ನವದೆಹಲಿ: ಹಿಂದಿನ ಸರ್ಕಾರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ತೋರಿದ ಧೋರಣೆಯನ್ನು ಗಮನಿಸುವಾಗ ಇದು ಹಗರಣಕ್ಕೆ ಒತ್ತು ಕೊಟ್ಟ ರೀತಿಯಲ್ಲಿದೆ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ವಿಶ್ವವಿದ್ಯಾಲಯದ ಕ್ರೀಡಾಕೂಟದ ಕ್ರೀಡಾಪಟುಗಳನ್ನು ಉದ್ದೇಶಿಸಿ ಗುರುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡುವ ವೇಳೆ ಮೋದಿ ಅವರು ಈ ಮಾತನ್ನು ಹೇಳಿದರು. ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ತನ್ನದೇ ಆದ ವಿಶೇಷತೆ ಹೊಂದಿದೆ. ಈ ಕ್ರೀಡಾ ಕೂಟದಿಂದ ಹಲವು ಕ್ರೀಡಾಪಟುಗಳು ಬೆಳಕಿಗೆ ಬರಲಿದ್ದಾರೆ. ಏಕ್ ಭಾರತ್ ಶ್ರೇಷ್ಠ ಭಾರತ್ ಎಂಬ ಭಾವನೆಯನ್ನು ಯುವಜನರಲ್ಲಿ ಹೆಚ್ಚಿಸಲು ಇದೊಂದು ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.
ಇದೇ ವೇಳೆ ಅವರು ಕಾಂಗ್ರೆಸ್ ವಿರುದ್ಧ ಪರೋಕ್ಷ ಟೀಕೆಯನ್ನು ಮಾಡಿದರು, ಕಾಮನ್‌ವೆಲ್ತ್ ಹಗರಣ ಹಿಂದಿನ ಸರ್ಕಾರಗಳು ಕ್ರೀಡೆಯ ಬಗ್ಗೆ ಹೊಂದಿದ್ದ ಧೋರಣೆಗೆ ಉತ್ತಮ ನಿದರ್ಶನ. ಭಾರತದ ಪ್ರತಿಷ್ಠೆಯನ್ನು ಹೆಚ್ಚಿಸಬಹುದಾದ ಕ್ರೀಡೆಯಲ್ಲಿ ಹಗರಣವೊಂದು ನಡೆದಿರುವುದು ನಿಜಕ್ಕೂ ಬೇಸರ ಎಂದು ಹೇಳುವ ಮೂಲಕ ಕಾಂಗ್ರೆಸ್ಗೆ ಚಾಟಿ ಬೀಸಿದರು.
ಇದನ್ನೂ ಓದಿ PM Modi: ಕ್ರೀಡೆಯಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಯುವಕರಿಗೆ ಸರ್ಕಾರ ಸದಾ ಪ್ರೋತ್ಸಾಹ; ಪ್ರಧಾನಿ ಮೋದಿ
ನಗರ ಕ್ರೀಡಾ ಮೂಲಸೌಕರ್ಯ ಯೋಜನೆಗಳಲ್ಲಿ ಹಿಂದಿನ ಸರ್ಕಾರ ಕೇವಲ 300 ಕೋಟಿ ರೂ.ವ್ಯಯಿಸಿದೆ. ಆದರೆ ಖೇಲೋ ಇಂಡಿಯಾ ಉಪಕ್ರಮದ ಅಡಿಯಲ್ಲಿ ನಮ್ಮ ಸರ್ಕಾರವು ಸುಮಾರು 3,000 ಕೋಟಿ ರೂ.ಯೋಜನೆಗಳನ್ನು ಮಾಡಿದೆ. ಈ ಮೂಲಕ ದೇಶದಲ್ಲಿ ಕ್ರೀಡೆಯ ಬಗ್ಗೆ ಇದ್ದ ಅಸಡ್ಡೆ ಇದೀಗ ಮರೆಯಾಗಿದೆ. ಕ್ರೀಡಾಪಟುಗಳ ಅಗತ್ಯತೆಗಳ ಬಗ್ಗೆ ನಮ್ಮ ಸರ್ಕಾರ ವಿಶೇಷ ಕ್ರೀಡಾ ಅಭಿಯಾನದ ಅಡಿಯಲ್ಲಿ ದೊರಕುವಂತೆ ಮಾಡಿದೆ ಎಂದರು. ಮುಂದಿನ ಒಪಿಂಪಿಕ್ಸ್ನಲ್ಲಿ ಭಾರತ ಶ್ರೇಷ್ಠ ಸಾಧನೆ ತೋರುವ ವಿಶ್ವಾಸವಿದೆ ಎಂದು ಈ ಸಂದರ್ಭದಲ್ಲಿ ಮೋದಿ ಹೇಳಿದರು.