ಬಾಕು(ಅಜರ್‌ಬೈಜಾನ್): ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಚಂದ್ರಯಾನ 3 ನೌಕೆಯನ್ನು ಇಳಿಸಿ ಇತಿಹಾಸ ಸೃಷ್ಟಿಸಿದೆ. ಅತ್ತ ಚೆಸ್ ವಿಶ್ವಕಪ್(Chess World Cup)ನಲ್ಲಿ 2 ದಶಕಗಳ ಬಳಿಕ ಫೈನಲ್ ಪ್ರವೇಶಿಸಿದ ಭಾರತೀಯ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ(R Praggnanandhaa) ವಿಶ್ವ ನಂ.1 ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್(Magnus Carlsen) ವಿರುದ್ಧ ಡ್ರಾ ಸಾಧಿಸಿದ್ದಾರೆ. ಬುಧವಾರ ನಡೆದ ಜಿದ್ದಾಜಿದ್ದಿನ ದ್ವಿತೀಯ ಸುತ್ತಿನ ಪಂದ್ಯಲ್ಲಿ ಡ್ರಾ ಸಾಧಿಸಿ ಗುರುವಾರ ನಡೆಯುವ ಅಂತಿಮ ಟೈ ಬ್ರೇಕರ್ ಪಂದ್ಯದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.
ಒಂದು ಗಂಟೆಗೂ ಹೆಚ್ಚು ಕಾಲ ನಡೆದ ತೀವ್ರ ಪೈಪೋಟಿಯ ಬಳಿಕ ಉಭಯ ಆಟಗಾರರು ಎರಡನೇ ಪಂದ್ಯವನ್ನು ಡ್ರಾ ಮಾಡಲು ನಿರ್ಧರಿಸಿದರು. ಮಂಗಳವಾರ ನಡೆದ ಮೊದಲ ಸುತ್ತಿನಲ್ಲಿ ಡ್ರಾ ಸಾಧಿಸಿದ್ದ ಉಭಯ ಆಟಗಾರರು. ಬುಧವಾರ ನಡೆದ ದ್ವಿತೀಯ ಸುತ್ತಿನಲ್ಲಿ ಗೆಲ್ಲುವ ವಿಶ್ವಾಸದಲ್ಲಿ ಕಣಕ್ಕಿಳಿದಿದ್ದರು. ಆದರೆ ಈ ಪಂದ್ಯವೂ ಡ್ರಾ ದಲ್ಲಿ ಅಂತ್ಯಕಂಡಿದೆ. ಗುರುವಾರ ನಡೆಯುವ ಟೈ ಬ್ರೇಕರ್ ಪಂದ್ಯದಲ್ಲಿ ಒಬ್ಬರಂತು ಗೆದ್ದು ಚೆಸ್ ವಿಶ್ವಕಪ್ ಪ್ರಶಸ್ತಿಯನ್ನು ಎತ್ತಿ ಸಂಭ್ರಮಿಸಲಿದ್ದಾರೆ.
ಟೈ ಬ್ರೇಕರ್ ಹೇಗೆ?
ಬುಧವಾರ ನಡೆದ ಎರಡನೇ ಸುತ್ತಿನ ಪಂದ್ಯ ಡ್ರಾಗೊಂಡ ಕಾರಣ ಗುರುವಾರ ಟೈ ಬ್ರೇಕರ್ ಪಂದ್ಯ ನಡೆಯಲಿದೆ. ಟೈ ಬ್ರೇಕರ್‌ನಲ್ಲಿ ಪಂದ್ಯ ಹೇಗೆ ನಡೆಯಲಿದೆ ಎಂದರೆ, ಮೊದಲು ಪ್ರತಿ ಆಟಗಾರನಿಗೆ ತಲಾ 25 ನಿಮಿಷ+ ಪ್ರತಿ ನಡೆಗೆ 10 ಸೆಕೆಂಡ್ ಹೆಚ್ಚಿನ ಸಮಯ ಸಿಗಲಿದೆ. ಈ ರೀತಿ 2 ಸುತ್ತು ನಡೆಯಲಿದೆ. ಇದರಲ್ಲಿಯೂ ವಿಜೇತರು ಯಾರೆಂದು ನಿರ್ಧಾರವಾಗದಿದ್ದರೆ, ಆಗ ತಲಾ 10 ನಿಮಿಷ ಪ್ಲಸ್ ಪ್ರತಿ ನಡೆಗೆ 10 ಸೆಕೆಂಡ್ ಹೆಚ್ಚಳದಂತೆ ಮತ್ತೆರಡು ಸುತ್ತು ನಡೆಯಲಿದೆ. ಆಗಲೂ ಕೂಡ ಫಲಿತಾಂಶ ಭಾರದಿದ್ದರೆ, ಪ್ರತಿ ಆಟಗಾರರಿಗೆ ತಲಾ 5 ನಿಮಿಷ + ಪ್ರತಿ ನಡೆಗೆ 3 ಸೆಕೆಂಡ್ ಹೆಚ್ಚಿಗೆ ಸಮಯದೊಂದಿಗೆ 2 ಸುತ್ತು ಆಡಿಸಲಾಗುತ್ತದೆ. ಇದರಲ್ಲೂ ಫಲಿತಾಂಶ ಸಿಗದಿದ್ದರೆ ಆಗ, ತಲಾ 3 ನಿಮಿಷ + ಪ್ರತಿ ನಡೆಗೆ 2 ಸೆಕೆಂಡ್ ಹೆಚ್ಚಳದಂತೆ ವಿಜೇತರು ನಿರ್ಧಾರವಾಗುವ ವರೆಗೂ ಆಡಿಸಲಾಗುತ್ತದೆ.
