ಬಾಕು(ಅಜರ್‌ಬೈಜಾನ್): ಕೋಟ್ಯಂತರ ಭಾರತಿಯರು ಕಾದು ಕುಳಿತಿದ್ದ ವಿಶ್ವಕಪ್ ಚೆಸ್ ಫೈನಲ್(Chess World Cup) ಪಂದ್ಯದಲ್ಲಿ 2 ದಶಕಗಳ ಬಳಿಕ ಫೈನಲ್ ಪ್ರವೇಶಿಸಿದ ಭಾರತೀಯ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ(R Praggnanandhaa) ವಿಶ್ವ ನಂ.1 ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್(Magnus Carlsen) ವಿರುದ್ಧ ಸೋಲು ಕಂಡಿದ್ದಾರೆ. ಆದರೆ ಸೋತರೂ ಕೊಟ್ಯಂತರ ಭಾರತೀಯ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಗುರುವಾರ ನಡೆದ ಟೈ ಬ್ರೇಕರ್ ಪಂದ್ಯದಲ್ಲಿ ಮೊದಲ ಸೆಟ್ನಲ್ಲಿ ಪ್ರಜ್ಞಾನಂದ ಹಿನ್ನಡೆ ಅನುಭವಿಸಿದರು. ಆ ಬಳಿಕದ ಸುತ್ತಿನಲ್ಲಿ ಡ್ರಾ ಸಾಧಿಸಿದರೂ 1-0 ಮುನ್ನಡೆ ಕಾಯ್ದುಕೊಂಡ ಮ್ಯಾಗ್ನಸ್ ಕಾರ್ಲ್‌ಸನ್ ಗೆದ್ದು 6ನೇ ಬಾರಿ ವಿಶ್ವ ಕಿರೀಟ ತಮ್ಮದಾಗಿಸಿಕೊಂಡರು. ಪ್ರಜ್ಞಾನಂದ ಅವರು ವಿಶ್ವನಾಥನ್ ಆನಂದ್ ಬಳಿಕ ಚೆಸ್ ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸಿದ ಕೇವಲ 2ನೇ ಭಾರತೀಯ ಎನಿಸಿಕೊಂಡಿದ್ದಾರೆ. 2000 ಹಾಗೂ 2002ರಲ್ಲಿ ವಿಶ್ವನಾಥನ್ ಆನಂದ್ ಭಾರತಕ್ಕೆ ವಿಶ್ವಕಪ್ ಗೆದ್ದಿದ್ದರು. ಆದರೆ ಪ್ರಜ್ಞಾನಂದ ಅವರು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟರು.
ಮೊದಲ ಸುತ್ತಿನ ಫಸ್ಟ್ ಗೇಮ್ನ 16 ಚಲನೆಗಳ ನಂತರ, ಕಾರ್ಲ್‌ಸೆನ್‌ನ ‘ಬಿಷಪ್’ ಗಾಗಿ ಪ್ರಜ್ಞಾನಂದ ತನ್ನ ‘ನೈಟ್’ (ಹೋರ್ಸ್ ಹೆಡ್) ತ್ಯಾಗ ಮಾಡಿದರು. ಇದರ ಬೆನ್ನಲ್ಲೇ ಇಬ್ಬರು ತಮ್ಮ ರಾಣಿಯನ್ನೂ ಕೂಡ ಕಳೆದುಕೊಂಡರು. ಆದರೆ 21ನೇ ನಡೆಯ ವೇಳೆಗೆ ಕಾರ್ಲ್‌ಸೆನ್ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದರು. ಇದೇ ವೇಳೆ ಪ್ರಜ್ಞಾನಂದ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದರು. 25 ನಡೆಗಳ ಬಳಿಕ ಪ್ರಜ್ಞಾನಂದ ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರು. ಆದರೆ 34 ನಡೆಗಳ ವೇಳೆಗೆ ಇಬ್ಬರು ರೂಕ್ ಕಾಯಿಕೆಯನ್ನು ಕಳೆದುಕೊಂಡಿದ್ದರು. 47 ಚಲನೆಯ ಬಳಿಕ ಟೈಬ್ರೇಕ್ನ ಮೊದಲ ಗೇಮ್ನಲ್ಲಿ ಜಯ ಸಾಧಿಸುವಲ್ಲಿ ಯಶಸ್ವಿಯಾದ ಕಾರ್ಲ್‌ಸೆನ್ 1-0 ಮುನ್ನಡೆ ಸಾಧಿಸಿ ಪಂದ್ಯವನ್ನು ತಮ್ಮದಾಗಿಸಿಕೊಂಡರು.
