ನವದೆಹಲಿ : ಬಾಲಿವುಡ್ ನಟಿ ಊರ್ವಶೀ ರೌತೆಲಾ (Urvashi Rautela) ಹಾಗೂ ಟೀಮ್ ಇಂಡಿಯಾದ ವಿಕೆಟ್‌ಕೀಪರ್ ಬ್ಯಾಟರ್ ಊರ್ವಶಿ ರೌತೆಲಾ ನಡುವಿನ ಸೋಶಿಯಲ್ ಮೀಡಿಯಾ ಸಮರ ತಾರಕಕ್ಕೇರುವ ಲಕ್ಷಣಗಳು ಗೋಚರಿಸುತ್ತಿವೆ. ಮಿಸ್ಟರ್ ಆರ್‌ಪಿಯಿಂದ ಆರಂಭಗೊಂಡ ಜಗಳ ಇದೀಗ “ಮುನ್ನಿ, ಬದ್ನಾಮ್’ ಎಂಬಲ್ಲಿಗೆ ತಲುಪಿದೆ. ರಿಷಭ್ ಒಂದು ಇನ್‌ಸ್ಟಾ ಗ್ರಾಮ್ ಪೋಸ್ಟ್ ಮಾಡಿ ಮತ್ತೆ ಡಿಲೀಟ್ ಮಾಡಿ ಸುಮ್ಮನಾಗಿದ್ದರೆ, ನಟಿ ರೌತೆಲಾ ತಮ್ಮ ಹಳೆಯ ಸಂಬಂಧದ ಕತೆಯನ್ನು ಇಲ್ಲಿಗೆ ಮುಗಿಸುವಂತೆ ಕಾಣುತ್ತಿಲ್ಲ. ನೀನು ಎಳೆ ಬಾಲಕ, ಬ್ಯಾಟ್ ಮತ್ತು ಬಾಲ್‌ನತ್ತ ಗಮನ ಕೊಡು ಎಂದು ಮತ್ತೆ ರಿಷಭ್ ಕಾಲೆಳೆದಿದ್ದಾರೆ.
ಇವರಿಬ್ಬರ ಜಗಳ ಆರಂಭವಾಗಿದ್ದು, ನಟಿ ಊರ್ವಶಿ ರೌತೆಲಾ ಅವರ ಪತ್ರಿಕಾಗೋಷ್ಠಿಯ ಬಳಿಕ. ಅವರು ತಮ್ಮ ಸಂಬಂಧಗಳ ಬಗ್ಗೆ, ತಮಗೆ ಲವ್ ಪ್ರಪೋಸ್ ಮಾಡಿದವರ ಬಗ್ಗೆ ಮಾತನಾಡಿದ್ದರು. ಈ ವೇಳೆ ಅವರು ಮಿಸ್ಟರ್ ಆರ್‌ಪಿ ಎಂಬುವವರು ನನಗಾಗಿ ಹೊಟೆಲ್ ಲಾಬಿಯಲ್ಲಿ ಏಳೆಂಟು ಗಂಟೆ ಕಾಯುತ್ತಿದ್ದರು. ಶೂಟಿಂಗ್ ಮುಗಿಸಿ ಮೊಬೈಲ್ ನೋಡಿದರೆ ಅವರ ೧೭-೧೮ ಮಿಸ್ಡ್ ಕಾಲ್‌ಗಳು ಇರುತ್ತಿದ್ದವು ಎಂದು ಹೇಳಿದ್ದರು. ಆರಂಭದಲ್ಲಿ ಊರ್ವಶಿ, ಆರ್‌ಪಿ ಎಂದರೆ ಯಾರು ಎಂದು ಬಿಡಿಸಿ ಹೇಳಿರಲಿಲ್ಲ. ಆದರೆ, ಬಹುತೇಕರಿಗೆ ಅವರು ಯಾರು ಎಂಬುದು ಗೊತ್ತಾಗಿತ್ತು. ಯಾಕೆಂದರೆ…
೨೦೧೮ರ ಸಮಯದಲ್ಲಿ ಊರ್ವಶಿ ಹಾಗೂ ರಿಷಭ್ ಪಂತ್ ಲವ್ವಲ್ಲಿ ಬಿದ್ದಿದ್ದಾರೆ ಎಂಬ ಗುಸುಗುಸು ಹರಿದಾಡಿತ್ತು. ಅದನ್ನು ಹುಡುಕುತ್ತಾ ಹೋದ ಪ್ಯಾಪರಾಜಿಗಳಿಗೆ (ಫೋಟೋಗ್ರಾಫರ್‌ಗಳು) ಅದು ಖರೆ ಸುದ್ದಿ ಎಂಬುದಾಗಿ ಗೊತ್ತಾಗಿತ್ತು. ರಿಷಭ್ ಹಾಗೂ ರೌತೆಲಾ ಆಗಾಗ ಊಟಕ್ಕೆಲ್ಲ ಸೇರುತ್ತಿದ್ದರು. ಸ್ವಲ್ಪ ಕಾಲದ ಬಳಿಕ ಅವರಿಬ್ಬರಿಗೂ ಬ್ರೇಕಪ್ ಅಗಿದೆ ಎಂಬ ಸುದ್ದಿ ಹರಡಿತ್ತು. ಊರ್ವಶಿಯ ವಾಟ್ಸ್‌ಆಪ್ ನಂಬರ್ ಅನ್ನೇ ರಿಷಭ್ ಬ್ಲಾಕ್ ಮಾಡಿದ್ದಾರೆ ಎಂದು ಹೇಳಲಾಗಿತ್ತು.