ಸೆಮೀಸ್‌ನಲ್ಲಿ ವಿಶ್ವ ನಂ.2 ಫ್ಯಾಬಿಯಾನೋ ವಿರುದ್ಧ ಗೆದ್ದ ಪ್ರಜ್ಞಾನಂದ, ಫೈನಲ್‌ನಲ್ಲಿ ವಿಶ್ವ ನಂ.1 ಆಟಗಾರ ಕಾರ್ಲ್‌ಸನ್ ವಿರುದ್ಧ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಮಂಗಳವಾರ ಬಿಳಿ ಕಾಯಿಗಳೊಂದಿಗೆ ಆಡಿದ್ದ ಪ್ರಜ್ಞಾನಂದ ಒಂದು ಹಂತದಲ್ಲಿ ಕಾರ್ಲ್‌ಸನ್ ಮೇಲೆ ಒತ್ತಡ ಹೇರಿ ಪಂದ್ಯವನ್ನು ಗೆಲ್ಲುವ ಹಂತಕ್ಕೆ ಮುನ್ನಡೆದಿದ್ದರು. ತಕ್ಷಣ ಎಚ್ಚೆತ್ತುಕೊಂಡ ಕಾರ್ಲ್‌ಸನ್ ಜಾಣ ನಡೆಯಿಂದ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಜಿದ್ದಾಜಿದ್ದಿನಿಂದ ಸಾಗಿದ ಪಂದ್ಯದಲ್ಲಿ 35 ನಡೆಗಳ ಬಳಿಕ ಉಭಯ ಆಟಗಾರರು ಪಂದ್ಯವನ್ನು ಡ್ರಾಗೊಳಿಸಲು ನಿರ್ಧರಿಸಿದರು.
ಇದನ್ನೂ ಓದಿ Chess World Cup: ಚೆಸ್ ವಿಶ್ವಕಪ್ ಫೈನಲ್ ಪ್ರವೇಶಿಸಿ ದಾಖಲೆ ಬರೆದ ಪ್ರಜ್ಞಾನಂದ
ಗೆದ್ದು ಬಾ ಪ್ರಜ್ಞಾನಂದ… ಕೋಟಿ ಭಾರತೀಯರ ಹಾರೈಕೆ
ಚೆನ್ನೈ ಮೂಲದವರಾದ ಪ್ರಜ್ಞಾನಂದ ಅವರಿಗೆ ಕೇವಲ 18 ವರ್ಷ. ಅವರು 2013ರಲ್ಲಿ ವಿಶ್ವ ಯೂತ್ ಚೆಸ್ ಚಾಂಪಿಯನ್‌ಶಿಪ್ ಅಂಡರ್-8ನಲ್ಲಿ ಪ್ರಶಸ್ತಿಯನ್ನು ಗೆದ್ದಿದ್ದರು. 7ನೇ ವಯಸ್ಸಿನಲ್ಲಿ FIDE ಮಾಸ್ಟರ್ ಮತ್ತು 2015ರಲ್ಲಿ 10 ವರ್ಷದೊಳಗಿನ ಪ್ರಶಸ್ತಿಯನ್ನು ಗೆದ್ದ ಸಾಧನೆ ಮಾಡಿದ್ದಾರೆ. ಬಳಿಕ ಅಂತಾರಾಷ್ಟ್ರೀಯ ಮಾಸ್ಟರ್ ಪ್ರಶಸ್ತಿಯನ್ನು ಗಳಿಸಿದ್ದಾರೆ. ಇವರು ಆನ್‌ಲೈನ್ ಏರ್‌ಥಿಂಗ್ಸ್ ಮಾಸ್ಟರ್ಸ್ ರ್ಯಾಪಿಡ್ ಟೂರ್ನಮೆಂಟ್‌ನಲ್ಲಿ ವಿಶ್ವ ಚಾಂಪಿಯನ್ ಕಾರ್ಲ್‌ಸನ್‌ಗೂ ಸೋಲಿನ ರುಚು ತೋರಿಸಿದ್ದರು. ಕಾರ್ಲ್‌ಸನ್ ವಿರುದ್ಧ ಗೆದ್ದ ಮೂರನೇ ಭಾರತೀಯ ಆಟಗಾರರು ಆಗಿರುವ ಅವರು ಗುರುವಾರ ನಡೆಯುವ ಟೈ ಬ್ರೇಕರ್ನಲ್ಲಿಯೂ ಗೆದ್ದು ಇತಿಹಾಸ ನಿರ್ಮಿಸಲಿ ಎನ್ನುವುದು ಭಾರತೀಯರ ಆಶಯವಾಗಿದೆ.