ಮುಂಬಯಿ: ಖಾಸಗಿ ವಾಹಿನಿ ನಡೆಸಿರುವ ರಹಸ್ಯ ಕಾರ್ಯಾಚರಣೆಯಲ್ಲಿ ಟೀಮ್ ಇಂಡಿಯಾ ಆಟಗಾರರ ಮತ್ತು ಬಿಸಿಸಿಐ ಬಗ್ಗೆ ಆಘಾತಕಾರಿ ಮಾಹಿತಿ ಹೊರಹಾಕಿದ್ದ ಭಾರತೀಯ ಕ್ರಿಕೆಟ್ ಆಯ್ಕೆ ಸಮಿತಿಯ ಮುಖ್ಯಸ್ಥ ಚೇತನ್ ಶರ್ಮಾ(Chetan Sharma) ಅವರ ತಲೆದಂಡವಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಮಂಗಳವಾರ ಚೇತನ್ ಶರ್ಮಾ ಅವರು ಟೀಮ್ ಇಂಡಿಯಾ ಆಟಗಾರರು ಪೂರ್ಣ ಪ್ರಮಾಣದ ಫಿಟ್ನೆಸ್ ಹೊಂದಲು ಹಾಗೂ ಗಾಯಗಳನ್ನು ಮುಚ್ಚಿಡಲು ನಿಷೇಧಿತ ಇಂಜೆಕ್ಷನ್ ತೆಗೆದುಕೊಳ್ಳುತ್ತಾರೆ, ಹಾಗೂ ಸೌರವ್ ಗಂಗೂಲಿ ಮತ್ತು ವಿರಾಟ್ ಕೊಹ್ಲಿ ವಿವಾದದಲ್ಲಿ ನಿಜವಾಗಿ ನಡೆದಿದ್ದೇನು ಹೀಗೆ ಹಲವು ವಿಚಾರಗಳ ಮಾತನಾಡಿದ ವಿಡಿಯೊವೊಂದು ಲೀಕ್ ಆಗಿತ್ತು. ಇದೀಗ ಈ ವಿಚಾರವಾಗಿ ಗರಂ ಆಗಿರುವ ಬಿಸಿಸಿಐ(BCCI) ಬುಧವಾರ ಉನ್ನತ ಮಟ್ಟದ ಸಭೆ ಕರೆದಿದೆ ಎಂದು ವರದಿಯಾಗಿದೆ.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ತುರ್ತು ಸಭೆ ಕರೆದಿದ್ದು, ಈ ಸಭೆಯಲ್ಲಿ ಚೇತನ್ ಶರ್ಮಾ ಅವರನ್ನು ಪಾಲ್ಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಸದ್ಯದ ಮಾಹಿತಿ ಪ್ರಕಾರ ಚೇತನ್ ಶರ್ಮಾ ಅವರನ್ನು ಆಯ್ಕೆ ಸಮಿತಿಯ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಸುವ ಸಾಧ್ಯತೆ ಇದೆ ಎಂದು ಮೂಲವೊಂದು ತಿಳಿಸಿದೆ.
ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧ ನಡೆದ ಟಿ20 ವಿಶ್ವ ಕಪ್ನಲ್ಲಿ ಭಾರತ ತಂಡ ಸೋಲು ಕಂಡ ಬೆನ್ನಲ್ಲೇ ಚೇತನ್ ಶರ್ಮಾ ಅವರ ನೇತೃತ್ವದ ಆಯ್ಕೆ ಸಮಿತಿಯನ್ನು ಬಿಸಿಸಿಐ ವಜಾಗೊಳಿಸಿತ್ತು. ಆದರೆ ಮುಂಬಯಿಯಲ್ಲಿ ನಡೆದ ಬಿಸಿಸಿಐ ಅಪೆಕ್ಸ್ ಸಮಿತಿಯ ಸಭೆಯಲ್ಲಿ ಅಚ್ಚರಿ ಎಂಬಂತೆ ಬಿಸಿಸಿಐ ಮತ್ತೆ ಚೇತನ್ ಶರ್ಮಾ ಅವರಿಗೆ ಆಯ್ಕೆ ಸಮಿತಿಯ ಮುಖ್ಯಸ್ಥ ಸ್ಥಾನ ನೀಡಿತ್ತು.