡೆಯುತ್ತದೆ. ಟೈಬ್ರೇಕ್ ಪ್ರಕ್ರಿಯೆಯು ಎರಡು ಕ್ಷಿಪ್ರ ಆಟಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ 25 ನಿಮಿಷಗಳ ಸಮಯ ಅಗತ್ಯಬಿದ್ದಲ್ಲಿ 10 ನಿಮಿಷಗಳ ಹೆಚ್ಚುವರಿ ಆಟವನ್ನು ಆಡಿಸಲಾಗುತ್ತದೆ.
ಅಮ್ಮನ ಪ್ರೀತಿಯೇ ಶಕ್ತಿ
ಚೆಸ್ ವಿಶ್ವಕಪ್‌ನಲ್ಲಿ ಗ್ರ್ಯಾಂಡ್ ಮಾಸ್ಟರ್ ಆರ್ ಪ್ರಜ್ಞಾನಂದ ಅವರ ಅದ್ಭುತ ಓಟವು ದಂತಕಥೆ ಗ್ಯಾರಿ ಕಾಸ್ಪರೋವ್ ಅವರಿಗೆ ತಮ್ಮ ಸಾಧನೆಯ ದಿನಗಳನ್ನು ನೆನಪಿಸಿದೆ. ಸೋಮವಾರ ವಿಶ್ವದ ನಂ.3 ಆಟಗಾರ ಫ್ಯಾಬಿಯಾನೊ ಕರುವಾನಾ ವಿರುದ್ಧ ಪ್ರಜ್ಞಾನಂದ ಗೆಲುವಿನಿಂದ ಪ್ರಭಾವಿತರಾದ ಮಾಜಿ ವಿಶ್ವ ಚಾಂಪಿಯನ್ ಕಾಸ್ಪರೋವ್ ಟ್ವಿಟರ್ ಮೂಲಕ 18 ವರ್ಷದ ಆಟಗಾರನ ಸಾಹಸವನ್ನು ಕೊಂಡಾಡಿದ್ದಾರೆ. ಈ ವೇಳೆ ಅವರು ಪ್ರಜ್ಞಾನಂದ ಅವರ ತಾಯಿಯ ಪ್ರಯತ್ನಗಳನ್ನೂ ಶ್ಲಾಘಿಸಿದ್ದಾರೆ.
ಪ್ರಜ್ಞಾನಂದ ಮತ್ತು ಅವರ ತಾಯಿಗೆ ಅಭಿನಂದನೆಗಳು. ಪ್ರತಿ ಕಾರ್ಯಕ್ರಮಕ್ಕೂ ಹೆಮ್ಮೆಯ ತಾಯಿ ಅವರೊಂದಿಗೆ ಇರುತ್ತಾರೆ. ಅದುವೇ ಅವರಿಗೆವಿಶೇಷ ರೀತಿಯ ಬೆಂಬಲವಾಗಿದೆ. ಚೆನ್ನೈ ಮೂಲಕದ ಅವರು ನ್ಯೂಯಾರ್ಕ್ನ ಇಬ್ಬರನ್ನು ಸೋಲಿಸಿದ್ದಾರೆ. ಅವರು ಆಟದಲ್ಲಿ ತುಂಬಾ ದೃಢವಾಗಿದ್ದಾರೆ ಎಂದು ಕಾಸ್ಪರೋವ್ ಪೋಸ್ಟ್ ಮಾಡಿದ್ದಾರೆ.
ತಮ್ಮ ಕನಸಿನ ಓಟವನ್ನು ಮುಂದುವರಿಸಿದ ಪ್ರಜ್ಞಾನಂದ ಸೋಮವಾರ ನಡೆದ ಸೆಮಿಫೈನಲ್ನಲ್ಲಿ ಕರುವಾನಾ ಅವರನ್ನು 3.5-2.5 ಅಂತರದಿಂದ ಸೋಲಿಸಿದ್ದಾರೆ. ಫೈನಲ್ನಲ್ಲಿ ಅವರು ವಿಶ್ವದ ನಂ.1 ಮತ್ತು ಐದು ಬಾರಿಯ ವಿಶ್ವ ಚಾಂಪಿಯನ್ ನಾರ್ವೆಯ ಮ್ಯಾಗ್ನಸ್ ಕಾರ್ಲ್ಸನ್ ವಿರುದ್ಧ ಫೈನಲ್ ಪಂದ್ಯವನ್ನು ಸ್ಥಾಪಿಸಿದರು. ನಾಲ್ಕು ರ್ಯಾಪಿಡ್ ಟೈಬ್ರೇಕ್ ಗೇಮ್ ನಂತರ ಪ್ರಜ್ಞಾನಂದ ಅವರು ಕರುವಾನಾ ಅವರನ್ನು ಸೋಲಿಸಿದರು.