ಬಾಯ್ಬಿಟ್ಟ ಊರ್ವಶಿ
ಪತ್ರಿಕಾಗೋಷ್ಠಿಯರಲ್ಲಿ ಊರ್ವಶಿ ತಮ್ಮಿಬ್ಬರ ಹೃದಯಕ್ಕಾದ ಹಳೆಯ ಗಾಯವನ್ನು ಕೆರೆದಿದ್ದರು. ಆದರೆ, ವಾಸಿಯಾಗಿದ್ದ ಗಾಯವನ್ನು ಕೆರೆದದ್ದು ರಿಷಭ್‌ಗೆ ಇಷ್ಟವಾಗಿರಲಿಲ್ಲ. ಸುಮ್ಮನಿರದ ಅವರು “ಕೆಲವರು ಜನಪ್ರಿಯತೆಯನ್ನು ಗಿಟ್ಟಿಸಿಕೊಳ್ಳಲು ಪತ್ರಿಕಾಗೋಷ್ಠಿಯಲ್ಲಿ ಸುಳ್ಳುಗಳ ಸರಮಾಲೆಯನ್ನು ಕಟ್ಟುತ್ತಾರೆ. ಅವರಿಗೆ ತಾವು ದೊಡ್ಡ ಸುದ್ದಿಯಾಗುವ ಹಂಬಲ. ಅವರಿಗೆ ದೇವರು ಒಳಿತು ಮಾಡಲಿ. ನನ್ನ ಹಿಂದೆ ಸುತ್ತುವುದನ್ನು ಬಿಡು ಸಹೋದರಿ. ಸುಳ್ಳು ಹೇಳುವುದನ್ನೂ ಕೂಡ,’ ಎಂದು ಬರೆದಿದ್ದರು. ಈ ವೇಳೆ ಆರ್‌ಪಿ ಯಾರು ಎಂಬುದನ್ನು ಅವರೇ ಸ್ಪಷ್ಟಪಡಿಸಿದಂತಾಗಿತ್ತು. ಗುರುವಾರ ಈ ಇನ್‌ಸ್ಟಾಗ್ರಾಮ್ ಪೋಸ್ಟ್ ಮಾಡಿದ ರಿಷಭ್ ಪಂತ್, ೧೦ ನಿಮಿಷದಲ್ಲೇ ಡಿಲೀಟ್ ಮಾಡಿದ್ದರು.
ಇದಾದ ಮರುದಿನವೇ ಅಂದರೆ ಶುಕ್ರವಾರ ಊರ್ವಶಿ ರೌತೆಲಾ, ಮುನ್ನಿ ಬದ್ನಾಮ್ ಪೋಸ್ಟ್ ಮಾಡಿದ್ದಾರೆ. ನೋಡು ತಮ್ಮಾ ನೀನು ಬ್ಯಾಟ್ ಮತ್ತು ಬಾಲ್‌ನಲ್ಲಿ ಆಡು. ಹಾಲುಗೆನ್ನೆಯ ಹುಡುಗನಿಂದ ಕೆಟ್ಟು ಹೋಗುವುದಕ್ಕೆ ನಾನೇನೂ ಮುನ್ನಿಯಲ್ಲ. ನಿನಗೆ ರಕ್ಷಾ ಬಂಧನದ ಶುಭಾಶಯಗಳು. ಆರ್‌ಪಿ ಛೋಟು. ಮೌನಿಯಾಗಿರುವ ಹುಡುಗಿಯನ್ನು ಮುಂದಿಟ್ಟುಕೊಂಡು ನಿನ್ನ ಬೇಳೆ ಬೇಯಿಸಿಕೊಳ್ಳಬೇಡ,” ಎಂದು ಬರೆದಿದ್ದಾರೆ.
ಪರೋಕ್ಷವಾಗಿ ಟಾಂಗ್ ಕೊಟ್ಟ ರಿಷಭ್ ಪಂತ್‌ಗೆ ಊರ್ವಶಿ ಕೊಟ್ಟಿರುವ ಉತ್ತರ, ಇನ್ನಷ್ಟು ಬೆಳೆಯುವ ಸಾಧ್ಯತೆಗಳು ಕಡಿಮೆ. ಯಾಕೆಂದರೆ ರಿಷಭ್ ಉತ್ತರ ಕೊಟ್ಟ ಕೆಲವೇ ಕ್ಷಣಗಳಲ್ಲಿ ಪೋಸ್ಟ್ ಡಿಲೀಟ್ ಮಾಡಿದ್ದಾರೆ ಎಂದರೆ ಅವರಿಗೆ ವಿಷಯವನ್ನು ಸಾರ್ವಜನಿಕ ವೇದಿಕೆಗೆ ತರುವ ಆಸಕ್ತಿ ಇಲ್ಲ ಎಂದು ಅನಿಸುತ್ತದೆ. ಆದರೆ, ಊರ್ವಶಿ ಬಿಡುವ ಲಕ್ಷಣಗಳು ಕಡಿಮೆ. ಆದಾಗ್ಯೂ ಏಷ್ಯಾ ಕಪ್‌ಗೆ ಸಿದ್ಧತೆ ನಡೆಸುತ್ತಿರುವ ಆರ್‌ಪಿಗೆ ‘ಬ್ಯಾಟ್ ಮತ್ತು ಬಾಲ್’ ಕಡೆಗೆ ಗಮನ ಹರಿಸುವಂತೆ ಕೋಚ್ ದ್ರಾವಿಡ್ ಸಲಹೆ ಕೊಡಲಿದ್ದಾರೆ.