ಬರ್ಮಿಂಗ್ಹಮ್ : ಭಾರತದ ಮುಂಚೂಣಿ ಬ್ಯಾಡ್ಮಿಂಟನ್ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಬರ್ಮಿಂಗ್ಹಮ್ ಕಾಮನ್ವೆಲ್ತ್ ಗೇಮ್ಸ್ (CWG- 2022) ಕ್ರೀಡಾಕೂಟದಲ್ಲಿ ಚಿನ್ನದ ಸಂಭ್ರಮ ಮಾಡಿದ್ದಾರೆ. ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತೀಯ ಜೋಡಿ ಇಂಗ್ಲೆಂಡ್‌ನ ಸೀನ್ ವೆಂಡಿ ಮತ್ತು ಬೆನ್ ಲೇನ್ ಜೋಡಿಯನ್ನು ನೇರ ಗೇಮ್‌ಗಳಿಂದ ಮಣಿಸಿ ಸ್ವರ್ಣ ಪದಕ ತಮ್ಮದಾಗಿಸಿಕೊಂಡರು. ಈ ಮೂಲಕ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಬಂಗಾರದ ಪದಕ ಗೆದ್ದುಕೊಂಡ ಭಾರತದ ಮೊದಲ ಬ್ಯಾಡ್ಮಿಂಟನ್ ಡಬಲ್ಸ್ ಜೋಡಿ ಎನಿಸಿಕೊಂಡರು. ಅಂತೆಯೇ ಬ್ಯಾಡ್ಮಿಂಟನ್ ಡಬಲ್ಸ್‌ನಲ್ಲಿ ಲಭಿಸಿರುವುದು ಭಾರತದ ಪಾಲಿನ ೨೨ನೇ ಬಂಗಾರದ ಪದಕವಾಗಿದೆ.
ಫೈನಲ್ ಪಂದ್ಯದಲ್ಲಿ ಸಂಪೂರ್ಣವಾಗಿ ಪಾರಮ್ಯ ಮೆರೆದ ಭಾರತದ ಜೋಡಿ ೨೧-೧೫, ೨೧-೧೩ ಗೇಮ್‌ಗಳಿಂದ ಸ್ಥಳೀಯ ಆಟಗಾರರನ್ನು ಮಣಿಸಿದರು. ಮೊದಲ ಗೇಮ್‌ನಲ್ಲಿ ಇಂಗ್ಲೆಂಡ್ ಜೋಡಿ ಸ್ವಲ್ಪ ಪ್ರತಿರೋಧ ಒಡ್ಡಲು ಯತ್ನಿಸಿದರೂ, ಮುಂದಿನ ಗೇಮ್‌ನಲ್ಲಿ ಭಾರತೀಯರು ಸಂಪೂರ್ಣ ಪಾರಮ್ಯ ಮೆರೆದರು.
ಪುರುಷರ ಡಬಲ್ಸ್‌ನಲ್ಲಿ ಗೆಲುವು ಸಾಧಿಸುವ ಮೂಲಕ ಭಾರತದ ಬ್ಯಾಡ್ಮಿಂಟನ್ ಸ್ಪರ್ಧಿಗಳು ಸತತ ಮೂರು ಚಿನ್ನದ ಪದಕ ಗೆದ್ದುಕೊಂಡಿಂತಾಗಿದೆ. ಅದಕ್ಕಿಂದ ಹಿಂದೆ ಪಿ. ವಿ ಸಿಂಧೂ ಮಹಿಳೆಯರ ಸಿಂಗಲ್ಸ್‌ನಲ್ಲಿ ಹಾಗೂ ಲಕ್ಷ್ಯ ಸೇನ್ ಪುರುಷರ ಸಿಂಗಲ್ಸ್‌ನಲ್ಲಿ ಬಂಗಾರ ಗೆದ್ದಿದ್ದರು.
ಇದನ್ನೂ ಓದಿ | CWG- 2022 | ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಬಂಗಾರದ ಪದಕಕ್ಕೆ ಗುರಿಯಿಟ್ಟ ಲಕ್ಷ್ಯ