ಬಾಕು(ಅಜರ್‌ಬೈಜಾನ್): ಭಾರತೀಯ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ(R Praggnanandhaa) ಚೆಸ್ ವಿಶ್ವಕಪ್(Chess World Cup)ನಲ್ಲಿ ಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದ್ದಾರೆ. ಸೋಮವಾರ ನಡೆದ ಸೆಮಿಫೈನಲ್ ಟೈ ಬ್ರೇಕರ್ ಪಂದ್ಯದಲ್ಲಿ ಅಮೆರಿಕದ ಫ್ಯಾಬಿಯಾನೋ ಕರುವಾನಾ(Fabiano Caruana) ಅವರ ವಿರುದ್ಧದ ಗೆದ್ದು ಫೈನಲ್ಗೆ ಲಗ್ಗೆಯಿಟ್ಟರು. ಈ ಮೂಲಕ 2 ದಶಕಗಳ ಬಳಿಕ ಚೆಸ್ ವಿಶ್ವಕಪ್‌ನ ಫೈನಲ್ ಪ್ರವೇಶಿಸಿದ ಭಾರತೀಯ ಎನ್ನುವ ದಾಖಲೆ ಬರೆದರು. ಫೈನಲ್ನಲ್ಲಿ ವಿಶ್ವ ನಂ.1 ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್(Magnus Carlsen) ವಿರುದ್ಧ ಆಡಲಿದ್ದಾರೆ.
ಟೂರ್ನಿಯುದ್ದಕ್ಕೂ ಅದ್ಭುತ ಆಟ
ಶನಿವಾರ ನಡೆದಿದ್ದ ಮೊದಲ ಸುತ್ತು ಡ್ರಾಗೊಂಡ ಬಳಿಕ ಭಾನುವಾರದ 2ನೇ ಸುತ್ತು ಫಲಿತಾಂಶ ನೀಡುವ ನಿರೀಕ್ಷೆಯಲ್ಲಿತ್ತು. ಆದರೆ ತೀವ್ರ ಪೈಪೋಟಿಗೆ ಸಾಕ್ಷಿಯಾದ 2ನೇ ಸುತ್ತು, 47 ನಡೆಗಳ ಬಳಿಕ ಡ್ರಾಗೊಂಡಿತು.
ಭಾನುವಾರ ಬಿಳಿ ಕಾಯಿಗಳೊಂದಿಗೆ ಆಡಿದ ಪ್ರಜ್ಞಾನಂದ, ಆತ್ಮವಿಶ್ವಾಸದಿಂದ ಆಡಿದರೂ ಒಂದು ಹಂತದಲ್ಲಿ ಸಮಯದ ಅಭಾವ ಎದುರಿಸಬೇಕಾಯಿತು. 15ನೇ ನಡೆಗೆ ಬರೋಬ್ಬರಿ 25 ನಿಮಿಷಗಳನ್ನು ತೆಗೆದುಕೊಂಡರೂ, ಪಂದ್ಯ ಸಂಪೂರ್ಣವಾಗಿ ವಿಶ್ವ ನಂ.2 ಫ್ಯಾಬಿಯಾನೋ ಹಿಡಿತಕ್ಕೆ ಸಿಗದಂತೆ ಎಚ್ಚರ ವಹಿಸಿ ಡ್ರಾ ಸಾಧಿಸಿದ್ದರು. ಹೀಗಾಗಿ ಫಲಿತಾಂಶ ನಿರ್ಧಾರಕ್ಕಾಗಿ ಟೈಬ್ರೇಕರ್ ಮೊರೆ ಹೋಗಬೇಕಾಯಿತು.
ಇದನ್ನೂ ಓದಿ ರಜನಿಕಾಂತ್ ಭೇಟಿಯಾದ Grandmaster ಪ್ರಜ್ಞಾನಂದ; ರಾಘವೇಂದ್ರ ಸ್ವಾಮಿ ಫೋಟೊ ಗಿಫ್ಟ್
ಸೋಮವಾರ ನಡೆದ ಟೈಬ್ರೇಕರ್ ಗೇಮ್ನಲ್ಲಿ ಪ್ರಜ್ಞಾನಂದ ಮೇಲೆ ಆರಂಭಿಕ ಹಂತದಲ್ಲಿ ಒತ್ತಡ ಹಾಕುವಲ್ಲಿ ವಿಶ್ವದ 2ನೇ ಶ್ರೇಯಾಂಕಿತ ಚೆಸ್ ಪಟು ಫ್ಯಾಬಿಯಾನೊ ಕರುವಾನಾ ಯಶಸ್ವಿಯಾಗಿದ್ದರು. ಆದರೆ ನಿರ್ಣಾಯಕ ನಡೆಗಳ ಹಂತದಲ್ಲಿ ಮೇಲುಗೈ ಸಾಧಿಸಿದ 18ರ ಪೋರ ಪ್ರಜ್ಞಾನಂದ ಆಕರ್ಷಕ ನಡೆಗಳ ಮೂಲಕ ಎದುರಾಳಿಗೆ ಹಾಗೂ ನೋಡುಗರಿಗೆ ಅಚ್ಚರಿ ಮೂಡಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟರು.
ಕಾರ್ಲ್‌ಸನ್‌ಗೂ ನೀರು ಕುಡಿಸಿದ್ದ ಪ್ರಜ್ಞಾನಂದ
ಚೆನ್ನೈ ಮೂಲದವರಾದ ಪ್ರಜ್ಞಾನಂದ ಅವರಿಗೆ ಕೇವಲ 18 ವರ್ಷ. ಅವರು 2013ರಲ್ಲಿ ವಿಶ್ವ ಯೂತ್ ಚೆಸ್ ಚಾಂಪಿಯನ್‌ಶಿಪ್ ಅಂಡರ್-8ನಲ್ಲಿ ಪ್ರಶಸ್ತಿಯನ್ನು ಗೆದ್ದಿದ್ದರು. 7ನೇ ವಯಸ್ಸಿನಲ್ಲಿ FIDE ಮಾಸ್ಟರ್ ಮತ್ತು 2015ರಲ್ಲಿ 10 ವರ್ಷದೊಳಗಿನ ಪ್ರಶಸ್ತಿಯನ್ನು ಗೆದ್ದ ಸಾಧನೆ ಮಾಡಿದ್ದಾರೆ. ಬಳಿಕ ಅಂತಾರಾಷ್ಟ್ರೀಯ ಮಾಸ್ಟರ್ ಪ್ರಶಸ್ತಿಯನ್ನು ಗಳಿಸಿದ್ದಾರೆ. ಇವರು ಆನ್‌ಲೈನ್ ಏರ್‌ಥಿಂಗ್ಸ್ ಮಾಸ್ಟರ್ಸ್ ರ್ಯಾಪಿಡ್ ಟೂರ್ನಮೆಂಟ್‌ನಲ್ಲಿ ವಿಶ್ವ ಚಾಂಪಿಯನ್ ಕಾರ್ಲ್‌ಸನ್‌ಗೂ ಸೋಲಿನ ರುಚು ತೋರಿಸಿದ್ದರು. ಕಾರ್ಲ್‌ಸನ್ ವಿರುದ್ಧ ಗೆದ್ದ ಮೂರನೇ ಭಾರತೀಯ ಆಟಗಾರರು ಆಗಿರುವ ಅವರು ಇದೀಗ ಫೈನಲ್ನಲ್ಲಿಯೂ ಗೆಲ್ಲಲಿ ಎನ್ನುವುದು ಭಾರತೀಯರ ಆಶಯವಾಗಿದೆ.