ಬುಧವಾರ ನಡೆದಿದ್ದ ದ್ವಿತೀಯ ಸುತ್ತಿನಲ್ಲಿ ಕಾರ್ಲ್‌ಸನ್ ಬಿಳಿ ಕಾಯಿಯೊಂದಿಗೆ ಹಾಗೂ ಪ್ರಜ್ಞಾನಂದ ಕಪ್ಪು ಕಾಯಿಯೊಂದಿಗೆ ಹೋರಾಟ ಆರಂಭಿಸಿದ್ದರು. ಆರಂಭಿಕ ಹಂತದಲ್ಲಿ ಕಾರ್ಲ್‌ಸನ್ ಅತ್ಯುತ್ತಮ ನಡೆಗಳ ಮೂಲಕ ಭಾರತೀಯನಿಗೆ ತೀವ್ರ ಒತ್ತಡ ಹಾಕಿದರು. ಆದರೆ 22 ನಡೆಗಳ ಬಳಿಕವೂ ಪಂದ್ಯ ಸಮಬಲದಲ್ಲೇ ಇತ್ತು. ಅಂತಿಮವಾಗಿ 30 ನಡೆಗಳ ಬಳಿಕ ಪಂದ್ಯವನ್ನು ಡ್ರಾಗೊಳಿಸಲಾಯಿತು.
ಮಂಗಳವಾರ ನಡೆದಿದ್ದ ಮೊದಲ ಸುತ್ತಿನಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ನಡೆದ ತೀವ್ರ ಪೈಪೋಟಿಯ ಪಂದ್ಯದಲ್ಲಿ ಬಿಳಿ ಕಾಯಿಗಳೊಂದಿಗೆ ಆಡಿದ್ದ ಪ್ರಜ್ಞಾನಂದ ಒಂದು ಹಂತದಲ್ಲಿ ಕಾರ್ಲ್‌ಸನ್ ಮೇಲೆ ಒತ್ತಡ ಹೇರಿ ಪಂದ್ಯವನ್ನು ಗೆಲ್ಲುವ ಹಂತಕ್ಕೆ ಮುನ್ನಡೆದಿದ್ದರು. ತಕ್ಷಣ ಎಚ್ಚೆತ್ತುಕೊಂಡ ಕಾರ್ಲ್‌ಸನ್ ಜಾಣ ನಡೆಯಿಂದ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಜಿದ್ದಾಜಿದ್ದಿನಿಂದ ಸಾಗಿದ ಪಂದ್ಯದಲ್ಲಿ 35 ನಡೆಗಳ ಬಳಿಕ ಉಭಯ ಆಟಗಾರರು ಪಂದ್ಯವನ್ನು ಡ್ರಾಗೊಳಿಸಲು ನಿರ್ಧರಿಸಿದ್ದರು.
ಇದನ್ನೂ ಓದಿ Chess World Cup: ನಾಳೆಗೆ ಟೈ ಬ್ರೇಕರ್ ಕ್ಲೈಮ್ಯಾಕ್ಸ್; ಎರಡನೇ ಸುತ್ತಿನಲ್ಲೂ ಡ್ರಾ ಸಾಧಿಸಿದ ಪ್ರಜ್ಞಾನಂದ
ಪ್ರಜ್ಞಾನಂದ ಅವರು ಈ ಕೂಟದಲ್ಲಿ ಒಟ್ಟು 3 ಬಾರಿ ಟೈ ಬ್ರೇಕರ್‌ನಲ್ಲಿ ಗೆದ್ದಿದ್ದಾರೆ. ಲೀಗ್ ಪಂದ್ಯದಲ್ಲಿ ವಿಶ್ವ ನಂ.2 ಹಿಕರು ನಕಮುರಾ ವಿರುದ್ಧ ಟೈ ಬ್ರೇಕರ್ ಗೆದ್ದರೆ, ಕ್ವಾರ್ಟರ್ ಫೈನಲ್ನಲ್ಲಿ ಭಾರತೀಯನೇ ಆದ ಅರ್ಜುನ್ ಎರಿಗೈಸಿ ವಿರುದ್ಧ ಟೈ ಬ್ರೇಕರ್‌ನ ಸಡನ್ ಡೆತ್‌ನಲ್ಲಿ ಮಲುಗೈ ಸಾಧಿಸಿದ್ದರು. ಇದಾದ ಬಳಿಕ ಸೆಮಿಫೈನಲ್ ಪಂದ್ಯದಲ್ಲಿ ವಿಶ್ವ ನಂ.3 ಫ್ಯಾಬಿಯಾನೋ ವಿರುದ್ಧ ಟೈ ಬ್ರೇಕರ್‌ನಲ್ಲೇ ಗೆದ್ದು ಫೈನಲ್ಗೆ ಲಗ್ಗೆ ಇಟ್ಟಿದ್ದರು. ಆದರೆ ಫೈನಲ್ನಲ್ಲಿ ಅದೃಷ್ಟ ಕಾರ್ಲ್‌ಸನ್‌ಗೆ ಒಲಿಯಿತು.
ಬಹುಮಾನ ಮೊತ್ತ
ಚಾಂಪಿಯನ್ ಪಟ್ಟ ಅಲಂಕರಿಸಿದ ಕಾರ್ಲ್‌ಸನ್ ಸುಮಾರು 90, 93,551 ಲಕ್ಷ ರೂ. ಪಡೆಯಲಿದ್ದಾರೆ. ದ್ವಿತೀಯ ಸ್ಥಾನ ಪಡೆದ ಪ್ರಜ್ಞಾನಂದ 66,13,444 ರೂ. ನಗದು ಬಹುಮಾನವನ್ನು ಪಡೆಯಲಿದ್ದಾರೆ.